ADVERTISEMENT

ಇನ್ನೆರಡು ದಿನಗಳಲ್ಲಿ ಹೆಚ್ಚುವರಿ 2000 ಸ್ಟೆಪ್‌ಡೌನ್ ಆಸ್ಪತ್ರೆ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 12 ಮೇ 2021, 9:34 IST
Last Updated 12 ಮೇ 2021, 9:34 IST
 ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: 'ಕೋವಿಡ್ಸೋಂಕಿತರಿಗೆ ಎದುರಾಗುತ್ತಿರುವ ಹಾಸಿಗೆಗಳ ಕೊರತೆ ನೀಗಿಸುವ ಉದ್ದೇಶದಿಂದ ಈಗಾಗಲೇ 1,200 ಸ್ಟೆಪ್ ಡೌನ್ ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ. ಮುಂದಿನ ಎರಡು ದಿನಗಳಲ್ಲಿ ಇನ್ನು 2000 ಇಂಥ ಆಸ್ಪತ್ರೆಗಳನ್ನು ನಿರ್ಮಿಸಲಾಗುವುದು' ಎಂದು ಕೋವಿಡ್ ಹಾಸಿಗೆಗಳ ಉಸ್ತುವಾರಿಯೂ ಆಗಿರುವ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಖಾಸಗಿ ಆಸ್ಪತ್ರೆಗಳ ಸಂಘ, ಹೋಟೆಲ್ ಉದ್ಯಮಿಗಳ ಸಂಘ ಹಾಗೂ ಬಿಬಿಎಂಪಿ ಅಧಿಕಾರಿಗಳ ಜತೆ ಬುಧವಾರ ವರ್ಚುವಲ್ ಸಭೆ ನಡೆಸಿದ ಬಳಿಕ ಅವರು ಈ ವಿಷಯ ತಿಳಿಸಿದರು.

'ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳ ಪಕ್ಕದಲ್ಲಿಯೇ ದೊಡ್ಡ ದೊಡ್ಡ ಹೋಟೆಲುಗಳಿವೆ. ಈ ಹೊಟೆಲ್‌ಗಳ ಕೊಠಡಿ ಪಡೆದು ಅಲ್ಲಿ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ 13 ಆಸ್ಪತ್ರೆಗಳ ಜೊತೆ ಹೋಟೆಲ್‌ಗಳನ್ನು ಜೋಡಿಸಲಾಗಿದೆ. ಇನ್ನಷ್ಟು ಹೊಟೇಲ್ ಮತ್ತು ಆಸ್ಪತ್ರೆಗಳ ಜೋಡನೆ ಕೆಲಸ ನಡೆಯುತ್ತಿದೆ. ಒಂದು ಸಾರಿ ಹೋಟೆಲ್‌ಗಳನ್ನು ಪಡೆದ ನಂತರ ಅಲ್ಲಿ ಆಮ್ಲಜನಕ ಕಾನ್ಸೆಂಟ್ರೇಟರ್, ರೋಗಿಗೆ ಊಟ ಮತ್ತು ಇತರೆ ಕೋವಿಡ್ ಸಂಬಂಧಿತ ಚಿಕಿತ್ಸೆ ಸೌಲಭ್ಯವನ್ನು ಕಲ್ಪಿಸಲಾಗುವುದು. ಹೋಟೆಲ್ ಸಂಘದವರ ಬೇಡಿಕೆ ಮೇರೆಗೆ ಎಸ್ಎಎಸ್ಟಿ ಪೋರ್ಟಲ್ ಜತೆ ಸ್ಟೆಪ್ಡೌನ್ ಆಸ್ಪತ್ರೆಗಳನ್ನು ಜೋಡಿಸಲಾಗುವುದು. ಹೊಟೇಲ್ ಸಿಬ್ಬಂದಿಗೆ ಆದ್ಯತೆ ಮೇರೆಗೆ ಲಸಿಕೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದು ಅವರು ತಿಳಿಸಿದರು.

ADVERTISEMENT

'ಬೆಂಗಳೂರಿನಲ್ಲಿ ಹಾಸಿಗೆಗೆ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಆಸ್ಪತ್ರೆಗಳ ಆವರಣದಲ್ಲಿ ಹೆಚ್ಚುವರಿಯಾಗಿ ತಲಾ 10 ರಿಂದ 15 ಆಮ್ಲಜನಕ ಸೌಲಭ್ಯದ ಹಾಸಿಗೆಗಳನ್ನು ನಿರ್ಮಾಣ ಮಾಡಲು ಒಪ್ಪಿಗೆ ನೀಡಲಾಗಿದೆ. ಇದಕ್ಕೆ ಸಹಕಾರ ನೀಡಲಾಗುವುದು' ಎಂದು ಅವರು ತಿಳಿಸಿದರು.

'ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಉಸ್ತುವಾರಿಗೆ ನಿಯೋಜಿಸಲಾಗಿರುವ ಹಿರಿಯ ಅಧಿಕಾರಿಗಳ ಜೊತೆ ಮಂಗಳವಾರ ಸಭೆ ನಡೆಸಲಾಯಿತು. ಸರ್ಕಾರಕ್ಕೆ ಹಾಸಿಗೆಗಳನ್ನು ನೀಡದೆ ಸುಳ್ಳು ಮಾಹಿತಿ ನೀಡುತ್ತಿದ್ದ ಮೂರು ಖಾಸಗಿ ಆಸ್ಪತ್ರೆಗಳ ಮೇಲೆ ಈಗಾಗಲೇ ಕ್ರಮ ಜರುಗಿಸಲಾಗಿದೆ ಎಂದು ಅವರು ವಿವರಿಸಿದರು.

'ಮೂವತ್ತಕ್ಕಿಂತಲೂ ಕಡಿಮೆ ಹಾಸಿಗೆ ಇರುವ ಆಸ್ಪತ್ರೆಗಳಿಂದಲೂ ಸರ್ಕಾರಿ ಕೋಟಾ ಪಡೆಯಲು ನಿರ್ಧರಿಸಲಾಗಿದೆ.ಅವುಗಳಲ್ಲಿ ಐಸಿಯು ಮತ್ತು ಆಮ್ಲಜನಕ ಸೌಲಭ್ಯದ ಹಾಸಿಗೆಗಳು ಸೇರಿವೆ.ಈ ಆಸ್ಪತ್ರೆಗಳ ಜೊತೆ ಸಮಾಲೋಚನೆ ನಡೆಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದು ಬೊಮ್ಮಾಯಿ ತಿಳಿಸಿದರು.

'ಒಡಿಶಾ,ಟಾಟಾನಗರ ಮತ್ತು ಇತರೆ ಕಡೆಗಳಿಂದ ರಾಜ್ಯಕ್ಕೆ ಆಮ್ಲಜನಕ ಬರಬೇಕಾಗಿದೆ.ಒಂದು ಬಾರಿ ರಾಜ್ಯಕ್ಕೆ ಆಮ್ಲಜನಕ ಟ್ಯಾಂಕರ್ ಬಂದ ನಂತರ ಅವುಗಳ ಮರುಭರ್ತಿ ತೊಂದರೆಯಾಗುವುದಿಲ್ಲ.ನಿರಂತರವಾಗಿ ಆಮ್ಲಜನಕ ಪೂರೈಕೆ ಆಗುತ್ತದೆ. ರಾಜ್ಯದಲ್ಲಿ ಕೋವಿಡ್ ಸೋಂಕಿತರ ಪರೀಕ್ಷೆ ಕಡಿಮೆಯಾಗುತ್ತಿಲ್ಲ. ನಿಯಮಗಳ ಪ್ರಕಾರ ಯಾರಿಗೆಲ್ಲ ತಪಾಸಣೆ ಮಾಡಬೇಕೋ ಅವರೆಲ್ಲರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ' ಎಂದು‌ ಅವರು ಹೇಳಿದರು.

'ಲಸಿಕೆ ಎಲ್ಲರಿಗೂ ಸಿಗಲಿದೆ. ಸ್ವಲ್ಪ ತಾಳ್ಮೆ ಇರಲಿ.ಲಸಿಕೆ ತಯಾರಿಕೆಯಲ್ಲಿ ವಿಳಂಬವಾಗುತ್ತಿದೆ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು.ಆರಂಭದಲ್ಲಿ ಜನ ಲಸಿಕೆ ತೆಗೆದುಕೊಳ್ಳಲಿಲ್ಲ. ಈಗ ಬೇಡಿಕೆ ಹೆಚ್ಚಿದೆ.ಈಗಿರುವ ಲಸಿಕೆಯನ್ನು ಮೊದಲ ಡೋಸ್ ಪಡೆದವರಿಗೆ ಆದ್ಯತೆ ಮೇರೆಗೆ ನೀಡುವಂತೆ ಸೂಚಿಸಲಾಗಿದೆ ಎಂದು ಬೊಮ್ಮಾಯಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.