ADVERTISEMENT

ಇದೇ 19 ರಿಂದ ‘ತಂತ್ರಜ್ಞಾನ ಶೃಂಗ’

ವರ್ಚುವಲ್‌ ಸಮಾರಂಭಕ್ಕೆ ಪ್ರಧಾನಿ ಮೋದಿ ಚಾಲನೆ: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 17:00 IST
Last Updated 4 ನವೆಂಬರ್ 2020, 17:00 IST
ಅಶ್ವತ್ಥನಾರಾಯಣ
ಅಶ್ವತ್ಥನಾರಾಯಣ   

ಬೆಂಗಳೂರು: ಕೋವಿಡ್‌ ಮಧ್ಯೆಯೂ ‘ಬೆಂಗಳೂರು ತಂತ್ರಜ್ಞಾನ ಶೃಂಗಸಭೆ– 2020’ (ಬೆಂಗಳೂರು ಟೆಕ್‌ ಸಮ್ಮಿಟ್) ಇದೇ 19 ರಿಂದ 21ರವರೆಗೆ ವರ್ಚುವಲ್ ಆಗಿ ನಡೆಯಲಿದ್ದು, ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಈ ಬಾರಿಯ ಶೃಂಗಸಭೆಯ ವಿಷಯ ‘ಭವಿಷ್ಯ ಈಗಲೇ’ (ನೆಕ್ಸ್ಟ್‌ ಈಸ್‌ ನೌ) ಎಂದು ನಿರ್ಧರಿಸಲಾಗಿದೆ ಎಂದು ಐಟಿ– ಬಿಟಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ವರ್ಷದಿಂದ ವರ್ಷಕ್ಕೆ ಜನಪ್ರಿಯ ವಾಗುತ್ತಿರುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯನ್ನು ಈ ಬಾರಿ ಕೋವಿಡ್‌ನಿಂದಾಗಿ ವರ್ಚುವಲ್‌ ಆಗಿ ನಡೆಸಬೇಕಾಗಿದೆ. ಆದರೂ ಜಾಗತಿಕವಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 25ಕ್ಕೂ ಹೆಚ್ಚು ದೇಶಗಳು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿವೆ ಎಂದು ಹೇಳಿದರು.

ADVERTISEMENT

‘ವಿಜ್ಞಾನ, ತಂತ್ರಜ್ಞಾನ, ಐಟಿ ಮತ್ತು ಬಿಟಿ ಕ್ಷೇತ್ರದಲ್ಲಿ ಬೆಂಗಳೂರು ಭಾರತದ ರಾಜಧಾನಿಯಾಗಿದೆ. ಮುಂದೆ ವಿಶ್ವದ ರಾಜಧಾನಿಯಾಗಬೇಕು ಎಂಬುದು ನಮ್ಮ ಕನಸು. ಅಷ್ಟೇ ಅಲ್ಲ, 2025ರ ವೇಳೆಗೆ ಕರ್ನಾಟಕದ ಆರ್ಥಿಕತೆ ಈ ಕ್ಷೇತ್ರದಲ್ಲಿ ಒಂದು ಟ್ರಿಲಿಯನ್‌ ಡಾಲರ್‌ ಗಳಿಗೆ (74.76 ಲಕ್ಷ ಕೋಟಿ) ತಲುಪಬೇಕು. ಕೃಷಿ ಕ್ಷೇತ್ರದಲ್ಲೂ ಮುಂಚೂಣಿಗೆ ಬರುವ ಮೂಲಕ ರಾಜ್ಯದ ಜಿಡಿಎಸ್‌ಪಿ ಶೇ 16ರಿಂದ ಶೇ 30ಕ್ಕೆ ತಲುಪಬೇಕು’ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ಬಯೋಕಾನ್‌ನ ಕಿರಣ್‌ ಮಜುಂದಾರ್‌ ಷಾ ಮಾತನಾಡಿ, ಈ ಬಾರಿಯ ಜೈವಿಕ ತಂತ್ರಜ್ಞಾನದ ಅಧಿವೇಶನವು ಕೃತಕ ಬುದ್ಧಿಮತ್ತೆ ಮತ್ತು ಬಿಗ್ ಡೇಟಾ ಕೇಂದ್ರೀಕೃತವಾಗಿರಲಿದೆ. ಜೈವಿಕ ಮತ್ತು ಕಂಪ್ಯೂಟರ್‌ ವಿಜ್ಞಾನ ಸಂಬಂಧಿಸಿದ ಕ್ಷೇತ್ರಗಳಲ್ಲಿನ ಅತ್ಯಾಧುನಿಕ ತಂತ್ರಜ್ಞಾನಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಸಿಆರ್‌ಐಎಸ್‌ಪಿಆರ್‌–ಕ್ಯಾಸ್‌ 9, ಜೆನೋಮಿಕ್ಸ್‌, ರೀಜನರೇಟಿವ್‌ ಬಯಾಲಜಿ ಒಳಗೊಂಡ ಜೈವಿಕ ತಂತ್ರಜ್ಞಾನ ಕುರಿತು ಅಧಿವೇಶನ ಏರ್ಪಡಿಸಲಾಗುವುದು ಎಂದು ಹೇಳಿದರು.

ಮಂಡನೆಯಾಗುವ ವಿಷಯಗಳು: ಕೃತಕ ಬುದ್ಧಿಮತ್ತೆ, ಇಂಟರ್‌ನೆಟ್‌ ಆಫ್‌ ಥಿಂಗ್ಸ್‌, ವರ್ಚುವಲ್‌ ರಿಯಾಲಿಟಿ, ವೈಮಾಂತರಿಕ್ಷ, ರಕ್ಷಣಾ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್‌ ಸೆಮಿಕಂಡಕ್ಟರ್‌, ಡಿಜಿ ಟಲ್‌, ಕೋವಿಡ್‌–19 ಪಿಡುಗು ನಿಯಂತ್ರಣದ ಸಿದ್ಧತೆ ಪ್ರಮುಖವಾದವು.

‘ಎಐ ಸಂಶೋಧನಾ ಕೇಂದ್ರ ಸ್ಥಾಪನೆ’

ಭಾರತೀಯ ವಿಜ್ಞಾನ ಸಂಸ್ಥೆ ಸಹಭಾಗಿತ್ವದಲ್ಲಿ ನಗರದಲ್ಲಿ ‘ಕೃತಕ ಬುದ್ಧಿಮತ್ತೆ ಸಂಶೋಧನಾ ಕೇಂದ್ರ’ವನ್ನು ಸ್ಥಾಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ತಿಳಿಸಿದರು.

ಮುಂಬರುವ ಸವಾಲುಗಳಿಗೆ ಪರಿಹಾರ ಕಂಡುಹಿಡಿಯಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಲಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ಹೇಳಿದರು.

ವ್ಯವಸಾಯ ಕ್ಷೇತ್ರದ ಸುಧಾರಣೆಗೆ ತಂತ್ರಜ್ಞಾನ ಪರಿಣಾಮಕಾರಿಯಾಗಿ ಬಳಸಲು ಒತ್ತು ನೀಡಲೇಬೇಕು. ರಾಜ್ಯದ ಸುಮಾರು ಶೇ 60 ರಷ್ಟು ಜನ ಬದುಕಿಗಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಒಂದೆಡೆ ಆರ್ಥಿಕತೆ ಬೆಳೆಯುತ್ತಿದ್ದರೆ, ಮತ್ತೊಂದೆಡೆ ಕೃಷಿ ಕ್ಷೇತ್ರದ ಕೊಡುಗೆ ಕಡಿಮೆಯಾಗುತ್ತಿರುವುದು ಆಲೋಚನೆಗೀಡು ಮಾಡುವ ಅಂಶವಾಗಿದೆ ಎಂದರು.

ರಾಜ್ಯದ ಜಿಡಿಪಿಗೆ ಕೃಷಿ ವಲಯದ ಕೊಡುಗೆ ಈಗ ಕೇವಲ ಶೇ 16ರಷ್ಟಿದೆ. ಮುಂದಿನ ಐದು ವರ್ಷಗಳಲ್ಲಿ ಶೇ 30 ಕ್ಕೆ ತಲುಪಿಸಬೇಕು. ಆಗ ಮಾತ್ರ ಹಳ್ಳಿಗರ ವಲಸೆ ತಪ್ಪುವ ಜೊತೆಗೆ ರಾಜ್ಯದ ಇತರ ಪ್ರದೇಶಗಳೂ ಬೆಳವಣಿಗೆ ಕಾಣುತ್ತವೆ ಎಂದು ಅಶ್ವತ್ಥ ನಾರಾಯಣ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.