ADVERTISEMENT

ವಿದ್ಯಾರ್ಥಿಗಳಿಗೆ ಸ್ವೆಟರ್‌ ವಿತರಣೆ: ಟಿವಿಸಿಸಿ ತನಿಖೆಗೆ ಸೂಚನೆ

ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನಗರಾಭಿವೃದ್ಧಿ ಇಲಾಖೆ ಎಸಿಎಸ್‌ ಪತ್ರ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 20:00 IST
Last Updated 16 ಸೆಪ್ಟೆಂಬರ್ 2021, 20:00 IST

ಬೆಂಗಳೂರು: ಬಿಬಿಎಂಪಿ ಆಡಳಿತದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ 2020–21ನೇ ಸಾಲಿನಲ್ಲಿ ವಿತರಿಸಲು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಿಂದ (ಕೆಎಚ್‌ಡಿಸಿ) ಸ್ವೆಟರ್‌ಗಳು ಪೂರೈಕೆಯ ಬಗ್ಗೆ ಆಯುಕ್ತರ ತಾಂತ್ರಿಕ ಜಾಗೃತ ಕೋಶದಿಂದ (ಟಿವಿಸಿಸಿ) ತನಿಖೆ ನಡೆಸಿ ಸ್ಪಷ್ಟ ಅಭಿಪ್ರಾಯದಿಂದ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅವರು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರಿಗೆ ಪತ್ರ ಬರೆದಿದ್ದಾರೆ.

‘ಸ್ವೆಟರ್‌ ವಿತರಣೆ ಪ್ರಕ್ರಿಯೆಯಲ್ಲಿ ಲೋಪಗಳಾಗಿವೆ. ಕೆಎಚ್‌ಡಿಸಿಗೆ ₹ 1.72 ಕೋಟಿ ಪಾವತಿಸಲಾಗಿದೆ. ಪಾಲಿಕೆ ಹಾಗೂ ಕೆಎಚ್‌ಡಿಸಿ ಮಾಡಿಕೊಂಡ ಒಪ್ಪಂದ ಹಾಗೂ ಕಾರ್ಯಾದೇಶಗಳ ಪ್ರಕಾರ ಕ್ರಮಗಳನ್ನು ಜರುಗಿಸಿಲ್ಲ. ವಿದ್ಯಾರ್ಥಿಗಳಿಗೆ ಸ್ವೆಟರ್‌ ವಿತರಿಸದೇ ಭ್ರಷ್ಟಾಚಾರ ನಡೆಸಲಾಗಿದೆ’ ಎಂದು ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಸಿ.ಎಸ್‌. ರಘು ಅವರು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದರು. ಈ ದೂರಿನ ಪ್ರತಿಯನ್ನೂ ಎಸಿಎಸ್‌ ಅವರು ಪತ್ರದ ಜೊತೆ ಲಗತ್ತಿಸಿದ್ದಾರೆ.

ಸ್ವೆಟರ್‌ ವಿತರಣೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಬಗ್ಗೆ ಈ ಹಿಂದೆ ದೂರು ಸಲ್ಲಿಕೆಯಾದಾಗ ಬಿಬಿಎಂಪಿಯ ಮುಖ್ಯ ಆಯುಕ್ತರು ಈ ಬಗ್ಗೆ ಶಿಕ್ಷಣ ವಿಭಾಗದಿಂದ ವಿವರಣೆ ಕೇಳಿದ್ದರು. 2020–21ನೇ ಸಾಲಿನಲ್ಲಿ ಕೆಎಚ್‌ಡಿಸಿಯಿಂದ ಒಟ್ಟು 18,600 ಸ್ವೆಟರ್‌ಗಳು ಪೂರೈಕೆ ಆಗಿವೆ. ಇದುವರೆಗೆ 16,218 ಸ್ವೆಟರ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ ಎಂದು ಶಿಕ್ಷಣ ವಿಭಾಗದ ಸಹಾಯಕ ಆಯುಕ್ತರು ತಿಳಿಸಿದ್ದರು. ಸ್ವೆಟರ್‌ ಹಂಚಿಕೆ ಕುರಿತ ಶಾಲಾವಾರು ವಿವರವನ್ನು ಒದಗಿಸಿದ್ದರು.

ADVERTISEMENT

2020ರ ಡಿ.23ರಂದು ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆಯಂತೆ 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗಳು ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿ.ಯು ಕಾಲೇಜು ವಿದ್ಯಾರ್ಥಿಗಳಿಗೆ 2021ರ ಜನವರಿಯಿಂದ ಏಪ್ರಿಲ್‌ವರೆಗೆ ತರಗತಿಗಳು ನಡೆದಿವೆ. ಆಗ ತರಗತಿಗೆ ಹಾಜರಾದ ವಿದ್ಯಾರ್ಥಿಗಳಿಗೆ ಮಾತ್ರ ಸ್ವೆಟರ್‌ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.