ADVERTISEMENT

ಬೆಂಗಳೂರು| ತಾಯಿ ಮೇಲೆ ಆಣೆ ಮಾಡಿ ಮೋಸ: ಮೃತ್ಯುಂಜಯ

ಸದ್ಯಕ್ಕೆ ಕೇಂದ್ರದ ಮೇಲೆ ಭರವಸೆ: ಅಮಿತ್ ಶಾ, ನಡ್ಡಾ ಜತೆ ಮಾತುಕತೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 5:13 IST
Last Updated 4 ಮಾರ್ಚ್ 2023, 5:13 IST
ಬಸವಜಯ ಮೃತ್ಯುಂಜಯ ಸ್ವಾಮೀಜಿ
ಬಸವಜಯ ಮೃತ್ಯುಂಜಯ ಸ್ವಾಮೀಜಿ   

ಬೆಂಗಳೂರು: ‘ದೇವರ ಸಮಾನ ತಾಯಿ ಮೇಲೆ ಆಣೆ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೋಸ ಮಾಡಿದರು. ಈಗ ಕೇಂದ್ರ ಸರ್ಕಾರದ ಮೇಲೆ ಮಾತ್ರ ಭರವಸೆ ಉಳಿಸಿಕೊಂಡಿದ್ದೇವೆ...’

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಕಳೆದ 49 ದಿನಗಳಿಂದ ಧರಣಿ ನಡೆಸುತ್ತಿರುವ ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ಮಾತುಗಳಿವು.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಕಳೆದ ಎರಡೂವರೆ ವರ್ಷಗಳಿಂದಲೂ ನಿರಂತರ ಹೋರಾಟ ನಡೆಸುತ್ತಿರುವ ಸ್ವಾಮೀಜಿ, ಹೋರಾಟ ವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವವರೆಗೂ ವಿರಮಿಸುವುದಿಲ್ಲ ಎನ್ನುವ ದೃಢ ನಿರ್ಧಾರ ಪ್ರಕಟಿಸಿದ್ದಾರೆ.

ADVERTISEMENT

ಧರಣಿ 50 ದಿನಗಳು ಪೂರೈಸುವ ಹೊತ್ತಿನಲ್ಲಿ ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ಹೋರಾಟದ ಹಾದಿ ವಿವರಿಸಿದ್ದಾರೆ.

ರಾಜ್ಯ ಸರ್ಕಾರ ಭರವಸೆ ನೀಡಿದ್ದರೂ ಮತ್ತೆ ಧರಣಿ ಏಕೆ?

ನಮ್ಮ ಜನ ತಾಯಿಯನ್ನು ದೇವರ ಸಮಾನ ಪರಿಗಣಿಸುತ್ತಾರೆ. ತಾಯಿ ಶಬ್ದ ಬಳಸಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ನಮ್ಮನ್ನು ಭಾವನಾತ್ಮಕವಾಗಿ ಕಟ್ಟಿ ಹಾಕಿ ಹೋರಾಟದ ದಾರಿ ತಪ್ಪಿಸಿದರು. ಮುಖ್ಯಮಂತ್ರಿ ಅವರಿಗೆ ತಾಯಿ ಮೇಲೆ ಆಣೆ ಮಾಡುವುದು ಅಭ್ಯಾಸವಾಗಿದೆ ಎನ್ನುವುದು ನಂತರ ನಮಗೆ ತಿಳಿಯಿತು. ಸಚಿವ ಸಂಪುಟದಲ್ಲೂ ಚರ್ಚಿಸದೆಯೇ 2ಡಿ ಮೀಸಲಾತಿ ಕಲ್ಪಿಸುವುದಾಗಿ ಪ್ರಕಟಿಸಿದರು.

ಆದರೆ, ಇದುವರೆಗೂ ಎಷ್ಟು ಪ್ರಮಾಣ ಎನ್ನುವುದನ್ನು ಪ್ರಕಟಿಸಲಿಲ್ಲ ಮತ್ತು ಅಧಿಸೂಚನೆಯನ್ನೂ ಹೊರಡಿಸಲಿಲ್ಲ. ಮೀಸಲಾತಿ ಬಗ್ಗೆ ಹೈಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಿದ ಸಂದರ್ಭದಲ್ಲೂ ಅಡ್ವೊಕೇಟ್‌ ಜನರಲ್‌ ಅವರು ನಿರ್ಲಕ್ಷ್ಯ ವಹಿಸಿದರು.

ಹೋರಾಟದ ಮುಂದಿನ ಹಾದಿ ಏನು?

ಮಾರ್ಚ್‌ 15ರವರೆಗೆ ಕಾಲಾವಕಾಶ ನೀಡಿದ್ದೇವೆ. ಸರ್ಕಾರ ತನ್ನ ನಿಲುವು ಪ್ರಕಟಿಸದಿದ್ದರೆ ಸತ್ಯಾಗ್ರಹಕ್ಕೆ ಅಲ್ಪವಿರಾಮ ನೀಡಿ ಹೋರಾಟ ಹತ್ತಿಕ್ಕಲು ಮಾಡಿದ್ದ ಪ್ರಯತ್ನಗಳ ಬಗ್ಗೆ 224 ಕ್ಷೇತ್ರಗಳಲ್ಲಿ ಜನರಿಗೆ ಮನವರಿಕೆ ಮಾಡುತ್ತೇವೆ. ಮೀಸಲಾತಿ ಚುನಾವಣಾ ವಿಷಯವಾಗುವುದು ಖಚಿತ. ಇದನ್ನು ಜೀವಂತವಾಗಿಡುತ್ತೇವೆ. ಹೋರಾಟ ಹತ್ತಿಕ್ಕಲು ಯತ್ನಿಸಿದವರನ್ನು ಮನೆಗೆ ಕಳುಹಿಸಿ ಎಂದು ಘಂಟಾಘೋಷವಾಗಿ ಹೇಳುತ್ತೇವೆ.

ಚುನಾವಣೆ ಸಮಯದಲ್ಲಿ ‘2-ಎ’ ಮೀಸಲಾತಿ ಸಿಗುತ್ತದೆ ಎನ್ನುವ ಭರವಸೆ ಇನ್ನೂ ಉಳಿದಿದೆಯೇ?

ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಬೇಕು. ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ನಾವು ಪತ್ರ ಬರೆದಿದ್ದೇವೆ. ಈಗಾಗಲೇ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಶಾಸಕ ಯತ್ನಾಳ್‌ ಅವರ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ನನ್ನ ಜತೆ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿದ್ದಾರೆ. ಅಮಿತ್‌ ಶಾ ಅವರು ವಿಧಾನಸಭಾ ಚುನಾವಣೆ ಒಳಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ.

ಪಂಚಮಸಾಲಿಯಂತಹ ದೊಡ್ಡ ಸಮುದಾಯವನ್ನು 2ಎಗೆ ಸೇರಿಸುವುದರಿಂದ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗುವುದಿಲ್ಲವೇ?

ಹಿಂದುಳಿದ ವರ್ಗಗಳ ಆತಂಕ ನಿವಾರಿಸಲು ನಾವು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಈಗ ಅವರು ಸಹ ಬೆಂಬಲ ನೀಡುತ್ತಿದ್ದಾರೆ. ಈಡಿಗ, ಹಾಲುಮತ ಸಮುದಾಯದ ಸ್ವಾಮೀಜಿಗಳ ಜತೆ ಚರ್ಚಿಸಿದ್ದೇವೆ. ಹಿಂದುಳಿದ ವರ್ಗಗಳ ಆಯೋಗ ರಚನೆಯಾದ ನಂತರ ಪ್ರತಿ ಹತ್ತು ವರ್ಷಗಳಿಗೊಮ್ಮೆ ಪುನರ್‌ ಪರಿಶೀಲನೆ ಕಾರ್ಯ ನಡೆಯಬೇಕು. 1995ರ ಕಾಯ್ದೆ ಪ್ರಕಾರ 2ಎ ಅಡಿಯಲ್ಲಿ ಸೌಲಭ್ಯ ಪಡೆದು ಅಭಿವೃದ್ಧಿ ಹೊಂದಿದ ಸಮುದಾಯಗಳನ್ನು ಪುನರ್‌ ವಿಂಗಡಣೆ ಮಾಡಬೇಕು ಎನ್ನುವ ನಿಯಮವಿದೆ. ಆದರೆ, ಸರ್ಕಾರ ಅಂತಹ ಪ್ರಯತ್ನವನ್ನೇ ಇದುವರೆಗೆ ಮಾಡಿಲ್ಲ.

ಹೋರಾಟಕ್ಕೆ ಜೆಡಿಎಸ್‌, ಕಾಂಗ್ರೆಸ್‌ ಯಾವ ರೀತಿ ಪ್ರತಿಕ್ರಿಯಿಸಿವೆ?

ಎಚ್‌.ಡಿ. ಕುಮಾರಸ್ವಾಮಿ ಅವರು ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿ, ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ. ಪಂಚಮಸಾಲಿ ಸಮುದಾಯದ ಸ್ಥಿತಿಗತಿ ಕುಮಾರಸ್ವಾಮಿ ಅವರಿಗೆ ಗೊತ್ತಿದೆ. ಆದರೆ, ಕಾಂಗ್ರೆಸ್‌ ಇದುವರೆಗೆ ಅಧಿಕೃತವಾಗಿ ಸ್ಪಷ್ಟ ನಿಲುವು ಪ್ರಕಟಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.