ADVERTISEMENT

ಪ್ರಧಾನಿ ಭೇಟಿ ಬಳಿಕ ಸಂಪುಟ ವಿಸ್ತರಣೆ: ಸಿಎಂ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 9:37 IST
Last Updated 28 ಜುಲೈ 2021, 9:37 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ   

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನವೇ ಬಸವರಾಜ ಬೊಮ್ಮಾಯಿ ಅವರು ಹಲವು ಘೋಷಣೆಗಳನ್ನು ಮಾಡಿದ್ದಾರೆ. ಕೆಲವು ಯೋಜನೆಗಳಲ್ಲಿ ನೀಡುವ ಮಾಸಾಶನ ಹೆಚ್ಚಳ ಮಾಡಿರುವುದಾಗಿ ತಿಳಿಸಿದ್ದಾರೆ.

ಬುಧವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ನಡೆದ ಮೊದಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೊಮ್ಮಾಯಿ, 'ದಕ್ಷ, ಜನ ಪರ ಆಡಳಿತ ನನ್ನ ಸರ್ಕಾರದ ಗುರಿ. ಸಮಾಜದ ಕಟ್ಟ ಕಡೆಯ ದೀನ ದಲಿತ, ಹಿಂದುಳಿದ, ಕೂಲಿಕಾರರ ಪರವಾಗಿ ಸರ್ಕಾರ ಕೆಲಸ ಮಾಡುತ್ತದೆ. ನಾನು ರಬ್ಬರ್ ಸ್ಟಾಂಪ್ ಅಲ್ಲ, ನನ್ನ ಆಡಳಿತ ಜನ ಆಡಳಿತದ ಸ್ಟಾಂಪ್ ಆಗಿರುತ್ತದೆ' ಎಂದರು.

ಸಂಪುಟ ವಿಸ್ತರಣೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ನಂತರ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ತಿಳಿಸಿದರು.

ADVERTISEMENT

15 ದಿನಗಳಲ್ಲಿ ಎಲ್ಲ ಇಲಾಖೆಗಳ ಬಾಕಿ ಉಳಿದ ಕಡತಗಳ ವಿಲೇವಾರಿ ಮಾಡುವ 'ಕಡತ ಯಜ್ಞ' ನಡೆಸಲಾಗುವುದು. ಆದೇಶ ಮಾಡುವುದು ಮಾತ್ರವಲ್ಲ, ಆದೇಶದ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುತ್ತದೆ. ಇಲಾಖೆಗಳ ಮಧ್ಯೆ ಸಮನ್ವಯಕ್ಕೆ ಒತ್ತು ನೀಡಲಾಗುವುದು ಎಂದರು.

ಎಲ್ಲಾ ಕಾರ್ಯಕ್ರಮಗಳು ಸಮಯಬದ್ಧವಾಗಿ ನಡೆಯಬೇಕು. ಅಧಿಕಾರಿಗಳಲ್ಲಿ 'ಚಲ್ತಾ ಹೈ' ಎಂಬ ಧೋರಣೆಯನ್ನು ಸಹಿಸುವುದಿಲ್ಲ ಎನ್ನುವ ಮೂಲಕ ಇದೇ ಸಮಯದಲ್ಲಿ ಆಡಳಿತ ವರ್ಗಕ್ಕೆ ಎಚ್ಚರಿಕೆಯನ್ನೂ ರವಾನಿಸಿದರು.

ಎಲ್ಲಾ ಇಲಾಖೆಗಳಲ್ಲಿ ಅನಗತ್ಯ ವೆಚ್ಚವನ್ನು ಮಾ. 31ರೊಳಗೆ ಶೇಕಡ 5ರಷ್ಟು ತಗ್ಗಿಸಬೇಕು. ಆಡಳಿತಕ್ಕೆ ಹೊಸ ದಿಕ್ಸೂಚಿ ನೀಡಲಾಗುವುದು ಎಂದು ಮುಂದಿನ ಹೆಜ್ಜೆಯ ಕುರಿತು ಸುಳಿವು ನೀಡಿದರು.

ನಾಳೆ ಪ್ರವಾಹ ಪೀಡಿತ ಕಾರಾವಾರ ಜಿಲ್ಲೆಯ ಪ್ರವಾಸ ನಡೆಸುವುದಾಗಿ ಹೇಳಿದರು.

ಸಿಎಂ ಆದ ಬಳಿಕ ಮೊದಲ ಘೋಷಣೆಗಳು:

*ರೈತರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ಹೊಸ ಶಿಷ್ಯ ವೇತನ ನೀಡಲು ₹ 1,000 ಕೋಟಿ.

*ಸಂಧ್ಯಾ ಸುರಕ್ಷಾ ಯೋಜನೆಯಡಿ ಮಾಸಾಶನ ₹ 1,000 ದಿಂದ ₹ 1,200ಕ್ಕೆ ಏರಿಕೆ. ವಿಧವಾ ವೇತನ ₹ 600 ರಿಂದ ₹ 800ಕ್ಕೆ ಏರಿಕೆ.

*ಅಂಗ ವಿಕಲರ ವೇತನ ₹ 600 ರಿಂದ ₹ 800ಕ್ಕೆ ಏರಿಕೆ.

ಬೊಮ್ಮಾಯಿ ಅವರು ಇಂದು ಅಧಿಕಾರಿಗಳ ಜತೆ ಸಭೆ ನಡೆಸಿದರು ಹಾಗೂ ಶಿಗ್ಗಾವಿ-ಸವಣೂರು ವಿಧಾನಸಭೆ ಕ್ಷೇತ್ರದ ಮತದಾರರು ಮತ್ತು ಅಭಿಮಾನಿಗಳನ್ನು ಉದ್ದೇಶಿಸಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.