ADVERTISEMENT

BBMP ಚುನಾವಣೆ: ಜಿಜ್ಞಾಸೆ ಪರಿಹಾರಕ್ಕೆ ‘ಸುಪ್ರೀಂ’ ನಿರ್ದೇಶನ ಬಯಸಿದ ಹೈಕೋರ್ಟ್

ನ್ಯಾಯೋಚಿತವಾಗಿ ವಾರ್ಡ್‌ ಮರು ವಿಂಗಡಣೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2022, 21:34 IST
Last Updated 17 ಆಗಸ್ಟ್ 2022, 21:34 IST
   

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಡ್ ಪುನರ್ ವಿಂಗಡಣೆ ಹಾಗೂ ಮೀಸಲು ನಿಗದಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ತೀರ್ಪಿನ ಭಿನ್ನ ನಿಲುವುಗಳಿಂದಾಗಿ ಸ್ಪಷ್ಟನೆ ಬೇಕು ಎಂದು ಬಯಸಿರುವ ಕರ್ನಾಟಕ ಹೈಕೋರ್ಟ್‌, ‘ಈ ಕುರಿತಂತೆ ಸುಪ್ರೀಂ ಕೋರ್ಟ್‌ನಿಂದ ಉತ್ತರ ಪಡೆದುಕೊಂಡು ಬನ್ನಿ’ ಎಂದು ಎಲ್ಲ ಅರ್ಜಿದಾರರಿಗೆನಿರ್ದೇಶಿಸಿದೆ.

ಬಿಬಿಎಂಪಿ ವಾರ್ಡ್‌ಗಳ ಪುನರ್ ವಿಂಗಡಣೆ ಪ್ರಶ್ನಿಸಿ ಹೈಕೋರ್ಟ್‌ ವಕೀಲ ಎಸ್. ಇಸ್ಮಾಯಿಲ್ ಜಬೀವುಲ್ಲಾ, ಶಾಂತಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ನಂದಕುಮಾರ್, ಯುವಕ ಕಲ್ಯಾಣ ಸಂಘದ ಕಾರ್ಯದರ್ಶಿ ಉಮಾಶಂಕರ್, ಮಡಿವಾಳದ ಮಾರುತಿನಗರದ ಮಾಜಿ ಪಾಲಿಕೆ ಸದಸ್ಯ ಬಿ.ಎನ್‌.ಮಂಜುನಾಥ ರೆಡ್ಡಿ, ಬೆಂಗಳೂರು ದಕ್ಷಿಣ ಭಾಗದ ಕೂಡ್ಲು ವಿನಾಯಕನಗರದ ನಿವಾಸಿ ಎಂ.ನವೀನ್‌, ಕೆಎಸ್‌ಆರ್‌ಟಿಸಿ ಲೇಔಟ್‌ನ ಎಸ್‌.ಡಿ.ಗುರುರಾಜ್‌, ಆನೇಕಲ್‌ ಸಿಂಗಸಂದ್ರದ ಎಸ್.ಆರ್‌.ಪ್ರತೀಶ್ ಕುಮಾರ್, ಶಾಸಕ ಬಿ.ಝಡ್‌. ಜಮೀರ್ ಅಹಮದ್‌ ಸೇರಿ ಒಟ್ಟು ಒಂಬತ್ತುಜನರ ರಿಟ್‌ ಅರ್ಜಿಗಳನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲರಾದ ಅಶೋಕ ಹಾರನಹಳ್ಳಿ, ಎ.ಎಸ್.ಪೊನ್ನಣ್ಣ, ಕೆ.ಅರವಿಂದ ಕಾಮತ್‌ ವಾದ ಮಂಡಿಸಿ, ‘ನಾವು ಚುನಾವಣೆ ನಡೆಯುವುದನ್ನು ವಿರೋಧಿಸುತ್ತಿಲ್ಲ. ಆದರೆ, ಆಯೋಗ ಹೇಳುವಂತೆ ಪ್ರತಿ ವಿಧಾನಸಭಾ ಕ್ಷೇತ್ರದ ಭೌಗೋಳಿಕ ವ್ಯಾಪ್ತಿಯೊಳಗೇ ಜನಸಂಖ್ಯೆಗೆ ಅನುಗುಣವಾಗಿ ವಾರ್ಡ್‌ ವಿಂಗಡಣೆ ಮಾಡಲಾಗಿದೆ ಎಂದು ಹೇಳುತ್ತಿರುವುದು ಸರಿಯಲ್ಲ’ ಎಂಬ ಆಕ್ಷೇಪವನ್ನು ಪುನುರುಚ್ಚರಿಸಿದರು.

ADVERTISEMENT

‘ಆಡಳಿತರೂಢ ಸರ್ಕಾರವು ಬಿಜೆಪಿಯ ಶಾಸಕರು ಇರುವ ಕಡೆ ಒಂದು ವಾರ್ಡ್‌ ಜನಸಂಖ್ಯೆಯನ್ನು 30 ಸಾವಿರಕ್ಕೆ ಮಿತಿಗೊಳಿಸಿದ್ದರೆ, ಬಿಜೆಪಿಯೇತರ ವಿಧಾನಸಭಾ ಕ್ಷೇತ್ರಗಳಲ್ಲಿ 39 ಸಾವಿರದವರೆಗೆ ಏರಿಸಿದೆ. ಇದು ಅವೈಜ್ಞಾನಿಕ ಹಾಗೂ ಸರ್ಕಾರ ತನ್ನ ಅನುಕೂಲಕ್ಕೆ ತಕ್ಕಂತೆ ವಿಂಗಡಣೆ ಮಾಡಿಕೊಂಡಿರುವ ಕ್ರಮ. ಹಾಗಾಗಿ ನ್ಯಾಯೋಚಿತವಾದ ಪುನರ್ ವಿಂಗಡಣೆಯಾಗಬೇಕು. ಸಂವಿಧಾನದ ಆಶಯಗಳಿಗೆ ಧಕ್ಕೆಯಾಗದಂತೆ ಚುನಾವಣೆ ನಡೆಸಬೇಕು’ ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಆಯೋಗದ ಪರ ಹಿರಿಯ ವಕೀಲ ಕೆ.ಎನ್.ಫಣೀಂದ್ರ ಅವರನ್ನು, ‘ಶಿವಾಜಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಜನಸಂಖ್ಯೆ ಕಡಿಮೆಯಾಗಿದೆ ಎಂಬುದಕ್ಕೆ ಯಾವ ದಾಖಲೆ ಇದೆ ತೋರಿಸಿ’ ಎಂದು ಕುಟುಕಿತು.

ಇದಕ್ಕೆ ಏನನ್ನೂ ಪ್ರತಿಕ್ರಿಯಿಸದ ಫಣೀಂದ್ರ ಅವರು, ‘ಬಿಬಿಎಂಪಿ ಮತದಾರರ ಪಟ್ಟಿ ತಯಾರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಸೆಪ್ಟೆಂಬರ್ 22ರೊಳಗೆ ಅದನ್ನು ಅಂತಿಮಗೊಳಿಸಲಾಗುವುದು’ ಎಂದು ತಿಳಿಸಿದರು.

ಅಂತೆಯೇ, ‘ಸುರೇಶ್ ಮಹಾಜನ್‌ ಪ್ರಕರಣದ ಅನುಸಾರ ಅರ್ಜಿದಾರರ ತಕರಾರು ಬಗೆಹರಿಸಲು ಸುಪ್ರೀಂ ಕೋರ್ಟ್ ತೀರ್ಪಿನ ಭಿನ್ನ ನಿಲುವು ನ್ಯಾಯಪೀಠದ ಕೈಕಟ್ಟಿ ಹಾಕಿದೆ. ಈ ಜಿಜ್ಞಾಸೆಯನ್ನು ಸುಪ್ರೀಂ ಕೋರ್ಟ್‌ನಿಂದಲೇ ಬಗೆಹರಿಸಿಕೊಂಡು ಸ್ಪಷ್ಟನೆ ಪಡೆದುಕೊಂಡು ಬನ್ನಿ’ ಎಂದು ಎಲ್ಲ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಇದೇ 29ಕ್ಕೆ ಮುಂದೂಡಿತು. ಸುಪ್ರೀಂ ಕೋರ್ಟ್‌ನಲ್ಲಿ ಇದೇ 26ಕ್ಕೆ ಕುರಿತಂತೆ ವಿಚಾರಣೆ ನಿಗದಿಯಾಗಿದೆ.

ಸುಪ್ರೀಂ ಕೋರ್ಟ್‌ನಿಂದ ಹೈಕೋರ್ಟ್‌ಗೆ...
ಬಿಬಿಎಂಪಿ ಚುನಾವಣೆ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದರಿಂದಾಗಿ, ಸುಪ್ರೀಂ ಕೋರ್ಟ್ ನಿರ್ದೇಶನದ ಅನುಸಾರ ವಾರ್ಡ್‌ಗಳ ಪುನರ್‌ರಚನೆಯ ಕರಡು ಹೊರಡಿಸಲಾಗಿತ್ತು. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ವಾರ್ಡ್ ಜನಸಂಖ್ಯೆ ಹೆಚ್ಚಿಸಿರುವುದು ಮತ್ತು ಒಂದು ವಾರ್ಡ್ ಅನ್ನು ಕಡಿಮೆ ಮಾಡಿರುವುದನ್ನು ಎಸ್. ಇಸ್ಮಾಯಿಲ್‌ ಜಬೀವುಲ್ಲಾ ಆಕ್ಷೇಪಿಸಿದ್ದರು.

ಈ ಕುರಿತಂತೆ ಅವರು, ಬಿಬಿಎಂಪಿ ಆಯುಕ್ತರಿಗೆ ಮನವಿ ಸಲ್ಲಿಸಿದ್ದ ಮನವಿಯನ್ನುಪರಿಗಣಿಸದ ಕಾರಣ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಕ್ಷೇತ್ರ ಪುನರ್‌ವಿಂಗಡಣೆ ವಿಚಾರವನ್ನು ಹೈಕೋರ್ಟ್‌ನಲ್ಲೇ ಪ್ರಶ್ನಿಸಿಕೊಳ್ಳಿ ಎಂದು ಅವರಿಗೆ ಸ್ವಾತಂತ್ರ್ಯ ನೀಡಿತ್ತು. ಇದರಿಂದಾಗಿ, ಇಸ್ಮಾಯಿಲ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳ ಜೊತೆಗೆ ಈಗ ಮತ್ತಷ್ಟು ಅರ್ಜಿಗಳು ಸೇರ್ಪಡೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.