ADVERTISEMENT

ಆಯ್ಕೆಗಿಲ್ಲ ಶೋಧನಾ ಸಮಿತಿ: ಅರ್ಹತೆಯೇ ಚರ್ಚೆ!

ಪ್ರಾಧಿಕಾರ– ಅಕಾಡೆಮಿಗಳ ಅಧ್ಯಕ್ಷ, ಸದಸ್ಯರ ನೇಮಕ: ಮುಂದುವರಿದ ಅಪಸ್ವರ

ಹರ್ಷವರ್ಧನ ಪಿ.ಆರ್.
Published 17 ಅಕ್ಟೋಬರ್ 2019, 19:45 IST
Last Updated 17 ಅಕ್ಟೋಬರ್ 2019, 19:45 IST
ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ   

ಮಂಗಳೂರು: ಅಕಾಡೆಮಿ– ಪ್ರಾಧಿಕಾರಗಳ ಅಧ್ಯಕ್ಷ ಮತ್ತು ಸದಸ್ಯರ ಆಯ್ಕೆಗೆ ಅರ್ಹತೆಗಳೇನು? ಎಂಬ ಚರ್ಚೆ ಶುರುವಾಗಿದ್ದು, ‘ಶೋಧನಾ ಸಮಿತಿ ರಚಿಸದಿರುವುದೇ ಗೊಂದಲಗಳಿಗೆ ಕಾರಣ’ ಎಂದು ರಾಜ್ಯ ಸರ್ಕಾರದ ಸಾಂಸ್ಕೃತಿಕ ನೀತಿ ರೂಪಿಸಿದ್ದ ಸಮಿತಿಯ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಪ್ರತಿಕ್ರಿಯಿಸಿದ್ದಾರೆ.

ರಾಜ್ಯ ಸರ್ಕಾರವು ಮೂರು ಪ್ರಾಧಿಕಾರ ಹಾಗೂ 13 ಅಕಾಡೆಮಿಗಳಿಗೆ ನೇಮಕ ಮಾಡಿದ ಬೆನ್ನಲ್ಲೇ ಎದ್ದಿರುವ ಅಸಮಾಧಾನಗಳ ಕುರಿತು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

‘2017ರ ಅಕ್ಟೋಬರ್‌ನಲ್ಲಿ ರಾಜ್ಯ ಸರ್ಕಾರವು ಸಾಂಸ್ಕೃತಿಕ ನೀತಿಯನ್ನು ಅಂಗೀಕರಿಸಿದ್ದರೂ, ‘ಅಕಾಡೆಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರ ಆಯ್ಕೆಗೆ ವಿಶ್ವವಿದ್ಯಾಲಯಗಳ ಕುಲಪತಿ ಆಯ್ಕೆಯ ಮಾದರಿಯಲ್ಲಿ ಶೋಧನಾ ಸಮಿತಿ ರಚಿಸಬೇಕು’ ಎಂಬ ಅಂಶವನ್ನು ಕೈ ಬಿಟ್ಟಿತ್ತು. ಹೀಗಾಗಿ, ಗೊಂದಲಗಳು ಮುಂದುವರಿದಿವೆ’ ಎಂದರು.

ADVERTISEMENT

ಅಧ್ಯಕ್ಷತೆಯ ಅರ್ಹತೆಯು ಸಾಪೇಕ್ಷವಾಗಿದೆ. ಹೀಗಾಗಿ, ಕನಿಷ್ಠ ಮಾನದಂಡವಾದರೂ ಉಳಿಯಲಿ ಎಂದು ಶೋಧನಾ ಸಮಿತಿಯನ್ನು ಶಿಫಾರಸು ಮಾಡಲಾಗಿತ್ತು. ಆ ಸಮಿತಿ ನೀಡಿದ ಮೂರು ಅಥವಾ ಐದು ಹೆಸರುಗಳ ಪೈಕಿ ಒಂದನ್ನು ಸರ್ಕಾರವೇ ಆಯ್ಕೆ ಮಾಡಲಿ. ಪ್ರಾದೇಶಿಕ, ಸಾಮಾಜಿಕ ಆದ್ಯತೆಗಳನ್ನೂ ಪರಿಗಣಿಸಲಿ ಎಂದೂ ಉಲ್ಲೇಖಿಸಲಾಗಿತ್ತು. ಆದರೆ, ಶೇ 50ರಷ್ಟಾದರೂ ರಾಜಕೀಯ ಹಿಂದೆ ಸರಿಯಲಿ ಎಂಬ ಉದ್ದೇಶವೂ ಈಡೇರಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಲಾಭದಾಯಕ ಹುದ್ದೆ:ಸರ್ಕಾರಿ ಉದ್ಯೋಗದಲ್ಲಿ ಇರುವವರು ಅಕಾಡೆಮಿಗಳಿಗೆ ಅಧ್ಯಕ್ಷರಾಗುವುದಕ್ಕೆ ಈ ಹಿಂದೆ ಇದ್ದ ನಿರ್ಬಂಧವನ್ನು ತೆಗೆದು ಹಾಕಲು ಸೂಚಿಸಲಾಗಿತ್ತು. ಒಟ್ಟು 27 ಅಂಶಗಳ ಪೈಕಿ ಸರ್ಕಾರವು ಇದನ್ನೂ ಅಂಗೀಕರಿಸಿದೆ.

‘ಅಕಾಡೆಮಿ ಅಧ್ಯಕ್ಷರು ಗೌರವ ಸಂಭಾವನೆ ಪಡೆಯುತ್ತಾರೆಯೇ ಹೊರತು, ಸಂಬಳವಲ್ಲ. ಇದರಿಂದಾಗಿ ಈ ಹುದ್ದೆಯನ್ನು ಲಾಭದಾಯಕ ಎಂದು ಪರಿಗಣಿಸಬಾರದು. ಹೀಗೆ ಪರಿಗಣಿಸುವುದರಿಂದ ನಿವೃತ್ತರು ಹಾಗೂ ವೃತ್ತಿಯಲ್ಲಿ ಇಲ್ಲದವರು ಮಾತ್ರ ನೇಮಕಗೊಳ್ಳುತ್ತಿದ್ದರು. ಅರ್ಹರು ಹಾಗೂ ಯುವ ಸಾಧಕರಿಗೆ ಹಿನ್ನಡೆಯಾಗಿತ್ತು’ ಎಂದು ಬರಗೂರು ತಿಳಿಸಿದರು.

ಒಮ್ಮೆ ಸದಸ್ಯ–ಅಧ್ಯಕ್ಷರಾಗಿದ್ದವರನ್ನು ತಕ್ಷಣದ ಇನ್ನೊಂದು ಅವಧಿಗೆ ಆಯಾ ಅಕಾಡೆಮಿಗೆ ನೇಮಕ ಮಾಡಬಾರದು. ಅಕಾಡೆಮಿಯ ಸ್ವಾಯತ್ತತೆಯನ್ನು ಸಂರಕ್ಷಿಸಬೇಕು ಎಂಬ ಸಲಹೆಗಳನ್ನೂ ನೀಡಲಾಗಿತ್ತು. ಪ್ರತಿ ಯೋಜನೆಯ (ಆರ್ಥಿಕೇತರ) ಕ್ರಿಯಾ ಯೋಜನೆಯನ್ನು ಸರ್ಕಾರ(ಅಧಿಕಾರಿಗಳಿಗೆ) ಕಳುಹಿಸಿಕೊಡಬೇಕಾಗಿಲ್ಲ ಎಂಬ ಸಲಹೆನ್ನೂ ನೀಡಲಾಗಿತ್ತು. ಆದರೆ, ಯಾವುದೂ ಅನುಷ್ಠಾನಕ್ಕೆ ಬಂದಿಲ್ಲ ಎಂದರು.

ಸಾಂಸ್ಕೃತಿಕ ನೀತಿಯನ್ನು ಅನುಷ್ಠಾನಗೊಳಿಸದೇ ಇರುವ ಕಾರಣ ಸಾಂಸ್ಕೃತಿ ವಲಯದ ಹಲವಾರು ಗೊಂದಲಗಳು ಮುಂದುವರಿದಿವೆ ಎಂದು ಸಿಎಜಿ ವರದಿಯಲ್ಲೂ ಉಲ್ಲೇಖಿಸಲಾಗಿತ್ತು.

ಚರ್ಚೆಯಲ್ಲಿ ತುಳು, ಬ್ಯಾರಿ, ಕೊಂಕಣಿ:ಅಕಾಡೆಮಿಗಳಿಗೆ ಸಂಘ ಪರಿವಾರದವರನ್ನು ನೇಮಕ ಮಾಡಿದ್ದು, ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂಬ ಅಸಮಾಧಾನ ಹೊಗೆಯಾಡುತ್ತಿದೆ. ಈ ನಡುವೆಯೇ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನೇಮಕವು ತೀವ್ರ ಚರ್ಚೆಗೆ ಈಡಾಗಿದೆ.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಕೊಂಕಣಿ ಭಾಷಿಗ ಕ್ರೈಸ್ತರನ್ನು ಕಡೆಗಣಿಸಲಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಐವನ್ ಡಿ ಸೋಜ ಆರೋಪಿಸಿದ್ದಾರೆ.

‘ಬ್ಯಾರಿ’ ಭಾಷಾ ಅಕಾಡೆಮಿಗೆ ಬಿಜೆಪಿ ಕಾರ್ಯಕರ್ತರ ನೇಮಕವಾಗಿದೆಯೇ ಹೊರತು, ಭಾಷೆಗೆ ಮಾನ್ಯತೆ ನೀಡಿಲ್ಲ. ಕಳೆದ ಬಾರಿ 11 ಸದಸ್ಯರಿದ್ದು, ಈ ಬಾರಿ 7 ಮಂದಿಯನ್ನು ಮಾತ್ರ ನೇಮಕ ಮಾಡಿದ್ದಾರೆ. ಈ ಪೈಕಿ ನಾಲ್ವರು ಬ್ಯಾರಿ ಭಾಷಿಗರೇ ಅಲ್ಲ. ಸರ್ಕಾರಕ್ಕೆ ಬ್ಯಾರಿ ಭಾಷಿಗರೇ ಸಿಕ್ಕಿಲ್ಲ ’ ಎಂದು ಸಾಮಾಜಿಕ ಕಾರ್ಯಕರ್ತ ಉಮರ್ ಯು.ಎಚ್. ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.