ADVERTISEMENT

ಬೆಳಗಾವಿ| ನೆರೆ ಸಂತ್ರಸ್ತರಿಗೆ ಬ್ಯಾಂಕ್‌ ನೋಟಿಸ್ ‘ಬರಸಿಡಿಲು’

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 19:30 IST
Last Updated 27 ಡಿಸೆಂಬರ್ 2019, 19:30 IST
ರಾಮದುರ್ಗ ತಾಲ್ಲೂಕು ಹಂಪಿಹೊಳಿ ಗ್ರಾಮದ ನೆರೆ ಸಂತ್ರಸ್ತರು ತಮಗೆ ಬ್ಯಾಂಕ್‌ಗಳಿಂದ ಬಂದಿರುವ ನೋಟಿಸ್‌ಗಳನ್ನು ತೋರಿಸುತ್ತಿದ್ದಾರೆ
ರಾಮದುರ್ಗ ತಾಲ್ಲೂಕು ಹಂಪಿಹೊಳಿ ಗ್ರಾಮದ ನೆರೆ ಸಂತ್ರಸ್ತರು ತಮಗೆ ಬ್ಯಾಂಕ್‌ಗಳಿಂದ ಬಂದಿರುವ ನೋಟಿಸ್‌ಗಳನ್ನು ತೋರಿಸುತ್ತಿದ್ದಾರೆ   

ಬೆಳಗಾವಿ: ಮಲಪ್ರಭಾ ನದಿ ಪ್ರವಾಹದಿಂದ ಸಂತ್ರಸ್ತರಾಗಿ ಹೊಸ ಬದುಕು ರೂಪಿಸಿಕೊಳ್ಳಲು ಹೆಣಗಾಡುತ್ತಿರುವ ರಾಮದುರ್ಗ ತಾಲ್ಲೂಕಿನ ಹಿರೇಹಂಪಿಹೊಳಿ ಗ್ರಾಮದಲ್ಲಿ ನಿವಾಸಿಗಳಿಗೆ, ಖಾಸಗಿ ಬ್ಯಾಂಕ್‌ಗಳು ಹಾಗೂ ಫೈನಾನ್ಸ್‌ನವರು ಸಾಲ ಮರು ಪಾವತಿಸುವಂತೆ ಎಚ್ಚರಿಕೆಯ ನೋಟಿಸ್‌ಗಳನ್ನು ಕಳುಹಿಸುತ್ತಿರುವುದು ಬರಸಿಡಿಲು ಬಡಿದಂತಾಗಿದೆ.

ಮಹಿಳೆಯರು ಸ್ವಸಹಾಯ ಸಂಘಗಳಿಂದ, ಪುರುಷರು ವಿವಿಧ ಪೈನಾನ್ಸ್‌ನಲ್ಲಿ ಸಾಲ ಮಾಡಿ ಕೃಷಿ ಮತ್ತು ಹೈನುಗಾರಿಕೆಗೆ ಬಳಸಿಕೊಂಡಿದ್ದರು. ಹಲವು ವರ್ಷಗಳಿಂದ ಸಾಲ ಪಾವತಿಸಿದ್ದಾರೆ. ಆದರೆ, 4 ತಿಂಗಳ ಹಿಂದೆ ಮಲಪ್ರಭಾ ನದಿಯ ಪ್ರವಾಹಕ್ಕೆ ಸಿಕ್ಕು ಈ ಗ್ರಾಮದ ಜನರ ಬದುಕು ಬೀದಿಗೆ ಬಂದಿದೆ. ಬರೋಬ್ಬರಿ 3 ಬಾರಿ ಬಂದೆರಗಿದ ಭಾರಿ ಪ್ರವಾಹದಿಂದ ಇಡೀ ಗ್ರಾಮ ಸಂಪೂರ್ಣವಾಗಿ ಮುಳುಗಡೆಯಾಗಿತ್ತು. ಎರಡು ತಿಂಗಳುಗಳಿಗಿಂತಲೂ ಹೆಚ್ಚು ಸಮಯ ಅಲ್ಲಿನ ಜನರು ಸುರೇಬಾನದ ಕಾಳಜಿ ಕೇಂದ್ರದಲ್ಲಿ ವಾಸವಿದ್ದರು. ಬಳಿಕ ಗ್ರಾಮಕ್ಕೆ ವಾಪಸ್‌ ಬಂದಿದ್ದಾರೆ. ಮನೆಗಳನ್ನು ದುರಸ್ತಿ ಮಾಡಿಕೊಂಡು, ಬದುಕು ಕಟ್ಟಿಕೊಳ್ಳಲು ಪರದಾಡುತ್ತಿರುವ ಅವರಿಗೆ, ಖಾಸಗಿ ಬ್ಯಾಂಕ್‌ಗಳು ಹಾಗೂ ಫೈನಾನ್ಸ್‌ ಕಂಪನಿಗಳವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

‘ಸಾಲ ಪಾವತಿಸದಿದ್ದಲ್ಲಿ ಮನೆಗೆ ಬೀಗ ಹಾಕಿ ಜಪ್ತಿ ಮಾಡಬೇಕಾಗುತ್ತದೆ ಎಂದು ಜಮೀನುಗಳ ಬಳಿಗೂ ಬಂದು ಬೆದರಿಕೆ ಹಾಕುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡಿದ್ದಾರೆ.

ADVERTISEMENT

‘ಗ್ರಾಮದಲ್ಲಿ 134 ಮನೆಗಳು ಬಿದ್ದಿವೆ. ಈವರೆಗೆ, 34 ಮನೆಗಳಿಗೆ ಮಾತ್ರವೇ ಪರಿಹಾರದ ಹಣ ಬಿಡುಗಡೆಯಾಗಿದೆ. ಬೆಳೆ ಪರಿಹಾರ ಸೇರಿ ಇತರ ಯಾವುದೇ ಪರಿಹಾರ ಬಂದಿಲ್ಲ. ಎಷ್ಟೇ ಜಮೀನು ಇದ್ದರೂ ಬೇರೆ ಊರಿಗೆ ಕೂಲಿಗೆ ಹೋಗುವ ಸ್ಥಿತಿ ಬಂದಿದೆ. ಹೀಗಿರುವಾಗ, ಬ್ಯಾಂಕ್‌ ನೋಟಿಸ್‌ಗಳು ಬರುತ್ತಿವೆ. ಕೆಲವು ಬ್ಯಾಂಕ್‌ನವರು ವಕೀಲರ ಮೂಲಕ ಲೀಗಲ್‌ ನೋಟಿಸ್ ಕೂಡ ಕಳುಹಿಸುತ್ತಿವೆ. ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಬಗ್ಗೆ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ತಿಳಿಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ‘ಸಂತ್ರಸ್ತರು ನಿರ್ದಿಷ್ಟ ದೂರುಗಳಿದ್ದರೆ ಸಲ್ಲಿಸಿದರೆ ಪರಿಶೀಲಿಸಲಾಗುವುದು. ಸಂತ್ರಸ್ತರಾಗಿರುವವರಿಂದ ಸಾಲ ವಸೂಲಿ ಮುಂದೂಡುವಂತೆ ಸಂಬಂಧಿಸಿದ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.