ADVERTISEMENT

ಕೆಂಪೇಗೌಡರ ಜಯಂತಿ ಮರೆತ ಬಿಬಿಎಂಪಿ

ಆಚರಣೆಗೆ ಅನುದಾನ ಕೊರತೆ l ಪಾಲನೆಯಾಗದ ಸರ್ಕಾರದ ಆದೇಶ l ನಿರ್ಲಕ್ಷ್ಯಕ್ಕೆ ಅಸಮಾಧಾನ

Published 1 ಜುಲೈ 2022, 21:22 IST
Last Updated 1 ಜುಲೈ 2022, 21:22 IST
ಕೆಂಪೇಗೌಡ ಪ್ರತಿಮೆ
ಕೆಂಪೇಗೌಡ ಪ್ರತಿಮೆ   

ಬೆಂಗಳೂರು: ನಗರ ನಿರ್ಮಾತೃ ಕೆಂಪೇಗೌಡರ ಜಯಂತಿ ಆಚರಣೆ ವಿಷಯದಲ್ಲಿ ಬಿಬಿಎಂಪಿಯ ನಿರ್ಲಕ್ಷ್ಯಕ್ಕೆ ಅಸಮಾಧಾನ ವ್ಯಕ್ತವಾಗಿದೆ.

‘ಮೇಯರ್‌ ಇದ್ದಾಗ ಅವರ ಅನುದಾನದಿಂದ ಕಾರ್ಯಕ್ರಮವಾಗುತ್ತಿತ್ತು. ಈಗ ಆಚರಣೆಗೆ ಅನುದಾನದ ಕೊರತೆ ಇದೆ’ ಎಂದು ಬಿಬಿಎಂಪಿ ಅಧಿಕಾರಿಗಳು ಜಯಂತಿಯಂದು ಬಿಬಿಎಂಪಿ ಕೇಂದ್ರ ಕಚೇರಿ ಮುಂದಿರುವ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮ ಮುಗಿಸಿದ್ದಾರೆ. ಕೆಂಪೇಗೌಡರ ಜಯಂತಿ ಆಚರಣೆಗೂ ಅನುದಾನದ ಕೊರತೆಯ ಕಾರಣ ಮುಂದಿಟ್ಟಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಕೆಂಪೇಗೌಡರ ಜಯಂತಿಯನ್ನು ಮೈಸೂರು ದಸರಾ ರೀತಿಯಲ್ಲಿ ನಾಡ ಹಬ್ಬವಾಗಿ ಆಚರಿಸುವುದಾಗಿ ಸಚಿವರು ಹೇಳಿಕೊಂಡಿದ್ದರು. ಆದರೆ, ಸರ್ಕಾರದಿಂದ ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭ ಹೊರತುಪಡಿಸಿದರೆ ಯಾವುದೇ ಕಾರ್ಯಕ್ರಮ ನಡೆದಿಲ್ಲ. ಕೆಂಪೇಗೌಡರ ಗೋಪುರವನ್ನೇ ಚಿಹ್ನೆಯಾಗಿರಿಸಿಕೊಂಡಿರುವ, ಅವರ ಹೆಸರಿನಲ್ಲೇ ಸಭಾಂಗಣಗಳನ್ನು ಹೊಂದಿರುವ ಬಿಬಿಎಂಪಿ ಒಂದು ಸಮಾರಂಭ ಮಾಡದಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ADVERTISEMENT

‘ಮೇಯರ್‌ ಇದ್ದಾಗ ಯಾವ ಕೆಲಸಗಳನ್ನು ಮಾಡುತ್ತಿದ್ದರೋ ಅದನ್ನು ಆಡಳಿತಾಧಿಕಾರಿ ಮಾಡುತ್ತಿದ್ದಾರೆ. ಕೆಂಪೇಗೌಡರ ಜಯಂತಿಯನ್ನು ಆಚರಿಸಬೇಕಾದದ್ದು ಅವರ ಕರ್ತವ್ಯ. ಅದನ್ನು ಮರೆತು ಸುಮ್ಮನೆ ಕುಳಿತಿರುವುದು ನಿರ್ಲಕ್ಷ್ಯದ ಪರಮಾವಧಿ’ ಎಂದು ಲೇಖಕ ತಲಕಾಡು ಚಿಕ್ಕರಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು.

‘ಕೆಂಪೇಗೌಡರ ಜಯಂತಿಯನ್ನು ಕರಗದ ಸಂದರ್ಭದಲ್ಲಿ ಈ ಹಿಂದೆ ಮಾಡಲಾಗುತ್ತಿತ್ತು. ಆದರೆ, ಇತಿಹಾಸ ತಜ್ಞರ ದಾಖಲೆ ಹಾಗೂ ಸಲಹೆ ಮೇರೆಗೆ 2017ರ ನಂತರ ಸರ್ಕಾರ ಪ್ರತಿ ವರ್ಷ ಜೂನ್‌ 27ರಂದು ಕೆಂಪೇಗೌಡರ ಜಯಂತಿ ಆಚರಣೆ ಮಾಡಲು ತೀರ್ಮಾನಿಸಿ ಆದೇಶ ಹೊರಡಿಸಿದೆ. ಸರ್ಕಾರದ ಆದೇಶವನ್ನೂ ಬಿಬಿಎಂಪಿ ಪಾಲಿಸದಿರುವುದು ಆಕ್ಷೇಪಾರ್ಹ’ ಎಂದರು.

‘ಸ್ಥಳೀಯರಿಗೆ, ಇಲ್ಲಿ ಬಂದು ವಾಸಮಾಡುವರರಿಗೆ, ವ್ಯಾಪಾರ ಮಾಡುವವರಿಗೆ ಈ ನಗರವನ್ನು ನಿರ್ಮಿಸಿದ ಕೆಂಪೇಗೌಡರ ಜಯಂತಿಯನ್ನು ಬಿಬಿಎಂಪಿ ನಿರ್ಲಕ್ಷಿಸಿದ್ದು ಸರಿಯಲ್ಲ. ನಾಡಪ್ರಭು ಜಯಂತಿಗೆ ಅನುದಾನಕ್ಕಾಗಿ ಕಾಯುವ ಅಧಿಕಾರಿಗಳು, ರಾತ್ರೋರಾತ್ರಿ ರಸ್ತೆ ಮಾಡುವುದಕ್ಕೆ ಏಕೆ ಕಾಯುವುದಿಲ್ಲ’ ಎಂಬುದು ‘ಗೌಡತಿಯರ ಸೇನೆ’ ಅಧ್ಯಕ್ಷೆ ರೇಣುಕಾ ಪ್ರಶ್ನಿಸುತ್ತಾರೆ.

ಚರ್ಚಿಸಿ, ಆಯೋಜನೆ: ಆಡಳಿತಾಧಿಕಾರಿ

‘ಕೆಂಪೇಗೌಡರಂತಹ ಮಹನೀಯರ ಜಯಂತಿ ಕಾರ್ಯಕ್ರಮ
ವನ್ನು ಮರೆಯುವಂತಿಲ್ಲ. ಕಳೆದ ವರ್ಷದ ರೀತಿಯಲ್ಲಿ ಈ ಬಾರಿಯೂ ಬಿಬಿಎಂಪಿ ಮುಂದಿನ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಆಚರಣೆ ಮಾಡಿದೆ. ಸರ್ಕಾರ ಕಾರ್ಯಕ್ರಮ ಆಯೋಜನೆ ಮಾಡಿದ್ದರಿಂದ ನಾವು ಮಾಡಬೇಕೆ ಬೇಡವೇ ಎಂಬ ಪ್ರಶ್ನೆ ಇತ್ತು. ಎಲ್ಲರ ಅಭಿಪ್ರಾಯದಲ್ಲಿ ಆಚರಣೆ ಮಾಡಬೇಕೆಂದರೆ ಮುಖ್ಯ ಆಯುಕ್ತರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ತಿಳಿಸಿದರು.


ಬೆಂಗಳೂರು ಹಬ್ಬವೂ ಕಡೆಗಣನೆ

‘ಕೆಂಪೇಗೌಡರ ಜಯಂತಿಯನ್ನು 2022ರಿಂದ ಮೂರು ದಿನ ‘ಬೆಂಗಳೂರು ಹಬ್ಬ’ವಾಗಿ ಆಚರಿಸಲಾಗುವುದು’ ಎಂದು ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ನೀಡಿದ್ದ ಭರವಸೆಯೂ ಈಡೇರದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

‘ಜೂನ್‌ 26ರಿಂದ 28ರ ವರೆಗೆ ನಗರದಲ್ಲಿರುವ ಪಾರಂಪರಿಕ ಕಟ್ಟಡಗಳನ್ನು ಅಲಂಕಾರಗೊಳಿಸಿ, ಅವುಗಳ ಮಾಹಿತಿಯನ್ನು ಪ್ರಚಾರಗೊಳಿಸಲಾಗುವುದು ಎಂದು 2021ರಲ್ಲಿ ನಡೆದ ಕೆಂಪೇಗೌಡ ಜಯಂತಿ ಸಂದರ್ಭದಲ್ಲಿ ಅಂದು ಉಪ ಮುಖ್ಯಮಂತ್ರಿಯಾಗಿದ್ದ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದ್ದರು. ಅದೂ ಕಾರ್ಯಗತವಾಗಿಲ್ಲ. ಸಚಿವರಿಗೆ ಅವರು ಹೇಳಿದ್ದನ್ನೇ ನೆನಪಿಸುವ ಕೆಲಸವಾಗಬೇಕೆ?’ ಎಂದು ತಲಕಾಡು ಚಿಕ್ಕರಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.