ಬಸವಣ್ಣ
ಬೆಂಗಳೂರು: ‘ಬಸವಣ್ಣ ಮತ್ತು ಬಸವಣ್ಣನ ತತ್ವಗಳನ್ನು ಒಪ್ಪುತ್ತೇವೆ ಎಂದು ಪಂಚಾಚಾರ್ಯರು ಒಪ್ಪಿದರೆ, ಅವರೊಂದಿಗಿನ ವಿರೋಧ ಬಿಟ್ಟು ಒಂದಾಗುತ್ತೇವೆ. ಅವರೆಲ್ಲರನ್ನು ಒಪ್ಪಿಸುವ ಹೊಣೆಯನ್ನು ದಿಂಗಾಲೇಶ್ವರ ಸ್ವಾಮೀಜಿ ಹೊರುತ್ತಾರೆಯೇ’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ ಸವಾಲು ಹಾಕಿದ್ದಾರೆ.
ದಿಂಗಾಲೇಶ್ವರ ಸ್ವಾಮೀಜಿ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪಿಸಿದ ವಿಚಾರಗಳಿಗೆ ಪ್ರತಿಕ್ರಿಯೆ ನೀಡಿರುವ ಜಾಮದಾರ ಅವರು, ‘ಪಂಚಾಚಾಯ೯ರು ಬಸವಣ್ಣನನ್ನು ಒಪ್ಪುವುದಿಲ್ಲ ಎನ್ನುವುದು ಸತ್ಯ. ಬಸವಣ್ಣನವರ ಫೋಟೊ ಕೆಳಗೆ ಕೂಡ ಹೋಗುವುದಿಲ್ಲ ಎನ್ನುವುದು ಸತ್ಯ. ಅವರು ತಪ್ಪು ಮಾಡಿದ್ದಾರೆ ಎಂದು ಹೇಳಿದ್ದನ್ನು ನಾವು ಸ್ವಾಗತಿಸುತ್ತೇವೆ’ ಎಂದಿದ್ದಾರೆ.
‘ದಿಂಗಾಲೇಶ್ವರರು ಅಖಿಲ ಭಾರತ ವೀರಶೈವ ಮಹಾಸಭಾದ ಮೂವರನ್ನು ಮಹಾಭಾರತದ ಯುಧಿಷ್ಟಿರ, ಆಜು೯ನ ಮತ್ತು ಭೀಮನಿಗೆ ಹೋಲಿಸಿದ್ದಾರೆ. ಈ ಮೂವರೂ ಉಳಿದ ಇಬ್ಬರು ಪಾಂಡವರೊಂದಿಗೆ ತಮ್ಮ ಕಣ್ಣ ಮುಂದೆಯೇ ತಮ್ಮ ಪತ್ನಿ ದ್ರೌಪದಿಯನ್ನು ಕೌರವ ದುಶ್ಯಾಸನರು ಬೆತ್ತಲೆಗೊಳಿಸುತ್ತಿದ್ದಾಗ ಏನು ಮಾಡುತ್ತಿದ್ದರು’ ಎಂದು ಪ್ರಶ್ನಿಸಿದ್ದಾರೆ.
‘ವೀರಶೈವ ಮಹಾಸಭಾದವರನ್ನು ಪಾಂಡವರಿಗೆ ಹೋಲಿಸಿದ ಉಪಮೆಯಲ್ಲಿ, ದ್ರೌಪದಿಯ ಸ್ಥಳದಲ್ಲಿ ಬಸವಣ್ಣನವರನ್ನು ಇರಿಸಬೇಕು. ಪಂಚಾಚಾರ್ಯರು ತಮ್ಮ ಪ್ರತಿಯೊಂದು ಮೆರವಣಿಗೆಯಲ್ಲಿ ಬಸವಣ್ಣನವರ ಚಿತ್ರ, ಬ್ಯಾನರ್, ಫ್ಲೆಕ್ಸ್‌ಗಳನ್ನು ಕಿತ್ತು ಅವಮಾನ ಮಾಡುವಾಗ, ವೀರಶೈವ ಮಹಾಸಭಾದ ಈ ಯುಧಿಷ್ಟಿರ, ಅರ್ಜುನ ಮತ್ತು ಬಲಭೀಮ ಪೊಲೀಸ್ ಅಧಿಕಾರಿ ಏನು ಮಾಡುತ್ತಿದ್ದರು? ಗಾಢ ನಿದ್ರೆಯಲ್ಲಿದ್ದರೆ ಅಥವಾ ಬಸವಣ್ಣನ ಮೇಲೆ ಆ ಮೂವರಿಗೂ ದ್ವೇಷ ಇತ್ತೇ ಎಂಬುದನ್ನು ದಿಂಗಾಲೇಶ್ವರ ಸ್ವಾಮೀಜಿ ಉತ್ತರಿಸಬೇಕು’ ಎಂದಿದ್ದಾರೆ.
‘ಬಸವ ಕಲ್ಯಾಣದಲ್ಲಿ ಇದೇ 22 ರಿಂದ ರಂಭಾಪುರಿ ಸ್ವಾಮೀಜಿ ಆಯೋಜಿಸಿರುವ ಬೃಹತ್ ‘ದರ್ಬಾರ್’ನ ಸ್ವಾಗತ ಸಮಿತಿಯ ಅಧ್ಯಕ್ಷ, ಈ ಅರ್ಜುನನೇ ಆಗಿದ್ದಾರೆ. ಇದರ ಅರ್ಥವೇನು? ಒಂದೆಡೆ ಬಸವಣ್ಣನವರ ಲಿಂಗಾಯತ ಮತ್ತು ಪಂಚಾಚಾರ್ಯರ ವೀರಶೈವ ಎರಡೂ ಒಂದೇ ಎನ್ನುತ್ತಾ, ಮತ್ತೊಂದೆಡೆ ವೀರಶೈವರನ್ನು ಮಾತ್ರ ನಿಮ್ಮ ಪಾಂಡವರು ಬೆಳೆಸುತ್ತಿಲ್ಲವೇ’ ಎಂದು ಪ್ರಶ್ನೆ ಹಾಕಿದ್ದಾರೆ.
‘ಕಡೆಯದಾಗಿ, ದಿಂಗಾಲೇಶ್ವರರು ನನ್ನನ್ನು ‘ಇಂಗ್ಲಿಷ್ ಸಂಸ್ಕೃತಿಯವನು’ ಎಂದಿದ್ದಾರೆ. ನಾನು ನಿಜವಾಗಿಯೂ ‘ಇಂಗ್ಲಿಷ್’ ಸಂಸ್ಕೃತಿಯವನಾಗಿದ್ದರೆ, ದಿಂಗಾಲೇಶ್ವರ ಸ್ವಾಮಿಗಳಂಥವರ ಜತೆಗೆ ವಾದಕ್ಕಿಳಿಯುವ ಅಗತ್ಯವೇ ಇರುತ್ತಿರಲಿಲ್ಲ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.