ADVERTISEMENT

ಕುಮಾರಸ್ವಾಮಿ ಸಿಎಂ ಆಗಿದ್ದೇ ಅಣಕು ಪ್ರದರ್ಶನ: ಬಸನಗೌಡ ಪಾಟೀಲ ಯತ್ನಾಳ

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 10:17 IST
Last Updated 22 ಜನವರಿ 2020, 10:17 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ವಿಜಯಪುರ: 'ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿರುವ ಬಾಂಬ್ ಅಣಕು ಪ್ರದರ್ಶನದಂತಿದೆ' ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ, 'ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದೇ ಅಣಕು ಪ್ರದರ್ಶನದಂತಿತ್ತು' ಎಂದು ಇಲ್ಲಿ ತಿರುಗೇಟು ನೀಡಿದರು.

ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಕುಮಾರಸ್ವಾಮಿ ಅವರು ನಾಚಿಕೆಗೇಡಿನ ಹಾಗೂ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು,ಸರ್ಕಾರದ ವತಿಯಿಂದಲೇ ಅವರಿಗೆ ಮಾನಸಿಕ ಚಿಕಿತ್ಸೆ ಕೊಡಿಸಬೇಕಿದೆ' ಎಂದು ಹರಿಹಾಯ್ದರು.

'ಕುಮಾರಸ್ವಾಮಿ ಅವರ ಜೀವನ ಹಾಗೂ ರಾಜಕೀಯ ಅಣಕು ಪ್ರದರ್ಶನಂತಿದೆ.ಅವರಿಗೆ ದೇಶ, ಸೈನಿಕರು, ರಾಜ್ಯದ ಹಿತ ಯಾವುದೂ ಕಾಣಿಸುವುದಿಲ್ಲ. ಕುಮಾರಸ್ವಾಮಿ ಅವರು ಕರ್ನಾಟಕದ ಓವೈಸಿ ಆಗಲು ಯತ್ನಿಸುತ್ತಿದ್ದಾರೆ' ಎಂದು ಕುಟುಕಿದರು.

ADVERTISEMENT

'ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಶಂಕಿತ ಆರೋಪಿಆದಿತ್ಯ ರಾವ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.ಪೊಲೀಸ್ ಇಲಾಖೆ ಉತ್ತಮವಾಗಿ ಕೆಲಸ ಮಾಡುತ್ತಿದೆ' ಎಂದರು.

'ಬಾಂಬ್ ಪತ್ತೆ ವಿಚಾರದಲ್ಲಿ ಸರ್ಕಾರ ಮತ್ತು ಗೃಹ ಇಲಾಖೆ ಗಂಭೀರವಾಗಿವೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ' ಎಂದು ಹೇಳಿದರು.

'ಕಲಬುರ್ಗಿಯಲ್ಲಿ ಮಂಗಳವಾರ ನಡೆದ ಸಿಎಎ ವಿರೋಧಿ ಸಮಾವೇಶದಲ್ಲಿಎಚ್.ಡಿ. ಕುಮಾರಸ್ವಾಮಿ ಅವರು ಪಾಕಿಸ್ತಾನ ಲೀಡರ್ ಮಾತನಾಡಿದಂತೆ ಮಾತನಾಡಿದ್ದಾರೆ. ದಾವೂದ್ ಇಬ್ರಾಹಿಂ ತಮ್ಮ ಇಮ್ರಾ‌ನ್ ಖಾನ್, ಇಮ್ರಾನ್ ಖಾನ್ ತಮ್ಮ ರಾಹುಲ್ ಗಾಂಧಿ,ಇಮ್ರಾನ್ ಖಾನ್ ಅಳಿಯ ಕುಮಾರಸ್ವಾಮಿ ಎಂಬಂತೆ ಮಾತನಾಡಿದ್ದಾರೆ' ಎಂದು ವ್ಯಂಗ್ಯವಾಡಿದರು.

ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದರೆ ಹಳೆ ಮೈಸೂರು ಭಾಗದಲ್ಲಿ ಕುಮಾರಸ್ವಾಮಿ ಸಂಪೂರ್ಣ ಅಸ್ತಿತ್ವ ಕಳೆದುಕೊಳ್ಳುತ್ತಾರೆ.ನಮ್ಮ ದೇಶದ ಅನ್ನ ತಿನ್ನುವ ಅಧಿಕಾರಿಗಳು, ರಾಜಕಾರಣಿಗಳು ಪಾಕಿಸ್ತಾನದ ಏಜೆಂಟ್ ರಾಗಿ ಕೆಲಸ ಮಾಡಿದ ಉದಾಹರಣೆಗಳು ಇವೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇವೆಲ್ಲ ಬಹಿರಂಗವಾಗುತ್ತಿವೆ' ಎಂದು ಹೇಳಿದರು.

'ಸಿಎಎ ವಿರೋಧಿ ಸಮಾವೇಶದಲ್ಲಿ ಮಾತನಾಡಿದ ಶಾಸಕ ಸಿ.ಎಂ. ಇಬ್ರಾಹಿಂ, ಮೋದಿ ಬಳಿಯೇ ಅವರ ತಂದೆಯ ಬರ್ಥ್ ಸರ್ಟಿಫಿಕೇಟ್ ಇಲ್ಲ,ಇವರೇನು‌ ಜನರಿಗೆ ಕೇಳುವುದು ಎಂದು ಪ್ರಶ್ನಿಸಿದ್ದಾರೆ. ಇಬ್ರಾಹಿಂ ಮುತ್ತಜ್ಜ ಯಾವ ಜಾತಿಯವನಿದ್ದ ಎಂದು ಇಬ್ರಾಹಿಂಗೆ ಕೇಳಿ, ಆತ ಪಕ್ಕಾ ಮುಸ್ಲಿಂ ಅಲ್ಲ.ಟಿಪ್ಪು ದಾಳಿಯ ಕಾಲದಲ್ಲಿ ಮತಾಂತರಗೊಂಡಿರುವ ಮುಸ್ಲಿಮರ ಬಗ್ಗೆ ಅವರಿಗೆ ಗೊತ್ತಿಲ್ಲ. ಇವರೇನು ಮೋದಿ ಬಗ್ಗೆ ಕೇಳುವುದು' ಎಂದು ಇಬ್ರಾಹಿಂ ವಿರುದ್ಧ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.