ADVERTISEMENT

ಎಷ್ಟೇ ದೊಡ್ಡವರಿದ್ದರೂ ಹೆಸರು ಬಹಿರಂಗ

ನಗರ ಪೊಲೀಸ್‌ ಆಯುಕ್ತ, ಕೇಂದ್ರ ಐ.ಜಿ ನೇತೃತ್ವದಲ್ಲಿ ಜಂಟಿ ತಂಡ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2020, 18:39 IST
Last Updated 31 ಆಗಸ್ಟ್ 2020, 18:39 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ಡ್ರಗ್ ದಂಧೆಯಲ್ಲಿ ಯಾವುದೇ ರಂಗ ದವರು ಇರಲಿ, ಎಷ್ಟೇ ದೊಡ್ಡ ವ್ಯಕ್ತಿಗಳು ಇದ್ದರೂ ಅವರ ವಿರುದ್ಧ ಪ್ರಕರಣ‌ ದಾಖಲಿಸಿ, ಹೆಸರುಗಳನ್ನು ಬಹಿರಂಗಪಡಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಸೋಮವಾರ ವಿಧಾನಸೌಧದಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಡ್ರಗ್‌ ದಂಧೆಯಲ್ಲಿ ಚಲನಚಿತ್ರ ನಟ– ನಟಿಯರು, ಸಂಗೀತ ನಿರ್ದೇಶಕರು ಇದ್ದಾರೆ ಎಂಬ ಕಾರಣಕ್ಕೆ ಮುಚ್ಚಿ ಹಾಕುವ ಪ್ರಶ್ನೆಯೇ ಇಲ್ಲ ಎಂದರು.

‘ನಟಿ ಶರ್ಮಿಳಾ ಮಾಂಡ್ರೆ ಇದ್ದರೆನ್ನಲಾದ ಕಾರಿನ ಅಪಘಾತಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಾಗಿದೆ. ದೋಷಾರೋಪ ಪಟ್ಟಿಯನ್ನೂ ಸಲ್ಲಿಸಲಾಗಿದೆ. ನ್ಯಾಯಾಲಯದಲ್ಲಿ ಸತ್ಯ ಹೊರಗೆ ಬರುತ್ತದೆ. ಪ್ರಕರಣದಲ್ಲಿ ನಾವು ಮೂಗು ತೂರಿಸಲು ಆಗುವುದಿಲ್ಲ. ಏನಾಗಿದೆ ನೋಡಿ ಎಂದು ನಗರ ಪೊಲೀಸ್‌ ಆಯುಕ್ತರಿಗೆ ಸೂಚಿಸಿದ್ದೇನೆ’ ಎಂದೂ ಬೊಮ್ಮಾಯಿ‌ ಹೇಳಿದರು.

ADVERTISEMENT

ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆ ಗಳಲ್ಲಿ ಮಾದಕ ದ್ರವ್ಯ ದಂಧೆಗೆ ಕಡಿವಾಣ ಹಾಕಲು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಮತ್ತು ಕೇಂದ್ರ ವಲಯ ಐಜಿ ನೇತೃತ್ವದಲ್ಲಿ ಜಂಟಿ ತಂಡವನ್ನು ರಚಿಸಲಾಗುವುದು. ಐಜಿಯವರು ಸುತ್ತಮುತ್ತಲಿನ ಜಿಲ್ಲಾ ಪೊಲೀಸ್‌ ಅಧಿಕಾರಿಗಳ ಜತೆ ಸಮನ್ವಯದ ಮೂಲಕ ಕಾರ್ಯಾಚರಣೆ ನಡೆಸಲಿದ್ದಾರೆ. ಮಾಫಿಯಾಗಳು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಲಾಗುವುದು ಎಂದು ಅವರು ಹೇಳಿದರು.

‘ರಾಜ್ಯದ ಹಲವು ಪ್ರದೇಶಗಳಲ್ಲಿ ಗಾಂಜಾ ಬೆಳೆಯುತ್ತಿರುವ ಮಾಹಿತಿ ಇದೆ. ನಮ್ಮ ಸರ್ಕಾರ ಬಂದ ಮೇಲೆ ಅದಕ್ಕೆ ಕಡಿವಾಣ ಹಾಕಿದ್ದೇವೆ. ದುರ್ಗಮ ಪ್ರದೇಶಗಳು, ಕಾಡು ಮತ್ತು ಬೆಟ್ಟ ಗುಡ್ಡಗಳಲ್ಲಿ ಬೆಳೆಯುತ್ತಿರುವುದನ್ನು ಗುರುತಿಸಲಾಗಿದೆ. ಅವುಗಳನ್ನು ನಾಶಪಡಿಸಲಾಗುವುದು. ಆಂಧ್ರಪ್ರದೇಶ, ತೆಲಂಗಾಣ ಮತ್ತು ಗೋವಾ ರಾಜ್ಯಗಳಿಂದ ಬರುವ ಮಾದಕ ದ್ರವ್ಯಗಳನ್ನು ಕಟ್ಟುನಿಟ್ಟಾಗಿ ತಡೆಯಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.