ADVERTISEMENT

ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣವಚನ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 19:10 IST
Last Updated 28 ಜುಲೈ 2021, 19:10 IST
ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣವಚನ
ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣವಚನ   

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.

ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ನೂತನ ಮುಖ್ಯಮಂತ್ರಿಗೆ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ಬೋಧಿಸಿದರು. ಬಸವರಾಜ ಬೊಮ್ಮಾಯಿ ಅವರು ‘ದೇವರ’ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಬೆಳಿಗ್ಗೆ 11 ಗಂಟೆಗೆ ಪ್ರಮಾಣವಚನ ಸ್ವೀಕಾರ ನಿಗದಿಯಾಗಿತ್ತು. ಆದರೆ, ನಿಗದಿಗಿಂತ ಮೂರು ನಿಮಿಷ ಮೊದಲೇ ಪ್ರಮಾಣವಚನ ಸ್ವೀಕಾರ ಪ್ರಕ್ರಿಯೆ ಆರಂಭವಾಯಿತು. ಕೇಸರಿ ಶಾಲು ಧರಿಸಿ ಬಂದಿದ್ದ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಮತ್ತು ಅವರ ಬೆಂಬಲಿಗರು ಜೈಕಾರ ಕೂಗಿ ಸಂಭ್ರಮಿಸಿದರು.

ADVERTISEMENT

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಮತ್ತು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಕೇಂದ್ರ ಸಚಿವ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಅವರ ಸಂಪುಟದಲ್ಲಿ ಉಪ ಮುಖ್ಯಮಂತ್ರಿಗಳಾಗಿದ್ದ ಗೋವಿಂದ ಕಾರಜೋಳ, ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ, ಹಾಗೂ ಸಚಿವರಾಗಿದ್ದ ಜೆ.ಸಿ. ಮಾಧುಸ್ವಾಮಿ, ಕೆ.ಎಸ್‌. ಈಶ್ವರಪ್ಪ, ಎಸ್‌. ಸುರೇಶ್‌ ಕುಮಾರ್, ಮುರುಗೇಶ ನಿರಾಣಿ, ಉಮೇಶ ಕತ್ತಿ, ಸಿ.ಸಿ. ಪಾಟೀಲ, ವಿ. ಸೋಮಣ್ಣ, ಕೋಟ ಶ್ರೀನಿವಾಸ ಪೂಜಾರಿ, ಆರ್‌. ಅಶೋಕ, ಪ್ರಭು ಚವ್ಹಾಣ್‌, ಶಿವರಾಮ ಹೆಬ್ಬಾರ್, ಕೆ. ಗೋಪಾಲಯ್ಯ, ಎಸ್‌.ಟಿ. ಸೋಮಶೇಖರ್, ಬೈರತಿ ಬಸವರಾಜು, ಕೆ.ಸಿ. ನಾರಾಯಣ ಗೌಡ, ಎಂ.ಟಿ.ಬಿ. ನಾಗರಾಜ್, ಸಿ.ಪಿ. ಯೋಗೇಶ್ವರ್, ಬಿ.ಸಿ. ಪಾಟೀಲ, ಸಿ.ಸಿ. ಪಾಟೀಲ, ಎಸ್‌. ಅಂಗಾರ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಸಿ.ಟಿ. ರವಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಅರವಿಂದ ಬೆಲ್ಲದ, ಬಸನಗೌಡ ಪಾಟೀಲ ಯತ್ನಾಳ, ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್‌, ಎಲ್‌.ಎ. ರವಿ ಸುಬ್ರಮಣ್ಯ, ಎಚ್‌. ಹಾಲಪ್ಪ, ಕುಮಾರ್‌ ಬಂಗಾರಪ್ಪ, ಎಸ್‌.ಆರ್‌. ವಿಶ್ವನಾಥ, ಕಟ್ಟಾ ಸುಬ್ರಮಣ್ಯ ನಾಯ್ಡು, ಆರಗ ಜ್ಞಾನೇಂದ್ರ ಸೇರಿದಂತೆ ಬಿಜೆಪಿಯ ಹಲವು ಶಾಸಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕಾಂಗ್ರೆಸ್‌ ಶಾಸಕ ಆರ್‌.ವಿ. ದೇಶಪಾಂಡೆ, ಜೆಡಿಎಸ್‌ ಶಾಸಕ ಎ.ಟಿ. ರಾಮಸ್ವಾಮಿ ಕೂಡ ಹಾಜರಿದ್ದರು.

ಕರೆ ಮಾಡಿ ಆಹ್ವಾನಿಸಿದ ಬೊಮ್ಮಾಯಿ

ರಾಜ್ಯವನ್ನು ಪ್ರತಿನಿಧಿಸುವ ಬಿಜೆಪಿಯ ಎಲ್ಲ ಸಂಸದರಿಗೂ ಮಂಗಳವಾರ ರಾತ್ರಿ ಖುದ್ದಾಗಿ ದೂರವಾಣಿ ಕರೆ ಮಾಡಿದಬಸವರಾಜ ಬೊಮ್ಮಾಯಿ, ಪ್ರಮಾಣ ಸ್ವೀಕಾರ ಸಮಾರಂಭಕ್ಕೆ ಬರಬೇಕು ಎಂದು ಆಹ್ವಾನ ನೀಡಿದರು.

ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು ಎಂದು ಮೂಲಗಳು ಹೇಳಿವೆ.

ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂಸದ ಶಿವಕುಮಾರ್‌ ಉದಾಸಿ ಬೆಳಗಿನ ಜಾವ 4 ಗಂಟೆಯ ವಿಮಾನದಲ್ಲಿ ಹೊರಟು ಬೆಂಗಳೂರಿಗೆ ಬಂದರು ಎಂದು ಮೂಲಗಳು ತಿಳಿಸಿವೆ.

ಕುಟುಂಬದ ಸದಸ್ಯರು ಭಾಗಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪತ್ನಿ ಚನ್ನಮ್ಮಾ, ಮಗ ಭರತ್‌, ಮಗಳು ಅದಿತಿ, ಸೊಸೆ ಡಾ.ಇಬ್ಬನಿ ಸೇರಿದಂತೆ ಅವರ ಕುಟುಂಬದ ಹಲವರು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಬೊಮ್ಮಾಯಿ ಅವರ ಆಪ್ತ ಸ್ನೇಹಿತರು ಕೂಡ ಸಮಾರಂಭಕ್ಕೆ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.