ಬೆಂಗಳೂರು: ಕುಡಿಯುವ ನೀರಿನ ದರ ಹೆಚ್ಚಳಕ್ಕೆ ನಾಲ್ಕು ಆಯ್ಕೆಗಳಿರುವ ಪ್ರಸ್ತಾವವನ್ನು ಸರ್ಕಾರದ ಮುಂದಿಟ್ಟಿರುವ ಬೆಂಗಳೂರು ಜಲಮಂಡಳಿಯು, ಪ್ರತಿ ಲೀಟರ್‌ಗೆ 0.8 ಪೈಸೆಯಿಂದ 1.50 ಪೈಸೆ ಹೆಚ್ಚಿಸುವ ಪ್ರಸ್ತಾವ ಹೆಚ್ಚು ಸೂಕ್ತ ಎಂಬ ಅಭಿಪ್ರಾಯವನ್ನೂ ನೀಡಿದೆ. ಈ ಆಯ್ಕೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡುವ ಸಾಧ್ಯತೆಯಿದೆ.
ಸದ್ಯದ ನೀರಿನ ದರದಿಂದ ತಿಂಗಳಿಗೆ ₹119.60 ಕೋಟಿಯಂತೆ ವಾರ್ಷಿಕ ₹1,435.20 ಕೋಟಿ ಸಂಗ್ರಹವಾಗುತ್ತಿದೆ. ಮಂಡಳಿಗೆ ವರ್ಷಕ್ಕೆ ಸದ್ಯ ₹1 ಸಾವಿರ ಕೋಟಿ ನಷ್ಟವಾಗುತ್ತಿದೆ. ರಾಜ್ಯ ಸರ್ಕಾರ ನಾಲ್ಕನೇ ಆಯ್ಕೆಗೆ ಅನುಮೋದನೆ ನೀಡಿದರೆ ತಿಂಗಳಿಗೆ ₹207.29 ಕೋಟಿಯಂತೆ ವಾರ್ಷಿಕ ಒಟ್ಟು ₹2,487.48 ಕೋಟಿ ಸಂಗ್ರಹವಾಗಲಿದೆ ಎಂದು ಪ್ರಸ್ತಾವದಲ್ಲಿ ಮಂಡಳಿ ಹೇಳಿದೆ. ಇದರಿಂದ ವಾರ್ಷಿಕ ₹1,052.28 ಕೋಟಿ ಹೆಚ್ಚುವರಿ ಸಂಗ್ರಹ ಆಗಲಿದೆ.
ಮಂಡಳಿಯ ಅಧಿಕಾರಿಗಳ ಜೊತೆ ಇತ್ತೀಚೆಗೆ ಸಭೆ ನಡೆಸಿದ್ದ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಕುಡಿಯುವ ನೀರಿನ ದರ ಹೆಚ್ಚಿಸಲು ನಿರ್ಧರಿಸಲಾಗಿದೆ. ದರ ಹೆಚ್ಚಳ ಪ್ರಮಾಣವನ್ನು ಅಧಿಕಾರಿಗಳು ನೀಡುವ ವರದಿ ಆಧಾರದಲ್ಲಿ ತೀರ್ಮಾನಿಸಲಾಗುವುದು’ ಎಂದು ಹೇಳಿದ್ದರು.
ಮಂಡಳಿಯು ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವವನ್ನು ಅನುಮೋದನೆಗಾಗಿ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ ಅವರು ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲಿಸಿದ್ದಾರೆ.
‘ಮಂಡಳಿಯ ಸದ್ಯದ ತಿಂಗಳ ವೆಚ್ಚ ಪರಿಗಣಿಸಿದರೆ, ನೀರಿನ ದರವನ್ನು ಪ್ರತಿ ಲೀಟರ್‌ಗೆ 0.8 ಪೈಸೆಯಿಂದ 1.50 ಪೈಸೆ ಹೆಚ್ಚಿಸುವುದು ಹೆಚ್ಚು ಸೂಕ್ತವಾಗಿದೆ. ನೀರಿನ ದರ ಹೆಚ್ಚಳವು ಹೊಸ ಯೋಜನೆಗಳಿಗೆ ಅಗತ್ಯವಾದ ಹಣಕಾಸು ನೆರವು ನೀಡಲು, ಸ್ಮಾರ್ಟ್ ಮೀಟರ್ ಅಳವಡಿಸಲು, ನೀರು ಪೂರೈಕೆಯ ಹಳೆ ಕೊಳವೆಗಳನ್ನು ಬದಲಿಸಲು, ಹೊಸತಾಗಿ ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು, ಮೂಲಸೌಕರ್ಯಗಳನ್ನು ಉನ್ನತೀಕರಿಸಲು, ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ ನಿಯಂತ್ರಿಸಲು (ಯುಎಫ್‌ಡಬ್ಲ್ಯು) ನೆರವಾಗಲಿದೆ’ ಎಂದು ಪ್ರಸ್ತಾವದಲ್ಲಿ ಉಲ್ಲೇಖಿಸಲಾಗಿದೆ.
‘ಮಂಡಳಿಯ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಪ್ರತಿ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ನೀರಿನ ದರವನ್ನು ಶೇ 3ರಷ್ಟು ಹೆಚ್ಚಿಸುವಂತೆ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅಧ್ಯಕ್ಷತೆಯ ಆಡಳಿತ ಸುಧಾರಣಾ ಆಯೋಗವು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈ ಶಿಫಾರಸನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ’ ಎಂದೂ ಪ್ರಸ್ತಾವದಲ್ಲಿ ವಿವರಿಸಲಾಗಿದೆ.
‘ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವ ಜೊತೆಗೆ ಹೆಚ್ಚುತ್ತಿರುವ ನಿರ್ವಹಣಾ ವೆಚ್ಚವನ್ನು ಭರಿಸಲು ನೀರಿನ ದರ ಹೆಚ್ಚಿಸಬೇಕಾದ ಅನಿವಾರ್ಯ ಇದೆ. ಮುಂಬೈ ಮತ್ತು ಚೆನ್ನೈ ನಗರ ಸೇರಿದಂತೆ ಇತರ ನಗರಗಳಲ್ಲಿನ ಕುಡಿಯುವ ನೀರಿನ ದರಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ವಿಧಿಸುವ ನೀರಿನ ದರವು ಅತಿ ಕಡಿಮೆ ಇದೆ. ನೀರು ಸರಬರಾಜು ಅಗತ್ಯ ಸೇವೆಯಾಗಿದ್ದು, ಅದನ್ನು ಸಮರ್ಪಕವಾಗಿ ನಿರ್ವಹಿಸಲು ನೀರಿನ ದರವನ್ನು ಹೆಚ್ಚಿಸಲೇಬೇಕಿದೆ’ ಎಂದೂ ಮಂಡಳಿಯು ಸಮರ್ಥನೆ ನೀಡಿದೆ.
ನೀರಿನ ದರ ಏರಿಕೆಗೆ ಜಲಮಂಡಳಿ ಅಧಿಕಾರಿಗಳಿಂದ ಪ್ರಸ್ತಾವ ಸಲ್ಲಿಕೆ ಆಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು.ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.