ADVERTISEMENT

ಆಸ್ತಿ ತೆರಿಗೆ: ರಿಯಾಯಿತಿ ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 19:56 IST
Last Updated 30 ಏಪ್ರಿಲ್ 2022, 19:56 IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 2022–23ನೇ ಸಾಲಿನ ಪೂರ್ತಿ ಆಸ್ತಿ ತೆರಿಗೆಯನ್ನು ಒಂದೇ ಕಂತಿನಲ್ಲಿ ಪಾವತಿಸುವವರಿಗೆ ನೀಡುವ ಶೇ 5ರಷ್ಟು ರಿಯಾಯಿತಿಯನ್ನು ಮೇ 31ರವರೆಗೆ ವಿಸ್ತರಿಸಿ ನಗರಾಭಿವೃದ್ಧಿ ಇಲಾಖೆ ಶನಿವಾರ ಅಧಿಸೂಚನೆ ಹೊರಡಿಸಿದೆ.

‘ಏಪ್ರಿಲ್‌ 3 ರವರೆಗೆ ಬಿಬಿಎಂಪಿಯು ಒಟ್ಟು ₹1,355 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದೆ. ಈಗಾಗಲೇ ಪಾವತಿಯಾಗಿರುವ ₹100 ಕೋಟಿ ಮೊತ್ತವು ಇನ್ನಷ್ಟೇ ಬಿಬಿಎಂಪಿ ಖಾತೆಗೆ ಜಮೆ ಆಗಬೇಕಿದೆ. ಹಾಗಾಗಿ ಈ ಆರ್ಥಿಕ ವರ್ಷದಲ್ಲಿ ಇದುವರೆಗೆ ಸುಮಾರು ₹1,455 ಕೋಟಿ ಆಸ್ತಿ ತೆರಿಗೆ ಸಂಗ್ರಹ ಆದಂತಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಈ ಅವಧಿಯಲ್ಲಿ ₹920 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿತ್ತು’ ಎಂದು ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಾಮಾನ್ಯವಾಗಿ ಆರ್ಥಿಕ ವರ್ಷದಲ್ಲಿ ಏಪ್ರಿಲ್‌ ತಿಂಗಳ ಕೊನೆಯ ದಿನದೊಳಗೆ ಆಸ್ತಿ ತೆರಿಗೆ ಪಾವತಿಸಿದವರಿಗೆ ಮಾತ್ರ ಶೇ 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಕೋವಿಡ್‌ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಜಾರಿಗೊಂಡಿದ್ದರಿಂದ ಆಸ್ತಿ ತೆರಿಗೆ ಮೇಲೆ ಶೇ 5ರಷ್ಟು ರಿಯಾಯಿತಿ ನೀಡುವ ಅವಧಿಯನ್ನು ಕಳೆದ ಎರಡು ವರ್ಷಗಳಲ್ಲೂ ಒಂದು ತಿಂಗಳಿಗಿಂತಲೂ ಹೆಚ್ಚು ಕಾಲ ವಿಸ್ತರಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.