ADVERTISEMENT

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ: ಶಾಲಾ ಶಿಕ್ಷಕರ ವರ್ಗಾವಣೆಗೆ ತಡೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 0:19 IST
Last Updated 24 ಅಕ್ಟೋಬರ್ 2025, 0:19 IST
<div class="paragraphs"><p>ಶಿಕ್ಷಕ</p></div>

ಶಿಕ್ಷಕ

   

– ಗೆಟ್ಟಿ ಚಿತ್ರ

ಬೆಂಗಳೂರು: ಜಿಬಿಎ (ಗ್ರೇಟರ್‌ ಬೆಂಗಳೂರು ಪ್ರಾಧಿಕಾರ) ನಡೆಸುತ್ತಿರುವ ಶಾಲೆ ಹಾಗೂ ಕಾಲೇಜುಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಮತ್ತು ಉಪನ್ಯಾಸಕರನ್ನು ಅವರು ಸದ್ಯ ಕೆಲಸ ಮಾಡುತ್ತಿರುವ ಸ್ಥಳದಿಂದ ಬೇರೆಡೆ ನಿಯೋಜನೆ ಅಥವಾ ವರ್ಗಾವಣೆ ಮಾಡಬಾರದು’ ಎಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.

ADVERTISEMENT

ಈ ಸಂಬಂಧ ಮಲ್ಲೇಶ್ವರದ ಕೋದಂಡರಾಮಪುರ ಜಿಬಿಎ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸುರೇಶ್ ನಾಯಕ್‌ ಸೇರಿದಂತೆ ಒಟ್ಟು 20 ಜನ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ‘ಇಂತಹುದೇ ಹಲವು ಪ್ರಕರಣಗಳಲ್ಲಿ ಹೈಕೋರ್ಟ್‌ನ ಸಮನ್ವಯ ನ್ಯಾಯಪೀಠಗಳು, ಮಧ್ಯಂತರ ಆದೇಶ ನೀಡಿವೆ. ಹಾಗಾಗಿ, ಈ ಪ್ರಕರಣದಲ್ಲೂ ಅರ್ಜಿದಾರರಿಗೆ ಆ ಆದೇಶ ಅನ್ವಯವಾಗಲಿದೆ’ ಎಂದು ತಿಳಿಸಿತು. ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಜಿಬಿಎಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು.

ಜಿಬಿಎ ವತಿಯಿಂದ ನಗರದ ವಿವಿಧೆಡೆಯ ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಶಿಕ್ಷಕರಾಗಿ ಮತ್ತು ಉಪನ್ಯಾಸಕರಾಗಿ 2008ರಿಂದ ಸೇವೆ ಸಲ್ಲಿಸುತ್ತಿರುವವರು ಈ ಅರ್ಜಿ ಸಲ್ಲಿಸಿದ್ದಾರೆ.