
ನಮ್ಮ ಮೆಟ್ರೊ
ಬೆಂಗಳೂರು: ನಾಗರಭಾವಿ ಹೊರವರ್ತುಲ ರಸ್ತೆಯಲ್ಲಿನ ‘ನಮ್ಮ ಮೆಟ್ರೊ’ ಕಿತ್ತಳೆ ಮಾರ್ಗದಲ್ಲಿನ ಉದ್ದೇಶಿತ ಅಲೈನ್‌ಮೆಂಟ್ (ಜೋಡಣೆ) ಪ್ರಶ್ನಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಲೇವಾರಿ ಮಾಡಿದೆ.
ಈ ಸಂಬಂಧ ‘ನಾಗರಭಾವಿ ಸ್ಥಿರಾಸ್ತಿಗಳ ಮಾಲೀಕರು ಮತ್ತು ವಾಣಿಜ್ಯ ಸಂಸ್ಥೆಗಳ ಕಲ್ಯಾಣ ಸಂಘ’ದ ಕಾರ್ಯದರ್ಶಿ ಕೆ.ಗಿರೀಶ್ ಗೌಡ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
ಅರ್ಜಿದಾರರ ಪರ ಹೈಕೋರ್ಟ್ ಹಿರಿಯ ವಕೀಲ ಎ.ವಿ.ಅಮರನಾಥನ್ ಅವರ ವಾದ ಆಲಿಸಿದ ನ್ಯಾಯಪೀಠ, ‘ಮೆಟ್ರೊ ಮಾರ್ಗದ ಅಲೈನ್‌ಮೆಂಟ್ ನಿರ್ಧರಿಸುವುದು ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಆದಾಗ್ಯೂ, ಪರಿಸರದ ಮೇಲೆ ಇದರಿಂದ ಉಂಟಾಗುವ ಪರಿಣಾಮದ ಬಗ್ಗೆ ಅರ್ಜಿದಾರರು ಆಕ್ಷೇಪ ಎತ್ತಿದ್ದಾರೆ. ಹಾಗಾಗಿ, ಅವರು ನೀಡಿರುವ ಮನವಿಯನ್ನು ಪ್ರತಿವಾದಿಗಳಾದ ರಾಜ್ಯ ಸರ್ಕಾರ ಮತ್ತು ಬಿಎಂಆರ್‌ಸಿಎಲ್ ಪರಿಗಣಿಸಬೇಕು ಎಂದು ನ್ಯಾಯಪೀಠ ಹೇಳಿದೆ.
ಕೋರಿಕೆ ಏನಿತ್ತು?: ‘ಮೂಲ ಯೋಜನೆಯಂತೆ ದ್ವಾರಕಾ ನಗರ ನಿಲ್ದಾಣದಿಂದ ಚೌಡೇಶ್ವರಿ ನಗರ ನಿಲ್ದಾಣದವರೆಗೆ ಹೊರವರ್ತುಲ ರಸ್ತೆಯಲ್ಲಿ ಮೆಟ್ರೊ ನಿರ್ಮಿಸಲು ನಿರ್ದೇಶಿಸಬೇಕು. ಉದ್ದೇಶಿತ ಮೆಟ್ರೊ ಮಾರ್ಗದ ಜೋಡಣೆಯಿಂದ ನಾಗರಭಾವಿಯಲ್ಲಿನ ಹಸಿರು ಹೊದಿಕೆಯ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಈ ಮಾರ್ಗದ 600ಕ್ಕೂ ಹೆಚ್ಚು ಮರಗಳನ್ನು ಕತ್ತರಿಸಬೇಕಾಗುತ್ತದೆ ಮತ್ತು 600ಕ್ಕೂ ಅಧಿಕ ಮನೆಗಳನ್ನು ತೆರವುಗೊಳಿಸಬೇಕಾಗುತ್ತದೆ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.