ADVERTISEMENT

ಬ್ಯಾಂಕ್‌ಗಳಿಂದ ಸರ್ಕಾರಿ ನೌಕರರಿಗೆ ಆಕರ್ಷಕ ‘ವೇತನ ಪ್ಯಾಕೇಜ್‌’

₹1 ಕೋಟಿ ವಿಮೆ, ಒ.ಡಿ ಸೌಲಭ್ಯ

ಚಂದ್ರಹಾಸ ಹಿರೇಮಳಲಿ
Published 26 ಮಾರ್ಚ್ 2025, 0:30 IST
Last Updated 26 ಮಾರ್ಚ್ 2025, 0:30 IST
<div class="paragraphs"><p>ರೂಪಾಯಿ&nbsp;</p></div>

ರೂಪಾಯಿ 

   

(ಐಸ್ಟೋಕ್ ಚಿತ್ರ)

ಬೆಂಗಳೂರು: ಸರ್ಕಾರಿ ನೌಕರರು ಯಾವುದೇ ಕಂತು ಪಾವತಿಸದಿದ್ದರೂ ಇನ್ನು ಮುಂದೆ ₹1 ಕೋಟಿವರೆಗೆ ಅಪಘಾತ ವಿಮಾ ಪರಿಹಾರ, ವೇತನ ವಿಳಂಬವಾದರೆ ಒವರ್‌ ಡ್ರಾಪ್ಟ್‌ ಸೌಲಭ್ಯ ಪಡೆಯಲಿದ್ದಾರೆ.

ADVERTISEMENT

ವೇತನ ಖಾತೆ ಹೊಂದಿರುವ ಸರ್ಕಾರಿ ನೌಕರರಿಗೆ ರಾಷ್ಟ್ರೀಕೃತ ಹಾಗೂ ರಾಷ್ಟ್ರಮಟ್ಟದ ಖಾಸಗಿ ಬ್ಯಾಂಕ್‌ಗಳು ವೇತನ ಸೌಲಭ್ಯ ಪ್ಯಾಕೇಜ್‌ ಗಳನ್ನು ಒದಗಿಸುವುದನ್ನು ಕಡ್ಡಾಯಗೊಳಿಸ
ಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸಲ್ಲಿಸಿದ್ದ ಪ್ರಸ್ತಾವಕ್ಕೆ ಸಂಪುಟ ಸಭೆ ಈಚೆಗೆ ಅನುಮೋದನೆ ನೀಡಿತ್ತು.

ನಂತರ ‘ನೌಕರರು ಮತ್ತು ಅವರ ಅವಲಂಬಿತ ಸದಸ್ಯರ ಹಿತಾಸಕ್ತಿ ರಕ್ಷಣೆ’ ಕುರಿತು ಆರ್ಥಿಕ ಇಲಾಖೆ ಆದೇಶ ಹೊರಡಿಸಿತ್ತು. ಆದೇಶ ಹೊರಬಿದ್ದ ಬೆನ್ನಲ್ಲೇ ಹಲವು ಬ್ಯಾಂಕ್‌ಗಳು ಆಕರ್ಷಕ ವೇತನ ಪ್ಯಾಕೇಜ್‌ ಸೌಲಭ್ಯಗಳನ್ನು ಘೋಷಿಸಿವೆ. ನೌಕರರು ತಾವು ಪ್ರತಿ ತಿಂಗಳು ವೇತನ ಪಡೆಯುವ ಬ್ಯಾಂಕ್‌ಗಳ ಮೂಲಕ ಅಪಘಾತ ವಿಮಾ ಸೌಲಭ್ಯ ಸೇರಿದಂತೆ ವಿವಿಧ ವೇತನ ಪ್ಯಾಕೇಜ್‌ ಸೌಲಭ್ಯ ಪಡೆಯಬಹುದು. ಈಗ ವೇತನ ಖಾತೆ ಹೊಂದಿರುವ ಬ್ಯಾಂಕ್‌ಗಳಲ್ಲಿ ಇರುವ ಸೌಲಭ್ಯಗಳು ತೃಪ್ತಿಕರವಾಗಿರದಿದ್ದರೆ ಯಾವ ಬ್ಯಾಂಕ್‌ಗಳು ಹೆಚ್ಚಿನ ಆಕರ್ಷಕ ಪ್ಯಾಕೇಜ್‌ಗಳನ್ನು ನೀಡುತ್ತವೆಯೋ ಅಂತಹ ಬ್ಯಾಂಕ್‌ಗಳಿಗೆ ತಮ್ಮ ವೇತನ ಖಾತೆಗಳನ್ನು ವರ್ಗಾವಣೆ ಮಾಡಿಕೊಳ್ಳಬಹುದು.

ಹೊಸದಾಗಿ ವೇತನ ಖಾತೆ ತೆರೆಯುವ, ಖಾತೆ ವರ್ಗಾವಣೆ ಮಾಡಿಕೊಳ್ಳುವ ನೌಕರರು ಆ ಬ್ಯಾಂಕ್‌ಗಳು ನೀಡುವ ವೇತನ ಪ್ಯಾಕೇಜ್‌ ಸೌಲಭ್ಯ ಪಡೆಯಲು ಕನಿಷ್ಠ ಮೂರು ತಿಂಗಳು ಕಾಯಬೇಕು. ಈಗಾಗಲೇ ವೇತನ ಖಾತೆ ಇರುವ ಬ್ಯಾಂಕ್‌ಗಳಲ್ಲಿ ತಕ್ಷಣವೇ ಸೌಲಭ್ಯ ದೊರಕಲಿದೆ.

ವೇತನ ವಿಳಂಬಕ್ಕೆ ಸಹಾಯಹಸ್ತ:

ಕೆಲವು ಇಲಾಖೆಗಳ ನೌಕರರಿಗೆ ತಿಂಗಳ ವೇತನದಲ್ಲಿ ವ್ಯತ್ಯಯವಾಗುತ್ತದೆ. ವರ್ಗಾವಣೆ, ಅನುದಾನ ಬಿಡುಗಡೆ, ಆದಾಯ ತೆರಿಗೆ ಕಟಾವಾಗುವ ಹಣಕಾಸು ವರ್ಷದ ಅಂತ್ಯದ ತಿಂಗಳು ಸೇರಿದಂತೆ ಹಲವು ಬಾರಿ ವೇತನ ವಿಳಂಬವಾಗುತ್ತದೆ. ಇಂತಹ ಸಮಯದಲ್ಲಿ ಮನೆ ಬಾಡಿಗೆ, ದಿನಸಿ ಮತ್ತಿತರ ಖರ್ಚುಗಳನ್ನು ನಿಭಾಯಿಸಲು ಪರದಾಟ ಸಾಮಾನ್ಯ. ಈ ಸಮಸ್ಯೆಗೆ ಬ್ಯಾಂಕ್‌ಗಳು ಪರಿಹಾರ ದೊರಕಿಸಿದ್ದು, ನೌಕರರು ತಾವು ಪಡೆಯುತ್ತಿರುವ ತಿಂಗಳ ನಿವ್ವಳ ವೇತನದ ಮೂರುಪಟ್ಟು ಮೊತ್ತವನ್ನು ಒವರ್‌ ಡ್ರಾಫ್ಟ್‌ ಮೂಲಕ ಪಡೆಯಬಹುದು. 

ವೇತನ ಪ್ಯಾಕೇಜ್‌ ಕಡ್ಡಾಯ ಗೊಳಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಈ ಆದೇಶದಿಂದ ನೌಕರರು, ನಿವೃತ್ತರೂ ಸೇರಿದಂತೆ 11 ಲಕ್ಷ ಕುಟುಂಬಗಳಿಗೆ ವರವಾಗಲಿದೆ
ಸಿ.ಎಸ್‌. ಷಡಾಕ್ಷರಿ, ರಾಜ್ಯಾಧ್ಯಕ್ಷ, ಸರ್ಕಾರಿ ನೌಕರರ ಸಂಘ
ಎಲ್ಲ ನೌಕರರೂ 3 ತಿಂಗಳ ಒಳಗೆ ವೇತನ ಪ್ಯಾಕೇಜ್‌ ಖಾತೆ ತೆರೆಯುವುದನ್ನು ಕಡ್ಡಾಯ ಮಾಡಲಾಗಿದೆ. ಇಲ್ಲದಿದ್ದರೆ ಆಯಾ ಇಲಾಖೆಗಳ ಮುಖ್ಯಸ್ಥರೇ ಹೊಣೆ
ಆರ್‌.ವಿಶಾಲ್‌, ಕಾರ್ಯದರ್ಶಿ ಆರ್ಥಿಕ ಇಲಾಖೆ

ವೇತನ ಶ್ರೇಣಿಯೇ ಮಾನದಂಡ 

ವಿವಿಧ ಬ್ಯಾಂಕ್‌ಗಳು ಘೋಷಿಸಿರುವ ಪ್ಯಾಕೇಜ್‌ಗಳು ಸರ್ಕಾರಿ ನೌಕರರು ಪಡೆಯುವ ವೇತನ ಶ್ರೇಣಿ ಅವಲಂಭಿಸಿವೆ. ₹1 ಲಕ್ಷಕ್ಕಿಂತ ಅಧಿಕ ವೇತನ ಪಡೆಯುವವರಿಗೆ ₹1 ಕೋಟಿ ಅಪಘಾತ ವಿಮಾ ರಕ್ಷಣೆ ದೊರಕಲಿದೆ. ರಸ್ತೆ ಅಪಘಾತ, ವಿಮಾನ ಅಪಘಾತದ ಸಾವು, ಶಾಶ್ವತ ಅಥವಾ ಭಾಗಶಃ ಅಂಗವೈಕಲ್ಯಕ್ಕೆ ಒಳಗಾದರೂ ಅಷ್ಟೆ ಮೊತ್ತದ ವಿಮಾ ಸೌಲಭ್ಯ ನೀಡಲಾಗುತ್ತದೆ. ₹50 ಸಾವಿರದವರೆಗೆ ವೇತನ ಪಡೆಯುವವರಿಗೆ ₹50 ಲಕ್ಷ ಸಿಗಲಿದೆ. ಆಂಬುಲೆನ್ಸ್‌ ಸೇವೆಗೆ ₹15 ಸಾವಿರ, ಮಕ್ಕಳ ಉನ್ನತ ಶಿಕ್ಷಣಕ್ಕೆ ₹5 ಲಕ್ಷ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರತ್ಯೇಕ ₹5 ಲಕ್ಷ ನೆರವು ದೊರಕಲಿದೆ.

ಏನೇನು ಸೌಲಭ್ಯ?

*ಶೂನ್ಯ ಕನಿಷ್ಠ ಶಿಲ್ಕು

*ಸಾಲದ ಮೇಲೆ ಪ್ರಕ್ರಿಯಾ ಶುಲ್ಕವಿಲ್ಲ

*ಡೆಬಿಟ್‌ ಕಾರ್ಡ್‌ಗೆ ವಾರ್ಷಿಕ ನಿರ್ವಹಣಾ ಶುಲ್ಕ ಇಲ್ಲ

*ವರ್ಷಕ್ಕೆ 200 ಚೆಕ್‌ಲೀಫ್ ಉಚಿತ

*ಕ್ರೆಡಿಟ್ ಕಾರ್ಡ್‌ ಉಚಿತ ವಿತರಣೆ

*ಪ್ರಯಾಣದ ವೇಳೆ ಸಾಮಗ್ರಿಗಳಿಗೆ ರಕ್ಷಣೆ

*ಲಾಕರ್‌ ಬಾಡಿಗೆಯಲ್ಲಿ ರಿಯಾಯಿತಿ

*ದಂಪತಿ, ಮಕ್ಕಳಿಗೂ ಶೂನ್ಯ ಶಿಲ್ಕು ಸೌಲಭ್ಯ

*ಡಿಮ್ಯಾಟ್‌ನಲ್ಲಿ ಉಚಿತವಾಗಿ ಖಾತೆ

*ಹಣ ವರ್ಗಾವಣೆಯ ಶುಲ್ಕ ಮನ್ನಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.