ADVERTISEMENT

ಬಸವರಾಜ ಹೊರಟ್ಟಿಯಿಂದ ಸಂವಿಧಾನಕ್ಕೆ ಅಪಚಾರ: ಬಿ‌.ಕೆ.ಹರಿಪ್ರಸಾದ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 5 ಮೇ 2022, 7:41 IST
Last Updated 5 ಮೇ 2022, 7:41 IST
ಬಿ.ಕೆ.ಹರಿಪ್ರಸಾದ್‌ ಹಾಗೂ ಬಸವರಾಜ ಹೊರಟ್ಟಿ
ಬಿ.ಕೆ.ಹರಿಪ್ರಸಾದ್‌ ಹಾಗೂ ಬಸವರಾಜ ಹೊರಟ್ಟಿ   

ಬೆಂಗಳೂರು: 'ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಂವಿಧಾನದ ಪೀಠದಲ್ಲಿದ್ದು ಬಿಜೆಪಿ ಸೇರ್ಪಡೆ ಆಗುವುದಾಗಿ ಹೇಳಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರ' ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ‌.ಕೆ. ಹರಿಪ್ರಸಾದ್ ಹೇಳಿದರು

ವಿಧಾನ ಸಭೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, 'ಹೊರಟ್ಟಿಯವರು ಇತ್ತೀಚಿಗೆ ಬಿಜೆಪಿಯ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಭೇಟಿಯ ವೇಳೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗಲಿದ್ದೇನೆ ಎಂದು ಘೋಷಿಸಿದ್ದಾರೆ. ಸಾಕಷ್ಟು ಹಿರಿಯರಾಗಿ, ಶಾಸಕರಾಗಿ ಅನುಭವ ಇರುವ ಹೊರಟ್ಟಿ ಅವರಿಂದ ನಾವು ಇದನ್ನು ನಿರೀಕ್ಷೆ ಮಾಡಿರಲಿಲ್ಲ' ಎಂದರು.

'ಪಕ್ಷ ಸಿದ್ದಾಂತಗಳನ್ನು ಒಪ್ಪಿ ಯಾರು ಬೇಕಾದರೂ ಯಾವುದೇ ಪಕ್ಷ ಸೇರಬಹುದು. ಆದರೆ, ಸಂವಿಧಾನ ಪೀಠದಲ್ಲಿರುವವರು ನಡೆದುಕೊಳ್ಳುವ ರೀತಿ ಇದಲ್ಲ. ಹೊರಟ್ಟಿಯವರು ಪಕ್ಷಾಂತರ ಕಾಯ್ದೆಯ ಉಲ್ಲಂಘನೆ ಮಾಡಿದ್ದಾರೆ. ಸಂವಿಧಾನದ 10ನೇ ಶೆಡ್ಯೂಲ್ ಪ್ರಕಾರ ನಡೆದುಕೊಳ್ಳದೇ ಕಾಯ್ದೆ ಉಲ್ಲಂಘಿಸಿದ್ದಾರೆ' ಎಂದರು.

ADVERTISEMENT

'ಸಂವಿಧಾನದ ಮೂಲಕ ಭಾರತ ನಡೆಯುತ್ತಿದೆ ಹೊರತು ಪಂಚಾಂಗದಡಿಯಲ್ಲಿ ಅಲ್ಲ. ಸಂವಿಧಾನದ ಪೀಠಕ್ಕೆ ಅವಮಾನ ಮಾಡಿರುವ ಹೊರಟ್ಟಿ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸಭಾಪತಿ ಹುದ್ದೆ ಪಕ್ಷಾತೀತವಾದದ್ದು, ಆದರೆ ಹೊರಟ್ಟಿಯವರು ಬಿಜೆಪಿ ಸೇರ್ಪಡೆ ಆಗುತ್ತೇನೆ ಎಂದು ಹೇಳುವುದು ಪೀಠಕ್ಕೆ ಮಾಡಿದ ದ್ರೋಹ' ಎಂದರು.

'ಬಿಜೆಪಿಯವರ ದಂಡಂ ದಶಂಗುಣಂಗೆ ಹೆದರಿ ಹೊರಟ್ಟಿಯವರು ಆ ಪಕ್ಷಕ್ಕೆ ಹೋಗಿರಬಹುದು. ಬಿಜೆಪಿಗೆ ಸೇರಿ ಹೊರಟ್ಟಿ ಹರಕೆಯ ಕುರಿ ಆಗುವುದರಲ್ಲಿ ಅನುಮಾನವೇ ಇಲ್ಲ. ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿ ನಡೆಯುವ ಬಿಜೆಪಿಗೆ ಹೊರಟ್ಟಿ ಸೇರಿರುವುದು ದುರದೃಷ್ಟಕರ. ಆಸೆ ಆಮಿಷಗಳಿಗೆ ಅವರು ಅತ್ತ ಹೋಗಿರುವುದು ಸ್ಪಷ್ಟವಾಗಿದೆ.‌ ಸಂವಿಧಾನ ರಕ್ಷಣೆ ಮಾಡುವ ಪೀಠದಲ್ಲಿ ಕುಳಿತು, ಸಂವಿಧಾನ ಬುಡಮೇಲು ಮಾಡುವ ಬಿಜೆಪಿ ಜೊತೆಗೆ ಸೇರಿದ್ದಾರೆ. ಆಪರೇಷನ್ ಕಮಲದ ಮೂಲಕವೇ ಹೊರಟ್ಟಿ ಬಿಜೆಪಿಗೆ ಸೇರಿದ್ದಾರೆ' ಎಂದುವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.