ADVERTISEMENT

ರಾಜೀವ್‌ ತಾರಾನಾಥ್‌, ಕಸ್ತೂರಿ ರಂಗನ್‌ಗೆ ‘ಬಸವಶ್ರೀ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 14 ಮೇ 2021, 15:06 IST
Last Updated 14 ಮೇ 2021, 15:06 IST
ಇಸ್ರೊ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್ ಮತ್ತು ಪಂಡಿತ್ ರಾಜೀವ್‌ ತಾರಾನಾಥ್
ಇಸ್ರೊ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್ ಮತ್ತು ಪಂಡಿತ್ ರಾಜೀವ್‌ ತಾರಾನಾಥ್   

ಚಿತ್ರದುರ್ಗ: ಮುರುಘಾ ಮಠ ಪ್ರದಾನ ಮಾಡುವ ಪ್ರತಿಷ್ಠಿತ ‘ಬಸವಶ್ರೀ’ ಪ್ರಶಸ್ತಿಗೆ ಖ್ಯಾತ ಸರೋದ್‌ ವಾದಕ ಪಂಡಿತ್‌ ರಾಜೀವ್‌ ತಾರಾನಾಥ್‌ ಹಾಗೂ ಬಾಹ್ಯಾಕಾಶ ವಿಜ್ಞಾನಿ ಕೆ.ಕಸ್ತೂರಿ ರಂಗನ್‌ ಅವರನ್ನು ಆಯ್ಕೆ ಮಾಡಲಾಗಿದೆ.

‘2019ನೇ ಸಾಲಿನ ಪ್ರಶಸ್ತಿಗೆರಾಜೀವ್‌ ತಾರಾನಾಥ್‌ ಹಾಗೂ 2020ನೇ ಸಾಲಿಗೆ ಕಸ್ತೂರಿ ರಂಗನ್‌ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ₹ 5 ಲಕ್ಷ ನಗದು ಹಾಗೂ ಫಲಕ ಒಳಗೊಂಡಿದೆ. ಕೊರೊನಾ ಸೋಂಕಿನ ತೀವ್ರತೆ ಕಡಿಮೆಯಾದ ಬಳಿಕ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಶಿವಮೂರ್ತಿ ಮುರುಘಾ ಶರಣರು ಶುಕ್ರವಾರ ಪ್ರಕಟಿಸಿದರು.

‘ಸರೋದ್‌ ವಾದಕರಲ್ಲಿ ರಾಜೀವ್‌ ತಾರಾನಾಥ್‌ ಅವರು ಅಗ್ರಗಣ್ಯರು. ಸಾಂಪ್ರದಾಯಿಕ ಹಿಂದೂಸ್ತಾನಿ ಸಂಗೀತದಲ್ಲಿನ ಆಳ ಹಾಗೂ ಭಾವನಾ ಲೋಕದ ತೀಕ್ಷ್ಣತೆಯನ್ನು ತಮ್ಮ ವಾದನದಲ್ಲಿ ಸಮ್ಮಿಶ್ರಗೊಳಿಸುವ ಸಾಧಕ’ ಎಂದು ಬಣ್ಣಿಸಿದರು.

ADVERTISEMENT

‘ಕಸ್ತೂರಿ ರಂಗನ್ ಅವರು ಒಂಬತ್ತಕ್ಕೂ ಹೆಚ್ಚು ವರ್ಷ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನೇತೃತ್ವ ವಹಿಸಿದ್ದರು. ಯೋಜನಾ ಆಯೋಗದ ಸದಸ್ಯರಾಗಿದ್ದವರು. ಇವರ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.