ADVERTISEMENT

ಬಹುಮತ ಸಾಬೀತಿನ ವ್ಯಾಖ್ಯೆ ಬದಲಿಸಿದ್ದ ಬೊಮ್ಮಾಯಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 19:45 IST
Last Updated 27 ಜುಲೈ 2021, 19:45 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್‌.ಆರ್‌. ಬೊಮ್ಮಾಯಿ ಅವರು ಎಂಟು ತಿಂಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಬಹುಮತ ಸಾಬೀತಿಗೆ ಅವಕಾಶ ನೀಡದೇ ನೇರವಾಗಿ ರಾಷ್ಟ್ರಪತಿ ಆಳ್ವಿಕೆ ಜಾರಿಮಾಡಿದ್ದ ಆಗಿನ ಕೇಂದ್ರ ಸರ್ಕಾರದ ನಿರ್ಧಾರ ಮತ್ತು ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಐತಿಹಾಸಿಕ ದಾಖಲೆಯಾಗಿ ಉಳಿದಿದೆ.

1989ರ ಏಪ್ರಿಲ್‌ನಲ್ಲಿ ಆಡಳಿತ ಪಕ್ಷದ ಕೆಲವು ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡಿ, ಸರ್ಕಾರಕ್ಕೆ ತಮ್ಮ ಬೆಂಬಲವಿಲ್ಲ ಎಂದು ಘೋಷಿಸಿದ್ದರು. ಮುಖ್ಯಮಂತ್ರಿಯಾಗಿದ್ದ ಎಸ್‌.ಆರ್‌. ಬೊಮ್ಮಾಯಿ ಅವರು ರಾಜ್ಯಪಾಲರನ್ನು ಭೇಟಿ ಮಾಡಿ, ‘ಅಧಿವೇಶನ ಕರೆದು ಬಹುಮತ ಸಾಬೀತುಮಾಡುತ್ತೇನೆ’ ಎಂದು ಅವಕಾಶ ಕೋರಿದ್ದರು. ಆದರೆ ಅಂದಿನ ರಾಷ್ಟ್ರಪತಿ ಆರ್‌.ವೆಂಕಟರಾಮನ್ ಅವರು ಬೊಮ್ಮಾಯಿ ನೇತೃತ್ವದ ಸರ್ಕಾರವನ್ನು ವಜಾಗೊಳಿಸಿ 1989ರ ಏಪ್ರಿಲ್‌ 21ರಂದು ಆದೇಶ ಹೊರಡಿಸಿದ್ದರು. ಬಳಿಕ ರಾಜ್ಯದಲ್ಲಿ ರಾಷ್ಟ್ರಪತಿಆಳ್ವಿಕೆ ಹೇರಿದ್ದರು.

ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಬೊಮ್ಮಾಯಿ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು. ಅವರ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿತ್ತು. ಬೊಮ್ಮಾಯಿ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆಯ ನಂತರ 1994ರಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು.

ADVERTISEMENT

‘ಸರ್ಕಾರವು ಬಹುಮತ ಹೊಂದಿದೆಯೇ ಇಲ್ಲವೇ ಎಂಬುದನ್ನು ವಿಧಾನಸಭೆಯ ಅಧಿವೇಶನವೇ ನಿರ್ಧರಿಸಬೇಕು. ರಾಜಭವನ ಅಥವಾ ರಾಷ್ಟ್ರಪತಿ ಭವನದಲ್ಲಿ ಇದನ್ನು ನಿರ್ಧರಿಸುವುದಲ್ಲ’ ಎಂದು ತೀರ್ಪಿನಲ್ಲಿ ಹೇಳಲಾಗಿತ್ತು. ಬಹುಮತ ಸಾಬೀತುಪಡಿಸುವುದಕ್ಕೆ ಸಂಬಂಧಿಸಿ ಬೇರೆ ಬೇರೆ ರಾಜ್ಯಗಳಲ್ಲಿ ಬಿಕ್ಕಟ್ಟು ತಲೆದೋರಿದಾಗಲೆಲ್ಲ ಎಸ್‌.ಆರ್‌. ಬೊಮ್ಮಾಯಿ ಪ್ರಕರಣದ ಆಧಾರದಲ್ಲೇ ಸುಪ್ರೀಂ ಕೋರ್ಟ್‌ ತೀರ್ಮಾನಕ್ಕೆ ಬರುತ್ತಿದೆ.

ಯಡಿಯೂರಪ್ಪನವರುಮುಖ್ಯಮಂತ್ರಿಯಾಗಿ2018ರಲ್ಲಿ ಅಧಿಕಾರ ಸ್ವೀಕರಿಸಿದಾಗ, ಸದನದಲ್ಲಿ ಬಹುಮತ ಸಾಬೀತುಮಾಡಿರಲಿಲ್ಲ. ರಾಜ್ಯಪಾಲರ ಎದುರು ಮಾತ್ರವೇ ತಮ್ಮ ಬೆಂಬಲಿಗ ಶಾಸಕರ ಪಟ್ಟಿ ಪ್ರದರ್ಶಿಸಿದ್ದರು. ಅವರು ಸದನದಲ್ಲಿ ಬಹುಮತ ಸಾಬೀತುಮಾಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.ಸದನದಲ್ಲಿ ಬಹುಮತ ಸಾಬೀತುಮಾಡಿ ಎಂದು ಯಡಿಯೂರಪ್ಪ ಅವರಿಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಆಗಲೂ ಎಸ್‌.ಆರ್‌. ಬೊಮ್ಮಾಯಿ ಮತ್ತುಕೇಂದ್ರ ಸರ್ಕಾರದ ನಡುವಿನ
ಪ್ರಕರಣವನ್ನು ನ್ಯಾಯಾಲಯ ಉಲ್ಲೇಖಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.