ADVERTISEMENT

‘ವೈಚಾರಿಕ ಸಂವಾದಕ್ಕೆ ಸಿಗದ ಮನ್ನಣೆ’

ಪ್ರಸ್ತುತ ಕಾಲದ ಸ್ಥಿತಿ ಬಿಚ್ಚಿಟ್ಟ ಬರಗೂರು ರಾಮಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2018, 18:08 IST
Last Updated 7 ಅಕ್ಟೋಬರ್ 2018, 18:08 IST
ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ   

ಮೈಸೂರು: ‘ಪ್ರಸ್ತುತ ಕಾಲಘಟ್ಟದಲ್ಲಿ ವೈಚಾರಿಕ ವಾಗ್ವಾದಕ್ಕೆ ಜಾಗವಿಲ್ಲದಂತಾಗಿದೆ. ಸಂವಾದನೀಯ, ಸಹನೀಯ ಅಂಶಗಳು ನಾಶವಾಗುತ್ತಿವೆ. ಸಂಶೋಧಕರಿಗೆ ಬೆದರಿಕೆಗೆ ಪತ್ರಗಳು ಬರುವುದು, ನಮ್ಮಂಥವರಿಗೆ ಗನ್‌ಮ್ಯಾನ್‌ ಕೊಡುವುದು ಅಚ್ಚರಿ ಮೂಡಿ
ಸುವ ಸಂಗತಿ’ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ತಿಳಿಸಿದರು.‌

ಮೈಸೂರು ವಿ.ವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯು ಭಾನುವಾರ ಇಲ್ಲಿ ಆಯೋಜಿಸಿದ್ದ ಸಂಶೋಧಕ ‘ಡಾ.ಎಲ್‌.ಬಸವರಾಜು ಜನ್ಮ ಶತಮಾನೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸದ್ಯ ನಾವು ವಿಭಜಿತ ಮನಸ್ಥಿತಿಯಲ್ಲಿದ್ದೇವೆ. ವಿಭಜಿತ ಓದು, ವಿಭಜಿತ ವಿಮರ್ಶೆ, ವಿಭಜಿತ ಸಂಶೋಧನೆ ನಡೆಯುತ್ತಿದೆ. ಇದೊಂದು ಉಗ್ರರೂಪ‌ವಾಗಿ ಕಾಣಿಸಿಕೊಳ್ಳುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಒಂದು ಪಕ್ಷದ ಅಜೆಂಡಾಗಳಿಗೆ ಅನುಗುಣವಾಗಿ ಸಂಶೋಧನೆ ನಡೆಸುವ ಅನಾರೋಗ್ಯಕರ ಪ್ರವೃತ್ತಿ ಹೆಚ್ಚಿದೆ. ಹೀಗಾಗಿ, ತಾಜ್‌ಮಹಲ್‌, ಬಾಬ್ರಿ ಮಸೀದಿ, ಶಿವ ದೇವಾಲಯ, ಜೈನ ಮಂದಿರದ ಔಚಿತ್ಯ ಪ್ರಶ್ನಿಸಲಾಗುತ್ತಿದೆ. ಸಾಂಸ್ಕೃತಿಕ ಸಂಶೋಧಕರಿಗಿಂತ ರಾಜಕೀಯ ಸಂಶೋಧಕರು ಹೆಚ್ಚು ಪ್ರಚಾರ ಗಿಟ್ಟಿಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.‌

‘ಚರಿತ್ರೆಯನ್ನು ಪುರಾಣ ಮಾಡುವ, ಪುರಾಣವನ್ನು ಚರಿತ್ರೆ ಮಾಡುವ ಅನೇಕರು ಸಂಶೋಧಕರೆಂಬ ಹಣೆಪಟ್ಟಿ ಹೊತ್ತು ಬರುತ್ತಿದ್ದಾರೆ. ದೇವರ ಜನ್ಮಸ್ಥಾನ ಹಾಗೂ ದೇವರ ಮೃತ್ಯುಸ್ಥಾನವನ್ನು ಹುಡುಕಲು ಹೊರಟಿದ್ದಾರೆ. ಧರ್ಮಪರ, ಜಾತಿಪರ ಸಂಶೋಧನೆಗಳು ನಡೆಯುತ್ತಿದ್ದು, ಅಪಾಯಕಾರಿ ವಾತಾವರಣ ಸೃಷ್ಟಿಸಲಾಗುತ್ತಿದೆ’ ಎಂದು ಟೀಕಿಸಿದರು.

‘ವಿಶ್ವವಿದ್ಯಾಲಯಗಳಲ್ಲಿ ಕೆಲ ತಾಂತ್ರಿಕ ಅಂಶಗಳು ಸಂಶೋಧನೆಯ ಮಹತ್ವವನ್ನು, ಅನನ್ಯತೆಯನ್ನು ಹಾಳು ಮಾಡುತ್ತಿವೆ. ಇದಕ್ಕೆ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನೀತಿ ನಿಯಮಗಳೇ ಕಾರಣ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.