ADVERTISEMENT

ಲಾಕ್‌ಡೌನ್ ವಿಸ್ತರಣೆ ಬಗ್ಗೆ ಸಿ.ಎಂ ತೀರ್ಮಾನವೇ ಅಂತಿಮ: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 15 ಮೇ 2021, 19:45 IST
Last Updated 15 ಮೇ 2021, 19:45 IST
ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಹಾಗೂ ಬಡವರಿಗೆ ಆಹಾರ ವಿತರಿಸಲು ಇಸ್ಕಾನ್‌ ಆರಂಭಿಸಿರುವ ಕಾರ್ಯಕ್ರಮಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಶನಿವಾರ ಚಾಲನೆ ನೀಡಿದರು. ಶಾಸಕ ಉದಯ ಗರುಡಾಚಾರ್, ಅಕ್ಷಯ ಪಾತ್ರೆ ಪ್ರತಿಷ್ಠಾನದ ಅಧ್ಯಕ್ಷ ಮಧು ಪಂಡಿತ್ ದಾಸ್, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಇದ್ದರು
ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಹಾಗೂ ಬಡವರಿಗೆ ಆಹಾರ ವಿತರಿಸಲು ಇಸ್ಕಾನ್‌ ಆರಂಭಿಸಿರುವ ಕಾರ್ಯಕ್ರಮಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಶನಿವಾರ ಚಾಲನೆ ನೀಡಿದರು. ಶಾಸಕ ಉದಯ ಗರುಡಾಚಾರ್, ಅಕ್ಷಯ ಪಾತ್ರೆ ಪ್ರತಿಷ್ಠಾನದ ಅಧ್ಯಕ್ಷ ಮಧು ಪಂಡಿತ್ ದಾಸ್, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಇದ್ದರು   

ಬೆಂಗಳೂರು: ರಾಜ್ಯದಲ್ಲಿ ಮೇ 24ರ ಬಳಿಕ ಲಾಕ್‌ಡೌನ್ ವಿಸ್ತರಣೆ ಮಾಡಬೇಕೇ ಎಂಬ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಕರ್ತವ್ಯ ನಿರತ ಪೊಲೀಸರು ಹಾಗೂ ಆಹಾರದ ಅಗತ್ಯ ಇರುವವರಿಗೆ ಊಟ ಪೂರೈಸುವ ಇಸ್ಕಾನ್ ಅಕ್ಷಯ ಪಾತ್ರೆ ಯೋಜನೆಗೆ ಶನಿವಾರ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಲಾಕ್ ಡೌನ್ ವಿಸ್ತರಣೆ ಕುರಿತು ಈವರೆಗೂ ಸರ್ಕಾರದ ಮಟ್ಟದಲ್ಲಿ ಅಧಿಕೃತ ಚರ್ಚೆ ನಡೆದಿಲ್ಲ ಎಂದರು.

ಕೋವಿಡ್ ತಾಂತ್ರಿಕ ಸಲಹಾ ಸಮಿತಿಯಲ್ಲಿರುವ ತಜ್ಞರ ಜತೆಗೆ ಮುಖ್ಯಮಂತ್ರಿ ಚರ್ಚೆ ನಡೆಸಲಿದ್ದಾರೆ. ಆ ಸಂದರ್ಭದಲ್ಲಿ ಪರಿಸ್ಥಿತಿ ಹಾಗೂ ತಜ್ಞರ ಸಲಹೆ ಆಧರಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ADVERTISEMENT

ಇದಕ್ಕೆ ಮುನ್ನ ಆಹಾರ ಪೊಟ್ಟಣಗಳನ್ನು ವಿತರಿಸಿ ಮಾತನಾಡಿದ ಬೊಮ್ಮಾಯಿ, ‘ಲಾಕ್ ಡೌನ್ ಸಂದರ್ಭದಲ್ಲಿ ಯಾರೊಬ್ಬರೂ ಆಹಾರ ಇಲ್ಲದೇ ನರಳಬಾರದು ಎಂಬುದು ಸರ್ಕಾರದ ಆಶಯ. ಹಿಂದೆ ಲಾಕ್ ಡೌನ್ ಮಾಡಿದಾಗ ಇಸ್ಕಾನ್ ಸಂಸ್ಥೆ ಸರ್ಕಾರದ ಜತೆ ಕೈಜೋಡಿಸಿತ್ತು. ಈಗಲೂ ಸಹಕಾರ ನೀಡುವಂತೆ ನಾನು ನೀಡಿದ ಮನವಿಗೆ ಸಂಸ್ಥೆ ಸ್ಪಂದಿಸಿದೆ. ಪ್ರತಿದಿನ 1000 ಪೊಲೀಸ್ ಸಿಬ್ಬಂದಿಗೆ ಊಟದ ವ್ಯವಸ್ಥೆಯನ್ನು ಇಸ್ಕಾನ್ ಮಾಡುತ್ತಿದೆ’ ಎಂದರು.

ಕೇಂದ್ರದಿಂದ ರಾಜ್ಯಕ್ಕೆ 3 ಆಮ್ಲಜನಕ ಟ್ಯಾಂಕರ್: ಜೋಶಿ
ಹುಬ್ಬಳ್ಳಿ:
ವಿದೇಶದಿಂದ ತರಿಸಿರುವ ತಲಾ 25 ಮೆಟ್ರಿಕ್‌ ಟನ್‌ ಸಾಮರ್ಥ್ಯದ ಮೂರು ಆಮ್ಲಜನಕ ಟ್ಯಾಂಕರ್‌ಗಳನ್ನು ಕೇಂದ್ರ ರಾಜ್ಯಕ್ಕೆ ಮಂಜೂರು ಮಾಡಿದ್ದು, ಶೀಘ್ರ ಹುಬ್ಬಳ್ಳಿ ತಲುಪಲಿವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಧಾರವಾಡ ಜಿಲ್ಲೆಗೆ ಒಂದು, ಹಾವೇರಿ, ಗದಗ ಜಿಲ್ಲೆಗೆ ಒಂದು ಹಾಗೂ ಬೆಳಗಾವಿ ಜಿಲ್ಲೆಗೆ ಒಂದನ್ನು ಬಳಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.