ADVERTISEMENT

ಬಸವಣ್ಣರ ಪಠ್ಯ ಮತ್ತೆ ಪರಿಷ್ಕರಣೆ: ಸಿ.ಎಂ ಬೊಮ್ಮಾಯಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 6:02 IST
Last Updated 4 ಜೂನ್ 2022, 6:02 IST
ಸಿ.ಎಂ ಬೊಮ್ಮಾಯಿ
ಸಿ.ಎಂ ಬೊಮ್ಮಾಯಿ   

ಬೆಂಗಳೂರು: ಪಠ್ಯಪುಸ್ತಕದಲ್ಲಿ ಬಸವಣ್ಣನವರ ಕುರಿತ ಅಂಶವನ್ನು ಸೂಕ್ತ ಪರಿಷ್ಕರಣೆ ಮಾಡುವುದರ ಜೊತೆಗೆ ನಾಡಗೀತೆ ವಿಕೃತಗೊಳಿಸಿದ ವ್ಯಕ್ತಿಗಳ ಬಗ್ಗೆ ಕಾನೂನಾತ್ಮಕ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಪಠ್ಯ ಪುಸ್ತಕ ಪರಿಷ್ಕರಣೆ ಗೊಂದಲಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಜತೆ ಸಭೆ ನಡೆಸಿದ ಬಳಿಕ ಅವರು ಶುಕ್ರವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಪ್ರಸ್ತುತ ಪರಿಷ್ಕರಿಸಿದ ಪಠ್ಯಪುಸ್ತಕದಲ್ಲಿ ಯಾವುದೇ ಆಕ್ಷೇಪಾರ್ಹ ವಿಷಯಗಳು ಇದ್ದಲ್ಲಿ ಅವುಗಳನ್ನು ಮತ್ತೊಮ್ಮೆ ಪರಿಷ್ಕರಿಸಲು ಸರ್ಕಾರ ಮುಕ್ತ ಮನಸ್ಸು ಹೊಂದಿದೆ ಎಂದೂ ಹೇಳಿದ್ದಾರೆ.

ಸಮಿತಿ ವಿಸರ್ಜನೆ: ಪಠ್ಯಪುಸ್ತಕ ಪರಿಷ್ಕರಣೆ ಕಾರ್ಯ ಮುಗಿದಿರುವುದರಿಂದ ಹಾಲಿ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯನ್ನು ವಿಸರ್ಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯ ಸಮಿತಿ ರಚಿಸಿದ ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿ ರಾಷ್ಟ್ರಕವಿ ಕುವೆಂಪು ಕುರಿತಾದ 7 ಗದ್ಯ ಮತ್ತು ಪದ್ಯಗಳು ಸೀಮಿತವಾಗಿದ್ದರೆ, ಪ್ರಸ್ತುತ ಪರಿಷ್ಕರಣಾ ಸಮಿತಿ 10ಕ್ಕೆ ಏರಿಸಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ನಾಡಪ್ರಭು ಕೆಂಪೇಗೌಡರ ಕುರಿತಾದ ಪಾಠವನ್ನು ಹೊಸದಾಗಿ ಸೇರಿಸಲಾಗಿದೆ. ಈ ಹಿಂದಿನ ಪಠ್ಯ ಪುಸ್ತಕದಲ್ಲಿ ಪರಿಚಯಿಸಲಾಗಿದ್ದ ಇಸ್ಲಾಂ ಮತ್ತು ಕ್ರೈಸ್ತ ಧರ್ಮದ ಜೊತೆಗೆ ಹಿಂದೂ ಧರ್ಮದ ವಿಷಯವನ್ನೂ ಸೇರ್ಪಡೆ ಮಾಡಿ ಪರಿಚಯಿಸಲಾಗಿದೆ ಎಂದೂ ತಿಳಿಸಿದ್ದಾರೆ.

ಶಾಲಾ ಪಠ್ಯಕ್ರಮ ಕಾಲ ಕಾಲಕ್ಕೆ ತಕ್ಕಂತೆ ಪರಿಷ್ಕರಿಸಲಾಗುತ್ತದೆ. ಈ ಹಿಂದೆ ಜಾರಿಯಾದ ಕೆಲವು ಪಠ್ಯಪುಸ್ತಕದಲ್ಲಿ ಕೆಲವು ಆಕ್ಷೇಪಾರ್ಹ ಅಂಶಗಳಿದ್ದವು. ಆದ ಕಾರಣ ಸಮಾಜ ವಿಜ್ಞಾನ ಮತ್ತು ಕನ್ನಡ ಭಾಷಾ ವಿಷಯಕ್ಕೆ ಸಂಬಂಧಿಸಿದಂತೆ ಪಠ್ಯದಲ್ಲಿ ಅಲ್ಪ ಪರಿಷ್ಕರಣೆ ಮಾಡಲಾಗಿದೆ ಎಂದರು.

ಪಂಡಿತಾರಾಧ್ಯ ಸ್ವಾಮೀಜಿ ಮತ್ತು ಇತರ ಸ್ವಾಮೀಜಿಗಳು ಪಠ್ಯಪುಸ್ತಕದಲ್ಲಿ ಬಸವಣ್ಣನವರ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಆಕ್ಷೇಪಗಳನ್ನು ಎತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಬರಗೂರು ಸಮಿತಿಯಿಂದ ರಚಿತವಾದ ಪಠ್ಯಪುಸ್ತಕ ಮತ್ತು ಈಗಿನ ಪರಿಷ್ಕೃತ ಪಠ್ಯಪುಸ್ತಕದಲ್ಲಿ ಸಮಾನ ಅಂಶಗಳನ್ನು ಬಿಟ್ಟು, ಈಗಿನ ಪುಸ್ತಕದಲ್ಲಿ ಬಸವಣ್ಣ ಅವರ ವಿಷಯದ ಅಂಶವನ್ನು ಯಾರ ಭಾವನೆಗೂ ಧಕ್ಕೆ ಆಗದಂತೆ ಪರಿಷ್ಕರಿಸಲಾಗುವುದು ಎಂದೂ ಹೇಳಿದ್ದಾರೆ.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶಯದಂತೆ ಕುವೆಂಪು ಬರೆದ ನಾಡಗೀತೆಯನ್ನು ವಿಕೃತಗೊಳಿಸಿದವರ ವಿರುದ್ಧ ಸೈಬರ್ ಕ್ರೈಮ್ ಘಟಕದ ಮೂಲಕ ತನಿಖೆ ನಡೆಸಲಾಗುವುದು ಎಂದೂ ಅವರು ಹೇಳಿದ್ದಾರೆ.

ಪಿಯು ಪಠ್ಯ ಪರಿಷ್ಕರಣೆ ಕತೆಯೇನು?:

ಪಿಯು ಪಠ್ಯಪುಸ್ತಕ ಪರಿಷ್ಕರಣೆಯನ್ನು ರೋಹಿತ್ ಚಕ್ರತೀರ್ಥ ಸಮಿತಿಗೆ ವಹಿಸಿ ಕಳೆದ ಫೆಬ್ರುವರಿಯಲ್ಲಿ ಆದೇಶ ಹೊರಡಿಸಲಾಗಿತ್ತು. ಆದರೆ, ಅದನ್ನು ರದ್ದುಪಡಿಸುವ ಬಗ್ಗೆ ಯಾವುದೇ ಮಾಹಿತಿಯನ್ನು ಮುಖ್ಯಮಂತ್ರಿ ನೀಡಿಲ್ಲ.

ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಆದ ಎಡವಟ್ಟುಗಳನ್ನು ‘ಪ್ರಜಾವಾಣಿ’ ಪ್ರಕಟಿಸಿತ್ತು. ಈ ಬಗ್ಗೆ ನಾಡಿನಾದ್ಯಂತ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.