ಬೆಂಗಳೂರು: ಭಾರಿ ಪೈಪೋಟಿಯ ಮಧ್ಯೆಯೂ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರು ಮತ್ತೊಮ್ಮೆ ಸಂಪುಟದಲ್ಲಿ ಸ್ಥಾನ ಪಡೆದಿರುವುದು, ಪಕ್ಷದಲ್ಲಿ ಬಹುತೇಕ ನಾಯಕರ ಹುಬ್ಬೇರುವಂತೆ ಮಾಡಿದೆ.
ಶಶಿಕಲಾ ಹೆಸರನ್ನು ಪಟ್ಟು ಹಿಡಿದು ಸಚಿವ ಸ್ಥಾನದ ಪಟ್ಟಿಗೆ ಕೊನೆ ಗಳಿಗೆಯಲ್ಲಿ ಸೇರಿಸುವಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಪಾತ್ರ ಮಹತ್ವದ್ದು ಎಂದು ಮೂಲಗಳು ತಿಳಿಸಿವೆ.
ಮಂಗಳವಾರ ರಾತ್ರಿಯವರೆಗೂ ಗೊಲ್ಲ ಸಮುದಾಯಕ್ಕೆ ಸೇರಿದ ಪೂರ್ಣಿಮಾ ಶ್ರೀನಿವಾಸ್ ಅವರ ಹೆಸರೇ ಆಖೈರುಗೊಂಡು ಪಟ್ಟಿಯಲ್ಲಿತ್ತು. ಆದರೆ, ಕೆಲವು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಜೊಲ್ಲೆ, ಬುಧವಾರ ಬೆಳಿಗ್ಗೆ 10 ಗಂಟೆಯ ವೇಳೆಗೆ ಪಟ್ಟಿಗೆ ತಮ್ಮ ಹೆಸರು ಸೇರಿಸಿದ್ದು ಖಚಿತಗೊಂಡ ಬಳಿಕವೇ ಬೆಳಿಗ್ಗೆ 11.15 ರ ವಿಮಾನದಲ್ಲಿ ದೆಹಲಿಯಿಂದ ಬೆಂಗಳೂರಿನತ್ತ ದೌಡಾಯಿಸಿದರು.
ಹೀಗಾಗಿ ಅವರು ಪ್ರಮಾಣ ವಚನಕ್ಕೆ ಅರ್ಧ ಗಂಟೆ ತಡವಾಗಿ ಬಂದರು. ಅವರಿಗಾಗಿ ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಭವನದವರೆಗೆ ಎಲ್ಲ ರಸ್ತೆಗಳಲ್ಲಿ ವಾಹನಗಳ ಸಂಚಾರ ತಡೆ (ಜಿರೋ ಟ್ರಾಫಿಕ್) ಹಿಡಿಯಲಾಗಿತ್ತು.
‘ಶಶಿಕಲಾ ಅವರ ಹೆಸರು ಸೇರಿಸುವಲ್ಲಿಅಂತಿಮ ಕ್ಷಣದವರೆಗೂ ಶ್ರಮ ವಹಿಸಿದ್ದು ಖುದ್ದು ಸಂತೋಷ್ ಅವರೇ. ಸಚಿವರಾಗಿ ಕಳಪೆ ನಿರ್ವಹಣೆ ಮತ್ತು ಮೊಟ್ಟೆ ಖರೀದಿ ಟೆಂಡರ್‌ನಲ್ಲಿ ಕಮಿಷನ್‌ಗೆ ಬೇಡಿಕೆ ಇಟ್ಟ ಆರೋಪದ ಪ್ರಕರಣ ಬಯಲಿಗೆ ಬಂದ ಬಳಿಕ, ಶಶಿಕಲಾ ಅವರು ಹೆಸರು ಪರಿಶೀಲನೆಯಲ್ಲಿ ಇರಲೇ ಇಲ್ಲ. ಪೂರ್ಣಿಮಾ ಅವರಿಗೆ ಸಚಿವ ಸ್ಥಾನ ನೀಡಿ ಗೊಲ್ಲ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ಲೆಕ್ಕಾಚಾರ ಇತ್ತು’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
‘ಮುಖ್ಯಮಂತ್ರಿ ಬದಲಾವಣೆ ವೇಳೆಗೆ ದೆಹಲಿಗೆ ಹೋಗಿ ತಳವೂರಿದ್ದ ಶಶಿಕಲಾ ಅವರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದರು. ನಿಪ್ಪಾಣಿಯಲ್ಲಿ ಭಾರೀ ಪ್ರವಾಹ ಬಂದು ಜನ ಸಂಕಷ್ಟದಲ್ಲಿದ್ದರೂ ಅತ್ತ ಸುಳಿಯಲಿಲ್ಲ. ಶಶಿಕಲಾ ಅವರ ಪತಿ ಅಣ್ಣಾ ಸಾಹೇಬ್ ಜೊಲ್ಲೆ ಸಂಸದರೂ ಆಗಿದ್ದಾರೆ. ಪಕ್ಷದಲ್ಲಿ ಕುಟುಂಬ ರಾಜಕಾರಣ ಪ್ರೋತ್ಸಾಹಿಸುವುದಿಲ್ಲ ಎಂದು ಹೇಳುತ್ತಲೇ ಒಂದೇ ಮನೆಯ ಇಬ್ಬರಿಗೆ ಅಧಿಕಾರ ನೀಡಲಾಗಿದೆ’ ಎಂಬ ಚರ್ಚೆ ಪಕ್ಷದ ವಲಯದಲ್ಲಿ ಶುರುವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.