ADVERTISEMENT

ಪ್ರತ್ಯೇಕವಾಸದಲ್ಲಿರುವಂತೆ ಸೂಚಿಸಲಾಗಿರುವವರ ಮನೆಗಳ ಮೇಲೆ ನೊಟೀಸ್: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 16:26 IST
Last Updated 23 ಮಾರ್ಚ್ 2020, 16:26 IST
   

ಬೆಂಗಳೂರು: ಕ್ವಾರಂಟೈನ್‌ನಲ್ಲಿರುವಂತೆಸೂಚನೆ ನೀಡಲಾಗಿರುವ ಕೊರೊನಾ ವೈರಸ್‌ ಶಂಕಿತರ ಮನೆಗಳ ಮೇಲೆ ನೊಟೀಸ್ ಅಂಟಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಅಂತರ ಜಿಲ್ಲೆ ಸಾರಿಗೆ ಸಂಪೂರ್ಣ ನಿಲ್ಲಿಸಲಾಗುತ್ತಿದೆ. ಖಾಸಗಿ ವಾಹನಗಳ ಸಂಚಾರವನ್ನೂ ನಿಲ್ಲಿಸಲಾಗುವುದು. ಪ್ರಧಾನಿ ಮನವಿ ಮೇರೆಗೆ ಭಾನುವಾರ (ಮಾರ್ಚ್‌ 22) ನಡೆದ ಜನತಾ ಕರ್ಫ್ಯೂ ಮಾದರಿಯಲ್ಲಿ 31ರವರೆಗೆ ಇಡೀ ರಾಜ್ಯದಲ್ಲಿ ಲಾಕ್‌ಡೌನ್ ಇರುತ್ತದೆ. ರಾಜ್ಯದ ಗಡಿಗಳನ್ನೂ ಬಂದ್ ಮಾಡುತ್ತಿದ್ದೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಪ್ರತ್ಯೇಕವಾಸಕ್ಕೆ ಸೂಚಿಸಿರುವವರು ಇರುವ ಮನೆಗಳ ಸುತ್ತಮುತ್ತ ಇರುವವರು ಎಚ್ಚರಿಕೆ ವಹಿಸಬೇಕು. ಸೋಂಕಿತರು ಅಥವಾ ಪ್ರತ್ಯೇಕವಾಸದ ಸೂಚನೆ ಪಾಲನೆ ಮಾಡುತ್ತಿರುವವರನ್ನು ಕೀಳಾಗಿ ಕಾಣಬಾರದು. ಅಂಥವರ ಭಾವನೆಗಳಿಗೆ ಜನರು ಗೌರವ ನೀಡಬೇಕು ಎಂದು ಬೊಮ್ಮಾಯಿ ಹೇಳಿದರು.

ADVERTISEMENT

ಪರಿಸ್ಥಿತಿಯ ದುರ್ಲಾಭ ಪಡೆಯುವವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತದೆ. ಜಿಲ್ಲೆ ಮತ್ತು ರಾಜ್ಯದ ಗಡಿ ಬಂದ್ ಮಾಡುವುದರಿಂದ ಜನರಿಗೆ ತೊಂದರೆಯಾಗುತ್ತೆ ಎಂಬುದು ನಮಗೆ ಗೊತ್ತು. ಆದರೆ, ಇದು ಅನಿವಾರ್ಯವಾಗಿ ತೆಗೆದುಕೊಂಡ ನಿರ್ಧಾರ. ಈ ಸಂಕಷ್ಟ ಪರಿಸ್ಥಿತಿ ನಿರ್ವಹಿಸಲು ಜನರು ಸರ್ಕಾರಕ್ಕೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.