ADVERTISEMENT

ಬ್ಯಾಂಕ್‌ಗಳಿಗೆ ವಂಚನೆ: ಆರೋಪಿಗಳ ಮನೆಯಲ್ಲಿ ಸಿಬಿಐ ಶೋಧ

ಬ್ಯಾಂಕ್‌ಗಳಿಗೆ ₹ 200 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 19:34 IST
Last Updated 14 ಜನವರಿ 2021, 19:34 IST

ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಇಂಡಿಯನ್‌ ಬ್ಯಾಂಕ್‌ ಮತ್ತು ವಿಜಯ ಬ್ಯಾಂಕ್‌ಗೆ ₹ 200.38 ಕೋಟಿ ವಂಚಿಸಿರುವ ಆರೋಪದ ಮೇಲೆ ನಗರದ ಸ್ಟೀಲ್‌ ಹೈಪರ್‌ ಮಾರ್ಟ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ವಿರುದ್ಧ ಪ್ರಕರಣ ದಾಖಲಿಸಿರುವ ಸಿಬಿಐ, ಕಂಪನಿಯ ನಿರ್ದೇಶಕರು ಮತ್ತು ಲೆಕ್ಕಪರಿಶೋಧಕರ ಮನೆಗಳ ಮೇಲೆ ಬುಧವಾರ ದಾಳಿಮಾಡಿ, ಶೋಧ ನಡೆಸಿದೆ.

2017ರಿಂದ 2019ರ ನಡುವಿನ ಅವಧಿಯಲ್ಲಿ ಇಂಡಿಯನ್‌ ಬ್ಯಾಂಕ್‌ನಿಂದ ₹ 168.39 ಕೋಟಿ ಮತ್ತು ವಿಜಯ ಬ್ಯಾಂಕ್‌ನಿಂದ
₹ 31.99 ಕೋಟಿ ಸಾಲ ಪಡೆದು, ಮರುಪಾವತಿಸದೇ ವಂಚಿಸಿರುವ ಆರೋಪದಡಿ ಸ್ಟೀಲ್‌ ಹೈಪರ್‌ ಮಾರ್ಟ್‌ ಕಂಪನಿಯ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿದೆ. ಕಂಪನಿಯ ವಹಿವಾಟು, ಆರ್ಥಿಕ ಸಾಮರ್ಥ್ಯದ ಕುರಿತು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಸಾಲ ಪಡೆದಿರುವ ಆರೋಪವೂ ಇದೆ.

ಬೆಂಗಳೂರು ಮತ್ತು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಶೂಲಗಿರಿಯ ಹಲವೆಡೆ ಶೋಧ ನಡೆಸಲಾಗಿದೆ. ಕಂಪನಿಯ ನಿರ್ದೇಶಕರಾದ ಮಹೇಂದ್ರಕುಮಾರ್‌ ಸಿಂಘಿ, ಸುಮನ್‌ ಮಹೇಂದ್ರಕುಮಾರ್‌ ಸಿಂಘಿ, ಲೆಕ್ಕಪರಿಶೋಧಕ ಮುಖೇಶ್‌ ಸುರಾನಾ ಮನೆಗಳಲ್ಲಿ ಶೋಧ ನಡೆಸಲಾಗಿದೆ. ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ತಿಳಿಸಿದೆ.

ADVERTISEMENT

ಕಂಪನಿಯ ನಿರ್ದೇಶಕರು ಮತ್ತು ಲೆಕ್ಕಪರಿಶೋಧಕರು ಸಂಚು ನಡೆಸಿ, ವಹಿವಾಟಿನ ಕುರಿತು ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದರು. ಉತ್ಪ್ರೇಕ್ಷಿತ ವರದಿಗಳ ಆಧಾರದಲ್ಲಿ ಬೃಹತ್‌ ಪ್ರಮಾಣದ ಸಾಲ ಪಡೆಯಲಾಗಿತ್ತು. ಈ ಮೊತ್ತವನ್ನು ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ವಂಚಿಸಲಾಗಿದೆ. ಕಂಪನಿಯ ನಿರ್ದೇಶಕರು, ಲೆಕ್ಕಪರಿಶೋಧಕ, ಬ್ಯಾಂಕ್‌ ನೌಕರರ ವಿರುದ್ಧ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.