ADVERTISEMENT

ಕಾರ್ಮಿಕರಿಗೆ ಕಲ್ಯಾಣ ಮಂಟಪಗಳಲ್ಲಿ ಆಶ್ರಯ: ಗೃಹ ಸಚಿವ ಬೊಮ್ಮಾಯಿ

ವಲಸೆ ಬಂದವರಿಗೆ ಉಳಿದುಕೊಳ್ಳಲು ರಾಜ್ಯದ ಎಲ್ಲ ನಗರ, ಪಟ್ಟಣಗಳಲ್ಲಿ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 18:41 IST
Last Updated 30 ಮಾರ್ಚ್ 2020, 18:41 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ನಗರ ಮತ್ತು ಪಟ್ಟಣಗಳಲ್ಲಿ ವಲಸೆ ಕಾರ್ಮಿಕರಿಗೆ ಉಳಿದುಕೊಳ್ಳಲು ಕಲ್ಯಾಣ ಮಂಟಪಗಳಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಉನ್ನತ ಅಧಿಕಾರಿಗಳ ಸಭೆಯ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದರು.

ವಲಸೆ ಕಾರ್ಮಿಕರು ಬೇರೆ ಕಡೆಗಳಿಗೆ ಹೋಗದಂತೆ ಕ್ರಮ ತೆಗೆದುಕೊಳ್ಳಬೇಕಾಗಿದೆ. ಆದ್ದರಿಂದ ಕಲ್ಯಾಣ ಮಂಟಪಗಳಲ್ಲಿ ಈ ಕಾರ್ಮಿಕರಿಗೆ ಊಟ ಮತ್ತು ವಸತಿ ವ್ಯವಸ್ಥೆ ಮಾಡುವುದಾಗಿ ಅವರು ಹೇಳಿದರು.

ADVERTISEMENT

ಬೆಂಗಳೂರು ನಗರದಲ್ಲಿ ದಿನ ನಿತ್ಯದ ಅಗತ್ಯ ವಸ್ತುಗಳನ್ನು ಆಯಾ ಪ್ರದೇಶಗಳಲ್ಲೇ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುವುದು. ದಿನಸಿ, ತರಕಾರಿ, ಹಣ್ಣುಗಳನ್ನು ಬೇರೆ ಪ್ರದೇಶಕ್ಕೆ ಹೋಗಿ ಖರೀದಿಸಲು ಅವಕಾಶವಿಲ್ಲ. ಸಮೀಪದ ಅಂಗಡಿಗಳಿಗೆ ಕಾಲು ನಡಿಗೆಯಲ್ಲೇ ಹೋಗಿ ಅಗತ್ಯ ವಸ್ತುಗಳನ್ನು ಖರೀದಿ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಮನೆ ಮಾಲೀಕರು ಬಾಡಿಗೆದಾರರು ಮತ್ತು ಪಿಜಿಯಲ್ಲಿ ಇರುವವರಿಗೆ ತೊಂದರೆ ಕೊಡಬಾರದು ಎಂದು ಹೇಳಿದರು.

ವೈದ್ಯರು, ನರ್ಸ್‌ಗಳು ಸೇರಿದಂತೆ ಯಾರನ್ನೂ ಮನೆ ಖಾಲಿ ಮಾಡುವಂತೆ ಒತ್ತಡ ಹೇರಬಾರದು. ಒಂದು ವೇಳೆ ಆ ರೀತಿ ಮಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೊಮ್ಮಾಯಿ ಹೇಳಿದರು.

ಬಿಬಿಎಂಪಿಗೆ ಸೇರಿದ ಕಟ್ಟಡಗಳಿಂದ ಈ ತಿಂಗಳು ಬಾಡಿಗೆ ವಸೂಲಿ ಮಾಡದಂತೆಯೂ ಸೂಚನೆ ನೀಡಲಾಗಿದೆ ಎಂದರು.

ಸಾಮ, ದಾನ, ಭೇದ, ದಂಡ
ಪೊಲೀಸರು ಸ್ಥಿತ ಪ್ರಜ್ಞೆಯಿಂದ ಕೆಲಸ ಮಾಡುತ್ತಿದ್ದಾರೆ. ಸಾಮ,ದಾನ, ಭೇದ, ದಂಡ ಉಪಯೋಗಿಸಬೇಕಾಗುತ್ತದೆ‌ ಎಂದು ಬೊಮ್ಮಾಯಿ ಹೇಳಿದರು.

ಪೊಲೀಸರು ಲಾಠಿ ಪ್ರಹಾರ ಮಾಡುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಕೆಲವು ವಿಚಾರಗಳಲ್ಲಿ ಪೊಲೀಸರು ವಿವೇಚನೆಯಿಂದಲೇ ಕ್ರಮ ತೆಗೆದುಕೊಳ್ಳುತ್ತಾರೆ’ಎಂದರು.

ಮೈಸೂರಿನಲ್ಲಿ ಮತ್ತೆ ನಾಲ್ಕು ಪ್ರಕರಣ
ಮೈಸೂರು:
ಮೈಸೂರು ಜಿಲ್ಲೆಯಲ್ಲಿ ಸೋಮವಾರ ಮತ್ತೆ ನಾಲ್ಕು ‘ಕೋವಿಡ್‌–19’ ಪ್ರಕರಣಗಳು ದೃಢಪಟ್ಟಿದ್ದು, ಕೋವಿಡ್‌ ಬಾಧಿತರ ಸಂಖ್ಯೆ 12ಕ್ಕೆ ಏರಿದೆ.

ಇವರ ಪೈಕಿ 10 ಜನರು ನಂಜನಗೂಡಿನ ಔಷಧ ಕಾರ್ಖಾನೆಯ ನೌಕರರೇ ಆಗಿದ್ದು, ಉಳಿದ ಇಬ್ಬರು ವಿದೇಶದಿಂದ ಮರಳಿದವರು.‌

‘ಔಷಧ ಕಾರ್ಖಾನೆಯಲ್ಲಿ 1,372 ನೌಕರರಿದ್ದು, 1,087 ಜನರನ್ನು ಮನೆಯಲ್ಲೇ ಪ್ರತ್ಯೇಕ ನಿಗಾದಲ್ಲಿ
(ಹೋಂ ಕ್ವಾರಂಟೈನ್‌) ಇಡಲಾಗಿದೆ. ಇವರಲ್ಲಿ 753 ಜನರು ನಂಜನಗೂಡಿನಲ್ಲೇ ‘ಹೋಂ ಕ್ವಾರಂಟೈನ್‌’ ಒಳಗಾಗಿದ್ದಾರೆ. ಇವರೆಲ್ಲರನ್ನೂ ಒಂದೇ ಕಡೆ ಇರಿಸುವುದು ಬೇಡ ಎಂದು ವೈದ್ಯರು ಸಲಹೆ ನೀಡಿರುವುದರಿಂದ, ಅವರ ಮನೆಗಳಲ್ಲೇ ಪ್ರತ್ಯೇಕ ವಾಸಕ್ಕೆ ನಿಗಾ ವಹಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಮಾಹಿತಿ ನೀಡಿದರು.

ಇದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮಂಡ್ಯ ಜಿಲ್ಲೆಯ 8 ಜನರನ್ನು, ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ನಿಗಾ ಘಟಕದಲ್ಲಿ ಇರಿಸಲಾಗಿದೆ. ಹಾಸನ ಜಿಲ್ಲೆಯ10 ನೌಕರರು ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿದ್ದಾರೆ. ಇದಲ್ಲದೇ ಕಾರ್ಖಾನೆಯ ನೌಕರರೊಬ್ಬರ ಮಕ್ಕಳಿಬ್ಬರು ಬಳ್ಳಾರಿ ಜಿಲ್ಲೆಯ ಸಿರುಗುಪ್ಪಕ್ಕೆ ತೆರಳಿದ್ದು, ಅವರನ್ನೂ ಮನೆಯಲ್ಲಿರಿಸಿ ನಿಗಾ ವಹಿಸಲಾಗಿದೆ. ಸೋಂಕು ದೃಢಪಟ್ಟ ಸಿಬ್ಬಂದಿಯ ಜೊತೆ ನೇರ ಸಂಪರ್ಕಕ್ಕೆ ಬಂದಿದ್ದ ಚಾಮರಾಜನಗರ ಜಿಲ್ಲೆಯ ವ್ಯಕ್ತಿ ಮೇಲೆ ನಿಗಾವಹಿಸಲಾಗಿದೆ.

ಕೊರೊನಾ ಸಹಾಯವಾಣಿ ಮತ್ತು ಜಾಲತಾಣ

*ಕರ್ನಾಟಕ ಸರ್ಕಾರದ ಆರೋಗ್ಯ ಸಹಾಯವಾಣಿ ಸಂಖ್ಯೆಗಳು: 104, 080-46848600, 080-66692000, 9745697456

*ರಾಜ್ಯ ಸರ್ಕಾರದ ಆಹಾರ ಸಹಾಯವಾಣಿ: 155214

*ರಾಜ್ಯದಲ್ಲಿ ದೂರವಾಣಿ ಮೂಲಕ (ಟೆಲಿಮೆಡಿಸಿನ್‌) ಸ್ವಯಂಸೇವೆ ಮಾಡಬಯಸುವ ವೈದ್ಯರ ನೋಂದಣಿಗೆ ದೂರವಾಣಿ ಸಂಖ್ಯೆ: 080-47192219

*ರಾಜ್ಯ ಸರ್ಕಾರದ ಆರೋಗ್ಯ ಜಾಲತಾಣ: https://karunadu.karnataka.gov.in/hfw/kannada/Pages/home.aspx

*ರಾಜ್ಯ ಸರ್ಕಾರದ ಕೋವಿಡ್‌ 19 ಜಾಲತಾಣ: https://covid19.karnataka.gov.in/wordpress/

*ಕೋವಿಡ್‌–19 ಕ್ವಾರೆಂಟೈನ್‌ಗೆ ಒಳಗಾದವರ ಸ್ಥಳ ನಕಾಶೆ: https://kgis.ksrsac.in/covid/

*ಸರ್ಕಾರದ ಕೊರೊನಾ ವಾಚ್‌ ಆ್ಯಪ್‌ ಲಿಂಕ್: https://play.google.com/store/apps/details?id=com.ksrsac.drawshapefile

*ಮಾನಸಿಕ ಆರೋಗ್ಯ ಕುರಿತ ಸಲಹೆಗಳಿಗೆ ನಿಮ್ಹಾನ್ಸ್‌ ಸಹಾಯವಾಣಿ: 080-46110007

*ಕೇಂದ್ರ ಸರ್ಕಾರದ ಆರೋಗ್ಯ ಸಹಾಯವಾಣಿ: 1075 ಮತ್ತು +91-11-23978046

*ಸಹಾಯವಾಣಿ ಇ–ಮೇಲ್: ncov2019@gov.in ಅಥವಾ ncov2019@gmail.com

*ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಜಾಲತಾಣ: https://www.mohfw.gov.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.