ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ನವದೆಹಲಿ: ಬೆಂಗಳೂರು ನಗರದ ಶಾಸಕರ ಒತ್ತಡಕ್ಕೆ ಮಣಿದು ಆರು ವರ್ಷಗಳಿಂದ ಬಿಬಿಎಂಪಿ ಚುನಾವಣೆಯನ್ನೇ ನಡೆಸದ ರಾಜ್ಯ ಸರ್ಕಾರವು ಕೊನೆಗೂ ಐದು ಪಾಲಿಕೆಗಳಿಗೆ ಚುನಾವಣೆ ನಡೆಸಲು ಮುಂದಾಗಿದೆ. ‘ಡಿಸೆಂಬರ್‌ನಲ್ಲಿ ಚುನಾವಣೆ ನಡೆಸಲು ಸಿದ್ಧ’ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಈ ಸಂಬಂಧ ಸುಪ್ರೀಂ ಕೋರ್ಟ್‌ಗೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಪರವಾಗಿ ವಕೀಲ ಡಿ.ಎಲ್. ಚಿದಾನಂದ ಹೆಚ್ಚುವರಿ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಬಿಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಜೋಯ್‌ಮಾಲ್ಯ ಬಾಗ್ಚಿ ಅವರಿರುವ ಪೀಠವು ಸೋಮವಾರ ನಡೆಸಲಿದೆ.
‘ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ– 2024’ (ಜಿಬಿಜಿಎ) ಅಡಿಯಲ್ಲಿ ಬಿಬಿಎಂಪಿ ವ್ಯಾಪ್ತಿಯನ್ನು ‘ಗ್ರೇಟರ್ ಬೆಂಗಳೂರು ಪ್ರದೇಶ’ (ಜಿಬಿಎ) ಎಂದು ಗುರುತಿಸಿ 2025ರ ಮೇ 15ರಂದು ಸರ್ಕಾರ ಅಧಿಸೂಚಿಸಿತ್ತು. ‘ಗ್ರೇಟರ್ ಬೆಂಗಳೂರು ಪ್ರದೇಶ’ದಲ್ಲೇ ಐದು ನಗರ ಪಾಲಿಕೆಗಳನ್ನು ರಚಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 225 ವಾರ್ಡ್‌ಗಳನ್ನು ಮರುರಚಿಸಿ 2023ರ ಸೆಪ್ಟೆಂಬರ್ 25ರಂದು ಸರ್ಕಾರ ಅಧಿಸೂಚಿಸಿತ್ತು. ಆದರೆ, ಇದೀಗ ಹೊಸದಾಗಿ ಐದು ನಗರ ಪಾಲಿಕೆಗಳನ್ನು ಹಿಂದೆ ಚುನಾವಣೆ ನಡೆದಿದ್ದ 198 ವಾರ್ಡ್‌ಗಳಂತೆ ವಿಂಗಡಿಸಲಾಗಿದೆ.
ಐದು ಪಾಲಿಕೆಗಳನ್ನಾಗಿ ವಿಭಜಿಸಿ ಜುಲೈ 19ರಂದು ಕರಡು ಅಧಿಸೂಚನೆ ಹೊರಡಿಸಲಾಗಿದೆ. ಆಕ್ಷೇಪಣೆ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ. ಇದಕ್ಕೆ ಆಗಸ್ಟ್ 18ರವರೆಗೆ ಅವಕಾಶ ಇದೆ. ಆಕ್ಷೇಪಣೆಗಳನ್ನು ಪರಿಶೀಲಿಸಿ, ವಿಲೇವಾರಿ ಮಾಡಲು ರಾಜ್ಯ ಸರ್ಕಾರಕ್ಕೆ 15 ದಿನಗಳ ಕಾಲಾವಕಾಶ ಬೇಕು.
ಐದು ಪಾಲಿಕೆಗಳಿಗೆ ಹೊಸ ವಾರ್ಡ್‌ಗಳ ರಚನೆ ಮಾಡಬೇಕಿದೆ. ವಾರ್ಡ್‌ಗಳ ಗಡಿಯ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಸ್ವೀಕರಿಸಬೇಕಿದೆ. ಆ ನಂತರ ಅಂತಿಮ ಅಧಿಸೂಚನೆ ಹೊರಡಿಸಬೇಕು. ನವೆಂಬರ್ 1ರ ಹೊತ್ತಿಗೆ ಅಂತಿಮ ಅಧಿಸೂಚನೆ ಹೊರಡಿಸಬಹುದು. ಆ ಬಳಿಕ ವಾರ್ಡ್‌ಗಳಿಗೆ ಮೀಸಲಾತಿ ನಿಗದಿ ಪ್ರಕ್ರಿಯೆ ನಡೆಸಬೇಕು. ಇದಕ್ಕೆ ಮತ್ತೆ ಒಂದು ತಿಂಗಳು ಬೇಕು. ಈ ಪ್ರಕ್ರಿಯೆ ನವೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಬಹುದು. ಆ ಬಳಿಕ ರಾಜ್ಯ ಚುನಾವಣಾ ಆಯೋಗವು ಐದು ಪಾಲಿಕೆಗಳಿಗೆ ಚುನಾವಣೆ ನಡೆಸಬಹುದು ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.
ಬಿಬಿಎಂಪಿ ಸದಸ್ಯರ ಅಧಿಕಾರ ಅವಧಿಯು 2019ರ ಸೆಪ್ಟೆಂಬರ್ 10ರಂದು ಪೂರ್ಣಗೊಂಡಿತ್ತು. ಆರು ವಾರಗಳಲ್ಲಿ ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿ ಹೈಕೋರ್ಟ್ ಹೊರಡಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ 2020ರ ಡಿಸೆಂಬರ್ 18ರಂದು ಅಮಾನತಿನಲ್ಲಿ ಇರಿಸಿತ್ತು. ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ (ತಿದ್ದುಪಡಿ) ಕಾಯ್ದೆ– 2020ರ ಅನ್ವಯ ರಚಿಸಲಾಗುವ 243 ವಾರ್ಡ್‌ಗಳ ಬದಲಿಗೆ, ಮೊದಲಿದ್ದ 198 ವಾರ್ಡ್‌ಗಳಿಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ನೀಡಿದ್ದ ಆದೇಶದ ಸಿಂಧುತ್ವ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.