ADVERTISEMENT

ಕುಣಿಗಲ್‌ ಸ್ಟಡ್‌ ಫಾರ್ಮ್‌ಗೆ ರೇಸ್‌ ಕೋರ್ಸ್‌: ಎಚ್‌.ಕೆ.ಪಾಟೀಲ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 23:36 IST
Last Updated 12 ಫೆಬ್ರುವರಿ 2026, 23:36 IST
ಎಚ್‌.ಕೆ.ಪಾಟೀಲ
ಎಚ್‌.ಕೆ.ಪಾಟೀಲ   

ಬೆಂಗಳೂರು: ‘ಬೆಂಗಳೂರು ಟರ್ಫ್‌ ಕ್ಲಬ್‌’ ಅನ್ನು ಕುಣಿಗಲ್‌ನ ಸ್ಟಡ್‌ ಫಾರ್ಮ್‌ಗೆ ಸ್ಥಳಾಂತರಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಇದಕ್ಕಾಗಿ ‘ಕುಣಿಗಲ್ ಸ್ಟಡ್‌ ಫಾರ್ಮ್‌’ನಲ್ಲಿ 110 ಎಕರೆ ಜಮೀನು ನೀಡಲಾಗುವುದು. ಸ್ಥಳಾಂತರಿಸುವುದಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಲಾಗುವುದು. ಎಷ್ಟು ಅವಧಿಯೊಳಗೆ ಸ್ಥಳಾಂತರಿಸಬೇಕು ಎಂಬ ಮಾಹಿತಿ ಅದರಲ್ಲಿ ಇರಲಿದೆ ಎಂದು ಎಚ್‌.ಕೆ.ಪಾಟೀಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಾಲಿ ಟರ್ಫ್‌ ಕ್ಲಬ್ ಜಾಗವನ್ನು ನಗರದ ಶ್ವಾಸಕೋಶ (ಲಂಗ್‌ ಸ್ಪೇಸ್‌) ಪ್ರದೇಶವನ್ನಾಗಿ ಉಳಿಸಿಕೊಳ್ಳಲಾಗುವುದು. ಕಟ್ಟಡ ಮತ್ತು ಕ್ಲಬ್‌ ಹೌಸ್‌ಗಳನ್ನು ಪಾರಂಪರಿಕ ಕಟ್ಟಡವನ್ನಾಗಿ ಉಳಿಸಿಕೊಳ್ಳಲಾಗುವುದು. ಕಟ್ಟಡಗಳು ಒಟ್ಟು ನಾಲ್ಕು ಎಕರೆಯಲ್ಲಿದೆ. ಅದನ್ನು ಟರ್ಫ್ ಕ್ಲಬ್‌ನವರಿಗೆ ನೀಡಲಾಗುವುದು ಎಂದರು.

ADVERTISEMENT

2010 ರ ಜನವರಿ 1 ರಿಂದ ಟರ್ಫ್‌ ಕ್ಲಬ್‌ನ ಬಾಡಿಗೆ ಪರಿಷ್ಕರಿಸಿಲ್ಲ. ಈ ಬಗ್ಗೆ ಆಡಿಟ್‌ ಆಕ್ಷೇಪಣೆ ಜತೆಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯಿಂದಲೂ ಆಕ್ಷೇಪಣೆ ವ್ಯಕ್ತವಾಗಿತ್ತು. ಟರ್ಫ್‌ ಕ್ಲಬ್‌ ತೆರವುಗೊಳಿಸುವಂತೆ ಸೂಚಿಸಿತ್ತು. ಆದ್ದರಿಂದ 2010 ರಿಂದ ಹಿಡಿದು ಸ್ಥಳಾಂತರಗೊಳ್ಳುವ ಅವಧಿವರೆಗೆ ವಾರ್ಷಿಕ ಆದಾಯದಲ್ಲಿ ಶೇ 2 ರಷ್ಟನ್ನು ಲೋಕೋಪಯೋಗಿ ಇಲಾಖೆಗೆ ಪಾವತಿಸಬೇಕು. ಸ್ಥಳಾಂತರಕ್ಕೆ ಸಂಬಂಧಿಸಿದ ಆದೇಶವನ್ನು ಸದ್ಯವೇ ಹೊರಡಿಸಲಾಗುವುದು ಎಂದು ಪಾಟೀಲ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.