ADVERTISEMENT

ಲಾಕ್‌ಡೌನ್‌ನಲ್ಲಿ ಜನರ ಕಷ್ಟಕ್ಕೆ ನೆರವಾದ ಖಾತರಿ ಯೋಜನೆ: ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 15:01 IST
Last Updated 8 ಏಪ್ರಿಲ್ 2021, 15:01 IST
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ   

ಬಸವಕಲ್ಯಾಣ: `ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಇರದಿದ್ದರೆ ಲಾಕ್‌ಡೌನ್ ನಲ್ಲಿ ಹಾಹಾಕಾರದ ಪರಿಸ್ಥಿತಿ ಇರುತ್ತಿತ್ತು. ಕಾಂಗ್ರೆಸ್‌ ರೂಪಿಸಿದ ಯೋಜನೆಯಿಂದ ಬಿಜೆಪಿ ಸಹ ಸಂಕಷ್ಟದಿಂದ ಪಾರಾಗಲು ಸಾಧ್ಯವಾಯಿತು' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲ್ಲೂಕಿನ ಹಾರಕೂಡದಲ್ಲಿ ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಾಲಾ ಬಿ.ನಾರಾಯಣರಾವ್ ಪರ ಪ್ರಚಾರ ಸಭೆ ಹಾಗೂ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

`ಬಿಜೆಪಿಯವರು ಯಾವುದೇ ಮಹತ್ವದ ಯೋಜನೆ ಜಾರಿಗೊಳಿಸಿಲ್ಲ. ಒಂದುವೇಳೆ ಉದ್ಯೋಗ ಖಾತರಿ
ಯೋಜನೆ ಇರದಿದ್ದರೆ ಬಡವರು, ಕೂಲಿಕಾರ್ಮಿಕರು ಲಾಕ್ ಡೌನ್‌ನಲ್ಲಿ ಉಪವಾಸ ಇರುತ್ತಿದ್ದರಲ್ಲವೇ? ಆದರೂ, ಬಿಜೆಪಿಯವರು ನಮ್ಮಷ್ಟು ಅಭಿವೃದ್ಧಿ ಯಾರೂ ಮಾಡಿಲ್ಲ ಎನ್ನುತ್ತಾರೆ’ ಎಂದು ಟೀಕಿಸಿದರು.

ADVERTISEMENT

`ದೆಹಲಿಯಲ್ಲಿ ಮೂರು ತಿಂಗಳಿಂದ ರೈತರು ಧರಣಿ ನಡೆಸುತ್ತಿದ್ದರೂ ಯಾರೂ ಕೇಳುತ್ತಿಲ್ಲ. ಬಿಜೆಪಿ ಎಲ್ಲ ರಂಗಗಳಲ್ಲಿ ವಿಫಲವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆ ಜನರು ಭ್ರಮನಿರಸನಗೊಂಡಿದ್ದಾರೆ. ಅಚ್ಛೆ ದಿನ ಬಂದಿಲ್ಲ. ಬೆಲೆ ಏರಿಕೆ ನಿಂತಿಲ್ಲ’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

`ಎಸ್ಮಾ ಜಾರಿಗೊಳಿಸಿದರೆ ಸಾರಿಗೆ ನೌಕರರ ಸಮಸ್ಯೆ ಬಗೆಹರಿಯಲಾರದು. ನೌಕರರು ಮುಷ್ಕರ ಹೂಡಿ ಸಂಕಟಷ್ಟದಲ್ಲಿದ್ದರೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಈ ಕ್ಷೇತ್ರದಲ್ಲಿ ಮಾಜಿ ಶಾಸಕ ಎಂ.ಜಿ.ಮುಳೆ ಅವರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಗ್ನರಾಗಿದ್ದರು. ಇವರಿಗೆ ನೌಕರರು ಮುಖ್ಯವೋ ಮುಳೆ ಮುಖ್ಯವೋ ತಿಳಿಯದಾಗಿದೆ’ ಎಂದರು.

ರಾಜ್ಯದಲ್ಲಿ ಮುಖ್ಯಮಂತ್ರಿ ವಿರುದ್ಧ ಸಚಿವರೊಬ್ಬರು ದೂರು ನೀಡಿದ್ದು 60 ವರ್ಷದಲ್ಲಿ ಇಂಥ ಘಟನೆ ಇದೇ ಮೊದಲಾಗಿದೆ. ಇದೆಲ್ಲವನ್ನೂ ಗಮನಿಸಿ ಬಸವಕಲ್ಯಾಣ, ಮಸ್ಕಿ, ಬೆಳಗಾವಿಯಲ್ಲಿನ ಮತದಾರರು ಕಾಂಗ್ರೆಸ್ ಕಡೆ ಮುಖ ಮಾಡಿದ್ದು ಮೂರೂ ಸ್ಥಳಗಳಲ್ಲಿ ನಮ್ಮ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ' ಎಂದು ಹೇಳಿದರು.

‘ಸಿದ್ದರಾಮಯ್ಯಗೆ ಮಾಡಲು ಕೆಲಸವಿಲ್ಲ. ಆದ್ದರಿಂದ ಏನಾದರೂ ಹೇಳುತ್ತಾರೆ ಎನ್ನುತ್ತಾರೆ. ವಿರೋಧ ಪಕ್ಷದ ನಾಯಕನ ಕೆಲಸವೇ ಸರ್ಕಾರದ ತಪ್ಪುಗಳನ್ನು ಹೆಕ್ಕಿ ತೆಗೆಯುವುದಾಗಿದ್ದು ಅದನ್ನು ನಾನು ಮಾಡುತ್ತಿದ್ದೇನೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.