ADVERTISEMENT

ಸೆ.1ರಿಂದ ಬಸವ ಸಂಸ್ಕೃತಿ ಅಭಿಯಾನ: ಎಂ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 16:22 IST
Last Updated 12 ಜುಲೈ 2025, 16:22 IST
ಸಚಿವ ಎಂ.ಬಿ.ಪಾಟೀಲ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸ್ವಾಮೀಜಿಗಳು ಭಾಗಿಯಾಗಿದ್ದರು
ಸಚಿವ ಎಂ.ಬಿ.ಪಾಟೀಲ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸ್ವಾಮೀಜಿಗಳು ಭಾಗಿಯಾಗಿದ್ದರು   

ಬೆಂಗಳೂರು: ‘ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರವು ಘೋಷಿಸಿ ಒಂದು ವರ್ಷವಾಗುತ್ತಿದ್ದು, ಅದನ್ನು ಸಂಭ್ರಮಿಸಲು ಪ್ರತಿ ಜಿಲ್ಲೆಯಲ್ಲಿ ಬಸವ ಸಂಸ್ಕೃತಿ ಅಭಿಯಾನ ನಡೆಸುತ್ತೇವೆ ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟವು ನಿರ್ಧರಿಸಿದೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಹೇಳಿದರು.

ಎಂ.ಬಿ.ಪಾಟೀಲ ಅವರ ಮನೆಯಲ್ಲಿ ಒಕ್ಕೂಟದ ಸ್ವಾಮೀಜಿಗಳು ಶನಿವಾರ ಸಭೆ ನಡೆಸಿದರು. ಸಭೆಯ ನಂತರ ಮಾತನಾಡಿದ ಪಾಟೀಲ ಅವರು, ‘ಒಂದು ತಿಂಗಳು ಈ ಅಭಿಯಾನ ನಡೆಸಬೇಕು ಮಠಾಧಿಪತಿಗಳು ನಿರ್ಧರಿಸಿದರು. ಬಸವಣ್ಣನವರ ಜನ್ಮಸ್ಥಳವಾದ ಬಸವನ ಬಾಗೇವಾಡಿಯಲ್ಲಿ ಸೆಪ್ಟೆಂಬರ್ 1ರಂದು ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ’ ಎಂದರು.

‘ಅಭಿಯಾನದ ಭಾಗವಾಗಿ ಬಸವರಥವು ಎಲ್ಲ ಜಿಲ್ಲೆಗಳಲ್ಲೂ ಸಂಚರಿಸಿ ಅಕ್ಟೋಬರ್‌ 1ರಂದು ಬೆಂಗಳೂರು ತಲುಪಲಿದೆ. ಅಂದು ಲಕ್ಷಾಂತರ ಲಿಂಗಾಯತ ಅನುಯಾಯಿಗಳನ್ನು ಸೇರಿಸಿ, ಬೆಂಗಳೂರಿನಲ್ಲಿ ಬೃಹತ್ ಸಮಾರೋಪ ಸಮಾರಂಭ ನಡೆಸಲಾಗುವುದು. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಂದು ಸನ್ಮಾನಿಸಲಾಗುವುದು’ ಎಂದರು.

ADVERTISEMENT

‘ಅಭಿಯಾನದಲ್ಲಿ ಪ್ರತಿದಿನವೂ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಜತೆ ಸಂವಾದ, ಪಾದಯಾತ್ರೆ, ವಚನ ಸಂಗೀತ, ಸ್ವಾಮೀಜಿಗಳು ಮತ್ತು ಆಹ್ವಾನಿತ ಉಪನ್ಯಾಸಕರ ಭಾಷಣ ಹಾಗೂ ಪಂಡಿತಾರಾಧ್ಯ ಶಿವಾಚಾರ್ಯರು ಬರೆದಿರುವ ‘ಜಂಗಮದೆಡೆಗೆ’ ನಾಟಕ ಪ್ರದರ್ಶನ ನಡೆಯಲಿದೆ’ ಎಂದು ತಿಳಿಸಿದರು.

‘ಜಾಗತಿಕ ಲಿಂಗಾಯತ ಮಹಾಸಭಾ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ರಾಷ್ಟ್ರೀಯ ಬಸವದಳ, ಬಸವ ಸಮಿತಿ, ಬಸವ ಕೇಂದ್ರ, ಕದಳಿ ಮಹಿಳಾ ವೇದಿಕೆ ಮುಂತಾದ ಬಸವಪರ ಸಂಘಟನೆಗಳು ಅಭಿಯಾನಕ್ಕೆ ಕೈಜೋಡಿಸಿವೆ’ ಎಂದು ಒಕ್ಕೂಟದ ಅಧ್ಯಕ್ಷರೂ ಆಗಿರುವ ಭಾಲ್ಕಿ ಮಠದ ಬಸವಲಿಂಗ ಪಟ್ಟದ್ದೇವರು ತಿಳಿಸಿದರು.

ಅಥಣಿಯ ಚೆನ್ನಬಸವ ಸ್ವಾಮೀಜಿ, ನೆಲಮಂಗಲದ ಪವಾಡ ಶ್ರೀಮಠದ ಸಿದ್ಧಲಿಂಗ ಸ್ವಾಮೀಜಿ, ಗೊರವಣ್ಣ ದೇವರ ಮಠದ ನಂಜುಂಡ ಸ್ವಾಮೀಜಿ, ನಿಜಗುಣ ಮಠದ ಇಮ್ಮಡಿ ನಿಜಗುಣ ಸ್ವಾಮೀಜಿ, ಬಸವ ಧರ್ಮಪೀಠದ ಬಸವಯೋಗಿ ಸ್ವಾಮೀಜಿ, ಚನ್ನಪಟ್ಟಣದ ಬೇಗೂರು ಮಠದ ಮೃತ್ಯುಂಜಯ ಸ್ವಾಮೀಜಿ ಸಭೆಯಲ್ಲಿ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.