
ಬೆಂಗಳೂರು: ಕರಾವಳಿಯಲ್ಲಿ ನಡೆದ ಮೂರು ಹತ್ಯೆಗಳ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕಾಂಗ್ರೆಸ್ ಪಕ್ಷವು ತರಾಟೆಗೆ ತೆಗೆದುಕೊಂಡಿದೆ.
ಸೋಮವಾರ ಸರಣಿ ಟ್ವೀಟ್ ಮಾಡಿರುವ ಕೆಪಿಸಿಸಿ, ‘10 ದಿನಗಳಲ್ಲಿ ಕರಾವಳಿಯಲ್ಲಿ 3 ಹತ್ಯೆಯಾಗಿವೆ. ಯಾವೊಂದು ಹತ್ಯೆಯ ಹಿಂದಿನ ಉದ್ದೇಶ ಇದುವರೆಗೂ ತನಿಖೆಯಿಂದ ತಿಳಿದುಬಂದಿಲ್ಲ. ಆದರೆ, ಮುಖ್ಯಮಂತ್ರಿಗಳು ಪಕ್ಷಪಾತ ತೋರುವ ಮೂಲಕ ರಾಜ್ಯಕ್ಕೆ ಯಾವ ಸಂದೇಶ ಕೊಡಲು ಹೊರಟಿದ್ದಾರೆ?’ ಎಂದು ಪ್ರಶ್ನಿಸಿದೆ.
‘ಈ ವಿಷಯದಲ್ಲಿ ಸಂಘವನ್ನು ಓಲೈಸಲು ರಾಜಧರ್ಮ ಕೈಬಿಡುವುದಕ್ಕಿಂತ ರಾಜೀನಾಮೆ ನೀಡುವುದೇ ಲೇಸು ಬಸವರಾಜ ಬೊಮ್ಮಾಯಿ ಅವರೇ’ ಎಂದು ಕಾಂಗ್ರೆಸ್ ಟ್ವೀಟಿಸಿದೆ.
ಜನತಾ ಪರಿವಾರದಿಂದ ಬಿಜೆಪಿಗೆ ವಲಸೆ ಬಂದಿರುವ ಬಸವರಾಜ ಬೊಮ್ಮಾಯಿ ಅವರು, 'ಸಂಘಪರಿವಾರಿ' ಎಂದು ಗುರುತಿಸಿಕೊಳ್ಳಲು ಸಾಕಷ್ಟು ಒದ್ದಾಡುತ್ತಿದ್ದಾರೆ. ಅಸ್ತಿತ್ವ ಹಾಗೂ ಹುದ್ದೆ ಉಳಿಸಿಕೊಳ್ಳಲು ಅವರಿಗೆ ಅದು ಅನಿವಾರ್ಯ ಎಂದು ಕೆಪಿಸಿಸಿ ವ್ಯಂಗ್ಯವಾಡಿದೆ.
‘ಅವರ(ಬಸವರಾಜ ಬೊಮ್ಮಾಯಿ) ಸಂಘದ ಓಲೈಕೆ ಪ್ರಯತ್ನ ಹಾಗೂ ಕೋಮುಕ್ರಿಮಿಗಳಿಗೆ ಬೆಂಬಲಿಸಿದ್ದೇ ಇಂದು ರಾಜ್ಯದ ರಕ್ತಸಿಕ್ತ ಸ್ಥಿತಿಗೆ ಕಾರಣ’ ಎಂದು ಆರೋಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.