ADVERTISEMENT

ವಾರಾಂತ್ಯದ ಬಂದ್‌ ಲಾಕ್‌ಡೌನ್‌ ಮಾದರಿಯಲ್ಲೇ ಕಟ್ಟುನಿಟ್ಟಾಗಿರಲಿದೆ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 10:59 IST
Last Updated 22 ಏಪ್ರಿಲ್ 2021, 10:59 IST
ಗೃಹ ಸಚಿವ ಬಸವರಾಜ ಬೊಮ್ಮಾಯಿ
ಗೃಹ ಸಚಿವ ಬಸವರಾಜ ಬೊಮ್ಮಾಯಿ   

ಬೆಂಗಳೂರು: ವಾರಾಂತ್ಯದ ಬಂದ್‌ ಲಾಕ್‌ಡೌನ್‌ ಮಾದರಿಯಲ್ಲೇ ಕಟ್ಟುನಿಟ್ಟಾಗಿರಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಪೊಲೀಸ್‌ ಆಯುಕ್ತ ಮತ್ತು ಡಿಸಿಪಿಗಳ ಜತೆ ನಡೆದ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಹೊರ ಜಿಲ್ಲೆಗಳಿಂದ ಪ್ರವೇಶದ ರಸ್ತೆಗಳು, ಫ್ಲೈಓವರ್‌, ಪ್ರಮುಖ ರಸ್ತೆಗಳನ್ನು ಬಂದ್‌ ಮಾಡಲಾಗುವುದು ಎಂದರು.

ವಾರಾಂತ್ಯದ ಕರ್ಫ್ಯೂ ಮಾರ್ಗಸೂಚಿ ಉಲ್ಲಂಘಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಈಗಾಗಲೇ ರಾತ್ರಿ ಕರ್ಫ್ಯೂವಿಗೆ ಸಾರ್ವಜನಿಕರು ಸಹಕಾರ ನೀಡಿದ್ದಾರೆ. ಅದೇ ರೀತಿ ವಾರಾಂತ್ಯದ ಕರ್ಫ್ಯೂವಿಗೆ ಸಹಕಾರ ನೀಡಬೇಕು ಎಂದರು.

ADVERTISEMENT

4000 ಹಾಸಿಗೆ ಪಡೆಯಲು ಕ್ರಮ:ಬೆಂಗಳೂರು ನಗರದ 8 ವಲಯಗಳಿಗೆ ಎಂಟು ಮಂದಿ ಜಂಟಿ ಆಯುಕ್ತರು ಮತ್ತು ಎಲ್ಲ ಡಿಸಿಗಳನ್ನು ಬಳಸಿಕೊಂಡು ಆಸ್ಪತ್ರೆಗಳಿಗೆ ಭೇಟಿ ನೀಡಿ ಹಾಸಿಗೆಗಳನ್ನು ಪಡೆಯಲು ಕ್ರಮ ತೆಗೆದುಕೊಳ್ಳಲಾಗುವುದು. ಆಸ್ಪತ್ರೆಗಳಲ್ಲಿ ಏನಾದರೂ ಕೊರತೆ ಇದ್ದರೆ, ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮವಹಿಸಲಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

ಬಿಬಿಎಂಪಿ ಮತ್ತು ಪೊಲೀಸ್‌ ಅಧಿಕಾರಿಗಳು ಜಂಟಿ ತಪಾಸಣೆ ನಡೆಸಲಿದ್ದಾರೆ. ಕಳೆದ ಬಾರಿ 11,000 ಹಾಸಿಗೆಗಳನ್ನು ಖಾಸಗಿ ಆಸ್ಪತ್ರೆಗಳಿಂದ ಪಡೆಯಲಾಗಿತ್ತು. ಈ ಬಾರಿ ಈವರೆಗೆ 7 ಸಾವಿರ ಮಾತ್ರ ಸಿಕ್ಕಿದೆ. ಉಳಿದ 4 ಸಾವಿರ ಹಾಸಿಗೆಗಳನ್ನು ಮೂರು ದಿನಗಳೊಳಗೆ ಪಡೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಆಂಬ್ಯುಲೆನ್ಸ್‌ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ 850 ರಿಂದ 1250 ಕ್ಕೆ ಹೆಚ್ಚಿಸಲಾಗಿದೆ. ಪೊಲೀಸ್‌ ಸಿಬ್ಬಂದಿಗೆ ಕೊರೊನಾದಿಂದ ರಕ್ಷಣೆಗಾಗಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಎಲ್ಲ ಠಾಣೆಗಳನ್ನು ಸ್ಯಾನಿಟೈಸ್‌ ಮಾಡಲಾಗುತ್ತಿದೆ ಎಂದು ಬೊಮ್ಮಾಯಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.