ADVERTISEMENT

ಬಂಜಾರರ ಮನೆ–ಮನೆ ಸಮೀಕ್ಷೆಗೆ ಕರ್ನಾಟಕ ಬಂಜಾರ ಮಹಾಸಭಾ ಮನವಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2025, 14:39 IST
Last Updated 6 ಫೆಬ್ರುವರಿ 2025, 14:39 IST
<div class="paragraphs"><p>ನ್ಯಾ. ನಾಗಮೋಹನ್ ದಾಸ್</p></div>

ನ್ಯಾ. ನಾಗಮೋಹನ್ ದಾಸ್

   

ಬೆಂಗಳೂರು: ‘ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸುವ ಸಲುವಾಗಿ ಬಂಜಾರ ಸಮುದಾಯದ ಜನಸಂಖ್ಯೆ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಸ್ಥಿತಿಗತಿಯನ್ನು ಅರಿತುಕೊಳ್ಳಲು ಮನೆ–ಮನೆ ಸಮೀಕ್ಷೆ ನಡೆಸಬೇಕು’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್ ದಾಸ್‌ ನೇತೃತ್ವದ ವಿಚಾರಣಾ ಆಯೋಗಕ್ಕೆ ಕರ್ನಾಟಕ ಬಂಜಾರ ಮಹಾಸಭಾವು ಮನವಿ ಸಲ್ಲಿಸಿದೆ.

ಸಮುದಾಯದ ಮುಖಂಡ ಹಾಗೂ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್‌.ಜಯದೇವ ನಾಯ್ಕ, ಬಿ.ಟಿ.ಲಲಿತಾ ನಾಯಕ್‌, ಪ್ರಕಾಶ್‌ ರಾಥೋಡ್, ಚಂದ್ರ ಲಮಾಣಿ, ಅನಂತ ನಾಯ್ಕ್‌ ಅವರಿದ್ದ ನಿಯೋಗವು ವಿಚಾರಣಾ ಆಯೋಗದ ಅಧ್ಯಕ್ಷರನ್ನು ಗುರುವಾರ ಭೇಟಿ ಮಾಡಿ, ಮನವಿ ಸಲ್ಲಿಸಿತು.

ADVERTISEMENT

‘ಪರಿಶಿಷ್ಟ ಜಾತಿಗಳಲ್ಲಿ ಉಪ–ವರ್ಗೀಕರಣ ಮಾಡಲು ವಾಸ್ತವಿಕ ದತ್ತಾಂಶ ಮತ್ತು ಸಮುದಾಯಗಳ ಅಂತರ್‌ ಹಿಂದುಳಿದಿರುವಿಕೆ ದತ್ತಾಂಶಗಳನ್ನು ಬಳಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿದೆ. ಆದರೆ, ಈ ಎರಡೂ ದತ್ತಾಂಶಗಳು ಯಾವುವು ಎಂಬುದನ್ನು ವ್ಯಾಖ್ಯಾನಿಸಿಲ್ಲ. ಇದನ್ನು ಸ್ಪಷ್ಟಪಡಿಸಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕು’ ಎಂದು ನಿಯೋಗವು ಕೋರಿದೆ.

‘ಬಂಜಾರ ಸಮುದಾಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಕಲೆಹಾಕಲು ಮನೆ–ಮನೆ ಸಮೀಕ್ಷೆ ನಡೆಸಬೇಕು. ಇಲ್ಲವೇ ಕೇಂದ್ರ ಸರ್ಕಾರವು ನಡೆಸಲಿರುವ ಜನಗಣತಿಯಲ್ಲೇ ಸಂಬಂಧಿತ ಮಾಹಿತಿಗಳನ್ನು ಕಲೆಹಾಕಲು ವ್ಯವಸ್ಥೆ ರೂಪಿಸಬೇಕು. ಪರಿಶಿಷ್ಟ ಜಾತಿಗಳಲ್ಲೇ ಉಪ–ವರ್ಗೀಕರಣ ಮಾಡಲು ಅವಶ್ಯವಾಗಿರುವ ದತ್ತಾಂಶಗಳನ್ನು ಜನಗಣತಿ ವರದಿ ಆಧಾರದಲ್ಲಿ ಸಿದ್ಧಪಡಿಸಿಕೊಳ್ಳಬೇಕು’ ಎಂದು ಮನವಿ ಮಾಡಿಕೊಂಡಿದೆ.

‘ಏಕಸದಸ್ಯ ವಿಚಾರಣಾ ಆಯೋಗವು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿಲು ನೀಡಿರುವ ಅವಧಿಯನ್ನು ಇನ್ನೂ ಮೂರು ತಿಂಗಳು ವಿಸ್ತರಿಸಬೇಕು. ಅಗತ್ಯ ದತ್ತಾಂಶಗಳು ಲಭ್ಯವಾಗುವವರೆಗೆ ಯಾವುದೇ ನಿರ್ಧಾರ ಮಾಡಬಾರದು’ ಎಂದೂ ಕೋರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.