ಬಸವರಾಜ ಹೊರಟ್ಟಿ – ಯು.ಟಿ ಖಾದರ್
– ಕಡತ ಚಿತ್ರ
ಬೆಂಗಳೂರು: ‘ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿ ಸಭಾಪತಿ ಬಸವರಾಜ ಹೊರಟ್ಟಿ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೆ, ಖಾದರ್ ಅವರು ಹೊರಟ್ಟಿ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಆ ಮೂಲಕ, ಹೊರಟ್ಟಿಯವರ ಮುನಿಸು ತಣಿದಿದೆ.
‘ವಿಧಾನಸೌಧದಲ್ಲಿ ಪುಸ್ತಕ ಮೇಳ ಆಯೋಜನೆ, ವಿಧಾನಸೌಧಕ್ಕೆ ಬೆಳಕಿನ ವ್ಯವಸ್ಥೆ ಹಾಗೂ ಇತರ ಕಾರ್ಯಕ್ರಮಗಳನ್ನು ನಡೆಸುವ ಸಂದರ್ಭದಲ್ಲಿ ಯಾವುದನ್ನೂ ಗಮನಕ್ಕೆ ತಂದಿಲ್ಲ’ ಎಂದು ತಮ್ಮ ಪತ್ರದಲ್ಲಿ ಹೊರಟ್ಟಿ ಆರೋಪಿಸಿದ್ದರು. ಅದಕ್ಕೆ ಪ್ರತಿಯಾಗಿ, ಪತ್ರ ಬರೆದಿದ್ದ ಖಾದರ್, ‘ಅಂತಹ ಯಾವುದೇ ಏಕಪಕ್ಷೀಯ ತೀರ್ಮಾನ ಕೈಗೊಂಡಿಲ್ಲ’ ಎಂದು ಸಮಜಾಯಿಷಿ ನೀಡಿದ್ದರು.
ಈ ಬೆಳವಣಿಗೆಯ ನಡುವೆಯೇ, ಶಿವಾನಂದ ವೃತ್ತದ ಬಳಿ ಇರುವ ಸಭಾಪತಿ ಅವರ ಸರ್ಕಾರಿ ನಿವಾಸಕ್ಕೆ ಬುಧವಾರ ಬೆಳಿಗ್ಗೆ ತೆರಳಿದ ಖಾದರ್, ಕೆಲಹೊತ್ತು ಮಾತುಕತೆ ನಡೆಸಿದ್ದಾರೆ. ಖಾದರ್ ತಮ್ಮ ಮನೆಗೆ ಬರುತ್ತಿದ್ದಂತೆ ಹಸ್ತಲಾಘವ ಮಾಡಿ ಹೊರಟ್ಟಿ ಸ್ವಾಗತಿಸಿದ್ದಾರೆ. ಬಳಿಕ ಸುದ್ದಿಗಾರರ ಜೊತೆ ಖಾದರ್ ಮತ್ತು ಹೊರಟ್ಟಿ ಜಂಟಿಯಾಗಿ ಮಾತನಾಡಿದರು.
ಹೊರಟ್ಟಿ ಮಾತನಾಡಿ, ‘ನಾನು ವಿದೇಶ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಸ್ವಲ್ಪ ಸಂವಹನ ಕೊರತೆ ಆಗಿತ್ತು. ಹೀಗಾಗಿ, ನಾನು ಪತ್ರ ಬರೆದಿದ್ದೆ. ಖಾದರ್ ಅವರು ಈಗ ನನ್ನ ಗಮನಕ್ಕೆ ತಂದಿದ್ದಾರೆ. ಅವರು ಯುವಕರಿದ್ದಾರೆ. ಅವರು ಮಾಡುವ ಕೆಲಸಕ್ಕೆ ನಾನು ಸಹಿ ಹಾಕುವ ಕೆಲಸ ಮಾಡಿದ್ದೇನೆ’ ಎಂದರು.
‘ವಿದೇಶ ಪ್ರವಾಸದಲ್ಲಿದ್ದಾಗ ಮೊಬೈಲ್‌ನಲ್ಲಿ ಟಿಪ್ಪಣಿ ಮಾಡಿಕೊಳ್ಳುತ್ತಿದ್ದೆ. ನಮ್ಮ ಕಾರ್ಯದರ್ಶಿಗಳಿಗೂ ಮಾಹಿತಿ ಇರಲಿಲ್ಲ. ಈಗ ಎಲ್ಲವೂ ಸರಿ ಹೋಗಿದೆ’ ಎಂದೂ ಹೊರಟ್ಟಿ ಹೇಳಿದರು.
‘ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲವೂ ಈಗ ಬಗೆಹರಿದಿದೆ’ ಎಂದು ಖಾದರ್ ಕೂಡಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.