ADVERTISEMENT

ನಗರ ಪ್ರವೇಶಕ್ಕೆ ನೆಗೆಟಿವ್ ವರದಿ ಕಡ್ಡಾಯ: ಜಿಲ್ಲಾಧಿಕಾರಿ ಜೆ.ಮಂಜುನಾಥ್

ಅತ್ತಿಬೆಲೆ ಚೆಕ್‌ ಪೋಸ್ಟ್‌ನಲ್ಲಿ ಹೊರ ರಾಜ್ಯಗಳ ವಾಹನಗಳ ತಪಾಸಣೆ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2021, 4:54 IST
Last Updated 13 ಏಪ್ರಿಲ್ 2021, 4:54 IST
ಜಿಲ್ಲಾಧಿಕಾರಿ ಜೆ.ಮಂಜುನಾಥ್ ಹಾಗೂ ಬಯೋಕಾನ್ ಸಂಸ್ಥೆಯ ಕಿರಣ್ ಮಜುಂದಾರ್ ಶಾ ಚರ್ಚಿಸಿದರು. ಅಧಿಕಾರಿಗಳು ಇದ್ದರು.
ಜಿಲ್ಲಾಧಿಕಾರಿ ಜೆ.ಮಂಜುನಾಥ್ ಹಾಗೂ ಬಯೋಕಾನ್ ಸಂಸ್ಥೆಯ ಕಿರಣ್ ಮಜುಂದಾರ್ ಶಾ ಚರ್ಚಿಸಿದರು. ಅಧಿಕಾರಿಗಳು ಇದ್ದರು.   

ಬೆಂಗಳೂರು: ‘ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸಲು ಬೆಂಗಳೂರಿನ ಗಡಿಭಾಗ ಅತ್ತಿಬೆಲೆ ಚೆಕ್‌ ಪೋಸ್ಟ್‌ನಿಂದ ಬರುವ ಹೊರ ರಾಜ್ಯಗಳ ವಾಹನಗಳ ತಪಾಸಣೆ ನಡೆಯುತ್ತಿದ್ದು, ನಗರ ಪ್ರವೇಶಕ್ಕೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ’ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಜೆ.ಮಂಜುನಾಥ್ ತಿಳಿಸಿದರು.

ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಚೆಕ್ ಪೋಸ್ಟ್ ಹಾಗೂ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೋಮವಾರ ಭೇಟಿ ನೀಡಿದ ಅವರು, ಕೋವಿಡ್ ಲಸಿಕೆ ಸಂಗ್ರಹಣೆ ವಿಧಾನ ಹಾಗೂ ಲಸಿಕೆ ನೀಡುತ್ತಿರುವ ಕುರಿತು ಪರಿಶೀಲನೆ ನಡೆಸಿದರು.

‘ಈವರೆಗೆಕೇರಳ ರಾಜ್ಯದ 1,326 ವಾಹನಗಳನ್ನು ತಪಾಸಣೆ ಮಾಡಿ, ನೆಗೆಟಿವ್ ವರದಿ ಇಲ್ಲದಂತಹ 59 ವಾಹನಗಳು, ಮಹಾರಾಷ್ಟ್ರದಿಂದ ಬಂದ 277 ವಾಹನಗಳ ಪೈಕಿ 25 ವಾಹನಗಳನ್ನು ವಾಪಸ್ ಕಳುಹಿಸಲಾಗಿದೆ. ಇದಕ್ಕಾಗಿ ಚೆಕ್ ಫೋಸ್ಟ್‌ಗಳಲ್ಲಿ ಮೂರು ಪಾಳಿಯಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಚೆಕ್‌ಪೋಸ್ಟ್‌ ಬದಲು ಪರ್ಯಾಯ ಮಾರ್ಗಗಳ ಬಳಕೆ ತಡೆಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗುವುದು’ ಎಂದರು.

ADVERTISEMENT

ಇದಾದ ಬಳಿಕನಾರಾಯಣ ಹೃದಯಾಲಯಕ್ಕೆ ಅವರು ಭೇಟಿ ನೀಡಿದರು. ಸಂಸ್ಥೆಯ ಮುಖ್ಯಸ್ಥ ಡಾ.ದೇವಿ ಶೆಟ್ಟಿ ಅವರನ್ನು ಭೇಟಿಯಾಗಿ, ಕೋವಿಡ್ ರೋಗಿಗಳು ಹಾಗೂ ಅವರಿಗೆ ಮೀಸಲಿಟ್ಟಿರುವ ಬೆಡ್‌ಗಳ ಮಾಹಿತಿ ಪಡೆದರು.

ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಬಯೋಕಾನ್ ಸಂಸ್ಥೆಗೆ ಭೇಟಿ ನೀಡಿ, ಕೋವಿಡ್ ಲಸಿಕೆ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿದರು. ಬಯೋಕಾನ್ ಬಯೋಲಾಜಿಕ್ಸ್ ಇಂಡಿಯಾ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರುಣ್ ಚಂದಾವರ್ಕರ್ ಲಸಿಕೆ ಪಡೆದರು.

ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರೊಂದಿಗೆ ಚರ್ಚಿಸಿದರು. ‘ಬಹುತೇಕ ಸಿಬ್ಬಂದಿ ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಮನೆ ಸಮೀಪ ಇರುವ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಸಿಬ್ಬಂದಿಗೆ ಸೂಚಿಸಲಾಗಿದೆ. ಇಲ್ಲದಿದ್ದರೆ, ಸಂಸ್ಥೆಗೆ ಬಂದು ಲಸಿಕೆ ತೆಗೆದುಕೊಳ್ಳಲು ತಿಳಿಸಲಾಗಿದೆ’ ಎಂದುಕಿರಣ್ ಮಜುಂದಾರ್ ಶಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.