ADVERTISEMENT

ಅಕ್ರಮ ಗಣಿಗೆ ತಡೆ: ಭೂವಿಜ್ಞಾನಿ ವರ್ಗಾವಣೆ

ಅಕ್ರಮ ಕಂಪನಿಗಳಿಗೆ ₹ 500 ಕೋಟಿವರೆಗೂ ದಂಡ l ಮಾಲೀಕರ ಲಾಬಿ ಕಾರಣವೇ?

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 21:16 IST
Last Updated 27 ಏಪ್ರಿಲ್ 2021, 21:16 IST
ಟಿ.ವಿ.ಪುಷ್ಪಾ
ಟಿ.ವಿ.ಪುಷ್ಪಾ   

ಮಂಡ್ಯ: ಜಿಲ್ಲೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ತಡೆಯಲು ಯತ್ನಿಸಿದ್ದ, ಅಕ್ರಮ ಕಲ್ಲು ಗಣಿ ಕಂಪನಿಗಳಿಗೆ ₹500 ಕೋಟಿವರೆಗೂ ದಂಡ ವಿಧಿಸಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಟಿ.ವಿ.ಪುಷ್ಪಾ ಅವರನ್ನು ಸರ್ಕಾರ ಮಂಗಳವಾರ ವರ್ಗಾವಣೆ ಮಾಡಿದೆ.

ದಿಟ್ಟತನದಿಂದ ಕೆಲಸ ಮಾಡುತ್ತಿದ್ದ ಭೂವಿಜ್ಞಾನಿಯನ್ನು ಏಕಾಏಕಿ ವರ್ಗಾವಣೆ ಮಾಡಿರುವುದಕ್ಕೆ ವಿವಿಧ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಣಿ ಮಾಲೀಕರ ಲಾಬಿಗೆ ಒಳಗಾಗಿರುವ ಸರ್ಕಾರ, ವಿಜಯಪುರ ಜಿಲ್ಲೆಗೆ ವರ್ಗಾವಣೆ ಮಾಡಿದೆ. ಅದೂ ಕೋವಿಡ್‌ ಸಂದರ್ಭದಲ್ಲಿ ವರ್ಗಾವಣೆ ಮಾಡಿರುವುದು ಅನುಮಾನಾಸ್ಪದವಾಗಿದೆ ಎಂದು ಆರೋಪಿಸಿದ್ದಾರೆ.

ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ದಶಪಥ ಕಾಮಗಾರಿಗಾಗಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿದ ಆರೋಪದ ಮೇಲೆ ದಿಲೀಪ್‌ ಬಿಲ್ಡ್‌ಕಾನ್‌ ಕಂಪನಿಗೆ ಪುಷ್ಪಾ ₹102 ಕೋಟಿ ದಂಡ ವಿಧಿಸಿದ್ದರು. ಕೇಂದ್ರದ ಪರಿಸರ ಅನುಮೋದನೆ ಪಡೆಯದೆ ಕಲ್ಲು ಗಣಿಗಾರಿಕೆ ನಡೆಸಿದ್ದ ಕಂಪನಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗುವಂತೆ ಮಾಡಿದ್ದರು. ಜೊತೆಗೆ ಹಲವು ಅಕ್ರಮ ಗಣಿ ಮಾಲೀಕರಿಗೆ ಕೋಟ್ಯಂತರ ರೂಪಾಯಿ ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದರು.

ADVERTISEMENT

ಪುಷ್ಪಾ ಅವರು ಹಿರಿಯ ಭೂವಿಜ್ಞಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಅಕ್ರಮ ಗಣಿಗಾರಿಕೆ ಪ್ರದೇಶಕ್ಕೆ ದಿಢೀರ್‌ ಭೇಟಿ ನೀಡಿ ಯಂತ್ರಗಳನ್ನು ಜಪ್ತಿ ಮಾಡಿದ್ದರು. ಗಣಿಗಾರಿಕೆ ನಿಷೇಧದ ನಡುವೆಯೂ ರಾತ್ರಿ ವೇಳೆ ಗಣಿ ಚಟುವಟಿಕೆ ನಡೆಸುತ್ತಿದ್ದ ಗಣಿ ಮಾಲೀಕರ ವಿರುದ್ಧ ಪ್ರಕರಣ ದಾಖಲು ಮಾಡಿದ್ದರು. ಗಣಿಗಾರಿಕೆ ನಿಷೇಧ ಇದ್ದಾಗ ನಿಷೇಧಾಜ್ಞೆ ಕಟ್ಟುನಿಟ್ಟಾಗಿ ಜಾರಿಗೊಳಿಸಿ ಕ್ರಮ ಕೈಗೊಂಡಿದ್ದರು. ಪೊಲೀಸ್‌ ಚೆಕ್‌ಪೋಸ್ಟ್‌ ಮೀರಿ ಹೋಗುತ್ತಿದ್ದ ಜಲ್ಲಿ ಲಾರಿಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಹುಣಸೋಡು ಸ್ಫೋಟದ ನಂತರ ಅಪಾರ ಪ್ರಮಾಣದ ಅಕ್ರಮ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದರು. ಮನೆ, ಆಲೆಮನೆ, ತೋಟಗಳಲ್ಲಿ ಸಂಗ್ರಹಿಸಿಟ್ಟಿದ್ದ ಜಿಲೆಟಿನ್‌ ಕಡ್ಡಿಗಳನ್ನು ವಶಕ್ಕೆ ಪಡೆದಿದ್ದರು. ಗಣಿ ಮಾಲೀಕರು ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದ ರಾಜಧನ ವಸೂಲಿಗೆ ಯತ್ನಿಸಿದ್ದರು.

ಪಾಂಡವಪುರ ತಾಲ್ಲೂಕು ಬೇಬಿಬೆಟ್ಟದಲ್ಲಿ ಕಲ್ಲು ಗಣಿ ನಷ್ಟದ ಸರ್ವೆಗೆ ಡ್ರೋನ್‌ ಕ್ಯಾಮೆರಾ ಬಳಸುವುದಕ್ಕೆ ಸರ್ಕಾರದಿಂದ ವಿಶೇಷ ಅನುಮತಿ ಪಡೆದಿದ್ದರು. ಡ್ರೋನ್‌ ಕ್ಯಾಮೆರಾ ಸರ್ವೆ ಆರಂಭವಾಗುವ ಮೊದಲೇ ಪುಷ್ಪಾ ಅವರ ವರ್ಗಾವಣೆಯಾಗಿದೆ.

‘ಅರಣ್ಯ ಪ್ರದೇಶ, ಗೋಮಾಳದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಮಾಲೀಕರ ವಿರುದ್ಧ ಪುಷ್ಪಾ ಕ್ರಮಕ್ಕೆ ಮುಂದಾಗಿದ್ದರು. ಇದನ್ನು ಸಹಿಸದ ಗಣಿ ಮಾಲೀಕರು ಸರ್ಕಾರದ ಮೇಲೆ ಒತ್ತಡ ತಂದು ವರ್ಗಾವಣೆ ಮಾಡಿಸಿದ್ದಾರೆ’ ಎಂದು ಆರ್‌ಟಿಐ ಕಾರ್ಯಕರ್ತ ಕೆ.ಆರ್‌.ರವೀಂದ್ರ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.