ADVERTISEMENT

ಸಭಾಪತಿ ಸ್ಥಾನ ಮತ್ತು ಜೆಡಿಎಸ್‌ಗೆ ಬಸವರಾಜ ಹೊರಟ್ಟಿ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 16 ಮೇ 2022, 18:52 IST
Last Updated 16 ಮೇ 2022, 18:52 IST
ಸಭಾಪತಿ ಸ್ಥಾನದಲ್ಲಿ ಬಸವರಾಜ ಹೊರಟ್ಟಿ
ಸಭಾಪತಿ ಸ್ಥಾನದಲ್ಲಿ ಬಸವರಾಜ ಹೊರಟ್ಟಿ    

ಬೆಂಗಳೂರು: ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಸಭಾಪತಿ ಸ್ಥಾನ ಮತ್ತು ಜೆಡಿಎಸ್‌ ಪಕ್ಷಕ್ಕೆ ಸೋಮವಾರ ರಾಜೀನಾಮೆ ನೀಡಿದ್ದು, ಮಂಗಳವಾರ ಅವರು ಬಿಜೆಪಿ ಸೇರಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ‘ನನ್ನ ಹುದ್ದೆಗೆ, ಪರಿಷತ್‌ ಸದಸ್ಯ ಸ್ಥಾನಕ್ಕೆ ಮತ್ತು ಜೆಡಿಎಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ. ಮಂಗಳವಾರ ಬಿಜೆಪಿಯನ್ನು ಸೇರ್ಪಡೆ ಆಗುತ್ತೇನೆ’ ಎಂದು ತಿಳಿಸಿದರು.

‘ನನ್ನ ಜತೆಗಿರುವ ಕೆಲವು ಕಾರ್ಯಕರ್ತರು ಪಕ್ಷ ಬದಲಿಸುವಂತೆ ಒತ್ತಡ ಹೇರಿದ್ದರು. ಅನಿವಾರ್ಯವಾಗಿ ಬಿಜೆಪಿ ಸೇರುತ್ತಿದ್ದೇನೆ. ಅಮಿತ್‌ ಶಾ ಅವರನ್ನು ಭೇಟಿ ಮಾಡಿದ್ದು, ಬಿಜೆಪಿಯಲ್ಲಿ ಯಾವುದೇ ಹುದ್ದೆಯ ಬಗ್ಗೆ ಚರ್ಚೆ ಮಾಡಿಲ್ಲ’ ಎಂದು ಅವರು ಹೇಳಿದರು.

ADVERTISEMENT

‘ಜೆಡಿಎಸ್‌ನಲ್ಲಿ ಎಚ್‌.ಡಿ. ದೇವೇಗೌಡರ ಮಾರ್ಗದರ್ಶನದಲ್ಲಿ ನಾನು ಬೆಳೆದೆ. ದೇವೇಗೌಡರ ಕುಟುಂಬ ನನ್ನನ್ನು ಅವರ ಕುಟುಂಬದ ಸದಸ್ಯರಂತೇ ನೋಡಿಕೊಂಡರು. ಅವರನ್ನು ಭೇಟಿ ಮಾಡಿ ರಾಜೀನಾಮೆ ನೀಡುವ ಧೈರ್ಯ ಇಲ್ಲದ ಕಾರಣ ಅವರನ್ನು ಭೇಟಿ ಮಾಡಿಲ್ಲ. ಅವರಿಗೊಂದು 10 ಪುಟಗಳ ಪತ್ರವನ್ನು ಬರೆದಿದ್ದೇನೆ. ಕುಮಾರಸ್ವಾಮಿ ಅವರಿಗೆ ರಾಜೀನಾಮೆ ವಿಷಯ ತಿಳಿಸಿದ್ದು, ಅವರು ನನ್ನನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇಬ್ಬರ ಬಗ್ಗೆಯೂ ಬೇಸರವಿಲ್ಲ. ದೇವೇಗೌಡರ ಮಾರ್ಗದರ್ಶನ ಮುಂದೆಯೂ ಬೇಕು’ ಎಂದು ಹೊರಟ್ಟಿ ತಿಳಿಸಿದರು.

1983 ರಲ್ಲಿ ಪಕ್ಷೇತರನಾಗಿ ಗೆದ್ದು ಬಂದೆ. 1986 ರಲ್ಲಿ ಜನತಾದಳದಿಂದ, ಆ ಬಳಿಕ ಲೋಕಶಕ್ತಿ ಮತ್ತು ಜೆಡಿಎಸ್‌ನಿಂದ ಆಯ್ಕೆಯಾದೆ. ಸಭಾಪತಿಯಾಗಿ ಒಟ್ಟು 30 ಸಭೆಗಳನ್ನು ಮಾಡಿದ್ದು, ಏನೆಲ್ಲ ಸಭೆಗಳನ್ನು ಮಾಡಿದ್ದೇನೆ. ಅದರ ಪರಿಣಾಮಗಳೇನು ಎಂಬ ಬಗ್ಗೆ ಪುಸ್ತಕ ಪ್ರಕಟಿಸಿರುವುದಾಗಿಯೂ ಅವರು ಹೇಳಿದರು.

‘ಬೆಳಗಾವಿ ಅಧಿವೇಶನವನ್ನು ದೂರುಗಳಿಲ್ಲದೇ ನಡೆಸಿದ್ದೇನೆ. ವಿಧಾನಪರಿಷತ್‌ ಸಿಬ್ಬಂದಿಗೆ ಸಮವಸ್ತ್ರ, ಬಯೋ ಮೆಟ್ರಿಕ್‌ ಹಾಜರಾತಿಯನ್ನು ಕಡ್ಡಾಯ ಮಾಡಿದ್ದೇವೆ. ನನ್ನನ್ನು ಮೇಲ್ಮನೆಗೆ ಗೆಲ್ಲಿಸಿ ಕಳುಹಿಸುತ್ತಿದ್ದ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಒಟ್ಟು ಏಳು ಬಾರಿ ಪರಿಷತ್ತಿಗೆ ಆಯ್ಕೆಯಾಗಿ ಬಂದಿದ್ದು, ಎರಡು ತಲೆಮಾರಿನ ಜನ ನನಗೆ ಮತ ಹಾಕಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.