ADVERTISEMENT

ಬಸವ ವನದ ಬಸವೇಶ್ವರ ಮೂರ್ತಿ ಸ್ಥಳಾಂತರ; ತಡರಾತ್ರಿ ಕಾರ್ಯಾಚರಣೆ

ಇಂದಿಗಾ ಗಾಜಿನ ಮನೆಗೆ ತಾತ್ಕಾಲಿಕವಾಗಿ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 9:12 IST
Last Updated 31 ಜನವರಿ 2023, 9:12 IST
   

ಹುಬ್ಬಳ್ಳಿ: ನಗರದ ಚನ್ನಮ್ಮ ವೃತ್ತ ಬಳಿಯ ಬಸವ ವನದಲ್ಲಿದ್ದ ಬಸವೇಶ್ವರ ಮೂರ್ತಿಯನ್ನು ಸೋಮವಾರ ತಡರಾತ್ರಿ ಸ್ಥಳಾಂತರ ಮಾಡಲಾಯಿತು. ಫ್ಲೈಓವರ್ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ಅಶ್ವಾರೂಢ ಮೂರ್ತಿಯನ್ನು ಜೆಸಿಬಿ ಮತ್ತು ಕ್ರೇನ್ ಬಳಸಿ ಸಮೀಪದ ಇಂದಿರಾ ಗಾಜಿನ ಮನೆಗೆ ಸ್ಥಳಾಂತರಿಸಲಾಯಿತು.

ಫ್ಲೈಓವರ್ ಬಸವ ವನದ ಮೇಲ್ಫಾಗದಲ್ಲಿ ಹಾದು ಹೋಗುತ್ತದೆ. ಸ್ಥಳದಲ್ಲಿ ಕಾಮಗಾರಿ ನಡೆಸುವಾಗ ಬಸವೇಶ್ವರರ ಮೂರ್ತಿಗೆ ಧಕ್ಕೆಯಾಗುತ್ತಿತ್ತು. ಹಾಗಾಗಿ, ಮೂರ್ತಿಯನ್ನು ಸ್ಥಳಾಂತರ ಮಾಡಲೇಬೇಕಾಗಿತ್ತು. ಗೋಕುಲ ರಸ್ತೆ ಕಡೆಯಿಂದ ಆರಂಭವಾಗಿದ್ದ ಕಾಮಗಾರಿ, ಮೂರ್ತಿಯ ಕಾರಣಕ್ಕಾಗಿ ಬಸವ ವನದ ಬಳಿ ವಿಳಂಬವಾಗಿತ್ತು.

ತಡರಾತ್ರಿ ಪೊಲೀಸ್ ಬಂದೋಬಸ್ತ್‌ನಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಜೆಸಿಬಿ ಮತ್ತು ಕ್ರೇನ್‌ ಬಳಸಿ ಮೂರ್ತಿಯನ್ನು ಸುರಕ್ಷಿತವಾಗಿ ಇಂದಿರಾ ಗಾಜಿನ ಮನೆಗೆ ಸ್ಥಳಾಂತರಿಸಿದರು. ಕಾರ್ಯಾಚರಣೆ ಸಂದರ್ಭದಲ್ಲಿ ಬಸವ ವನ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿತ್ತು.

ADVERTISEMENT

ತಾತ್ಕಾಲಿಕವಾಗಿ ಸ್ಥಳಾಂತರ: ‘ಫ್ಲೈಓವರ್ ಕಾಮಗಾರಿ ಸಲುವಾಗಿ ಬಸವೇಶ್ವರ ಮೂರ್ತಿಯ್ನು ತಾತ್ಕಾಲಿಕವಾಗಿ ಇಂದಿರಾ ಗಾಜಿನ ಮನೆಗೆ ಸ್ಥಳಾಂತರ ಮಾಡಲಾಗಿದೆ. ಈ ಕುರಿತು ಈಗಾಗಲೇ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಲಿಂಗಾಯತ ಸಮುದಾಯದ ಮುಖಂಡರ ಜೊತೆ ಸಭೆ ನಡೆಸಿ ಒಪ್ಪಿಗೆ ಕೂಡ ಪಡೆಯಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಗಂಗಾಧರ ಅವರು ಹೇಳಿದರು.

‘ಮೂರ್ತಿ ಸ್ಥಳಾಂತರಕ್ಕೆ ಮುಂದಾಗಿದ್ದ ಅಧಿಕಾರಿಗಳು ಅದನ್ನು ಗೋದಾಮಿನಲ್ಲಿ ಇಡಲು ನಿರ್ಧರಿಸಿದ್ದವು. ಅದಕ್ಕೆ ನಾವು ಆಕ್ಷೇಪ ವ್ಯಕ್ತಪಡಿಸಿ, ಇಂದಿರಾ ಗಾಜಿನ ಮನೆಯಲ್ಲಿ ಸ್ಥಳ ಗೊತ್ತುಪಡಿಸಿ ಅಲ್ಲಿಗೆ ಸ್ಥಳಾಂತರಿಸುವಂತೆ ಸೂಚನೆ ನೀಡಿದ್ದೆವು. ಅದರಂತೆ, ಅಧಿಕಾರಿಗಳು ಸ್ಥಳಾಂತರಿಸಿದ್ದಾರೆ. ಫ್ಲೈಓವರ್ ಕಾಮಗಾರಿ ಮುಗಿಯುತ್ತಿದ್ದಂತೆ ಮೂರ್ತಿಯನ್ನು ಮುಂಚೆ ಇದ್ದ ಸ್ಥಳದಲ್ಲೇ ಮತ್ತೆ ಪ್ರತಿಷ್ಠಾಪನೆ ಮಾಡುತ್ತೇವೆ’ ಎಂದು ಮೇಯರ್ ಈರೇಶ ಅಂಚಟಗೇರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಮೂರ್ತಿ ಸ್ಥಳಾಂತರ ವಿಷಯ ಗೊತ್ತಾಗುತ್ತಿದ್ದಂತೆ, ಸ್ಥಳಕ್ಕೆ ಬಂದ ಕೆಲ ಲಿಂಗಾಯತ ಮುಖಂಡರು ಕಾರ್ಯಾಚರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮೂರ್ತಿಯನ್ನು ಸ್ಥಳಾಂತರ ಮಾಡುವ ಬದಲು, ಅದರ ಪಕ್ಕದಲ್ಲಿ ಕಾಮಗಾರಿ ಮಾಡಬಹುದಿತ್ತು. ಮೂರ್ತಿ ಸ್ಥಳಾಂತರಕ್ಕೆ ಉತ್ಸಾಹ ತೋರಿರುವ ಅಧಿಕಾರಿಗಳು, ಮುಂದೆ ಪುನರ್ ಪ್ರತಿಷ್ಠಾಪನೆಗೆ ಮೀನಮೇಷ ಎಣಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.