ADVERTISEMENT

ವಿಡಿಯೊ ಕಾನ್ಫರೆನ್ಸ್ ಮೂಲಕ ಬಿಬಿಎಂಪಿ ಬಜೆಟ್ ಮಂಡಿಸಲು ಸಮ್ಮತಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2020, 9:49 IST
Last Updated 13 ಏಪ್ರಿಲ್ 2020, 9:49 IST
   

ಬೆಂಗಳೂರು: ವಿಡಿಯೊ ಕಾನ್ಫರೆನ್ಸ್ ಮೂಲಕ ಬಿಬಿಎಂಪಿಯ 2020-21ನೇ ಸಾಲಿನ ಬಜೆಟ್ ಮಂಡಿಸುವುದಕ್ಕೆ ನಗರಾಭಿವೃದ್ಧಿ ಇಲಾಖೆ ಸಮ್ಮತಿ ನೀಡಿದೆ.

2020ರ ಮಾರ್ಚ್ ಕೊನೆಯ ವಾರದಲ್ಲಿ ಬಜೆಟ್ ಮಂಡಿಸಲು ಬಿಬಿಎಂಪಿ ಆಡಳಿತ ಪಕ್ಷ ಸಿದ್ಧತೆ ನಡೆಸಿತ್ತು. ಅಷ್ಟರಲ್ಲಿ ಕೊರೊನಾ ಸೋಂಕು ಹಬ್ಬುವಿಕೆ ತಡೆಯುವ ಸಲುವಾಗಿ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾಗಿದ್ದರಿಂದ ಬಜೆಟ್ ಮಂಡನೆ ಸಲುವಾಗಿ ಬಿಬಿಎಂಪಿ ಕೌನ್ಸಿಲ್ ಸಭೆ ನಡೆಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ 2020-21 ಸಾಲಿನ ಅನುದಾನ ಬಳಕೆಗೆ ಬಿಕ್ಕಟ್ಟು ಎದುರ‍ಗಿತ್ತು. ಅಧಿಕಾರಿಗಳ, ಪೌರಕಾರ್ಮಿಕರ ವೇತನ ಬಿಡುಗಡೆ, ಸ್ವಚ್ಛತೆ ಮತ್ತು ಆರೋಗ್ಯ ಸಂಬಂಧಿ ವೆಚ್ಚ ಮಾಡುವುದಕ್ಕೂ ಸಮಸ್ಯೆ ಎದುರಾಗಿತ್ತು.
ಮೇಯರ್ ಎಂ.ಗೌತಮ್ ಕುಮಾರ್, ಉಪಮೇಯರ್ ರಾಮಮೋಹನ ರಾಜು ಹಾಗೂ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಶ್ರೀನಿವಾಸ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರಿಗೆ ಪತ್ರ ಬರೆದು ಮಾರ್ಗದರ್ಶನ ಮಾಡುವಂತೆ ಕೋರಿದ್ದರು.

ಪಾಲಿಕೆ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಅವರು ನಗರಾಭಿವೃದ್ಧಿ ಇಲಾಖೆಯಿಂದ ನಿರ್ದೇಶನ ಕೋರಿದ್ದರು. ಮೇಯರ್, ಉಪಮೇಯರ್,ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರು, ಆಯುಕ್ತರು ಹಾಗೂ ಕೌನ್ಸಿಲ್ ಕಾರ್ಯದರ್ಶಿಗಳು ಪಾಲಿಕೆ ಕೇಂದ್ರ ಕಚೇರಿಯಲ್ಲಿ ಹಾಜರಿದ್ದು ವಿಡಿಯೊ ಕಾನ್ಫರೆನ್ಸ್ ನಡೆಸಬಹುದು. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರು ವಿಡಿಯೊ ಕಾನ್ಫರೆನ್ಸ್ ಮೂಲಕ ಬಜೆಟ್ ಮಂಡಿಸಬಹುದು. ಉಳಿದ ಪಾಲಿಕೆ ಸದಸ್ಯರು ಎಂಟು ವಲಯಗಳ ಕಚೇರಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಬಜೆಟ್ ಮಂಡನೆ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಬೇಕು. ಈ ರೀತಿ ಅಂಗೀಕಾರ ಪಡೆದ ಬಜೆಟ್ ಅನ್ನು ಅನುಮೋದನೆಗಾಗಿ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಬಹುದು ಎಂದು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಬಿಬಿಎಂಪಿ ಆಯುಕ್ತರಿಗೆ ಸೋಮವಾರ ಪತ್ರ ಬರೆದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.