ADVERTISEMENT

ಕೋವಿಡ್-19‌: ಸೋಂಕಿತರ ಆರೈಕೆಗೆ ಖಾಸಗಿ ಹೋಟೆಲ್‌ ಬಳಕೆ

20 ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು

ಪ್ರವೀಣ ಕುಮಾರ್ ಪಿ.ವಿ.
Published 22 ಜೂನ್ 2020, 20:49 IST
Last Updated 22 ಜೂನ್ 2020, 20:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದ್ದು, ರೋಗಿಗಳ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ತೀವ್ರ ಕೊರತೆ ಉಂಟಾಗುತ್ತಿದೆ. ಈ ಕೊರತೆ ನೀಗಿಸುವ ನಿಟ್ಟಿನಲ್ಲಿ ರೋಗ ಲಕ್ಷಣಗಳಿಲ್ಲದ ಸೋಂಕಿತರ ಆರೈಕೆಗಾಗಿ ಖಾಸಗಿ ಹೋಟೆಲ್‌ಗಳನ್ನು ಬಳಸಲು ಬಿಬಿಎಂಪಿ ಚಿಂತನೆ ನಡೆಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಮೇ 31ರವರೆಗೆ 358 ಇದ್ದ ಸೋಂಕಿತರ ಸಂಖ್ಯೆ ಲಾಕ್‌ಡೌನ್‌ ಸಡಿಲಿಕೆ ಬಳಿಕ 1,398ಕ್ಕೆ ಹೆಚ್ಚಳ ಕಂಡಿದೆ. 22 ದಿನಗಳಲ್ಲೇ 1,019 ಪ್ರಕರಣಗಳು ಪತ್ತೆಯಾಗಿವೆ. ಮೂರು ದಿನಗಳಲ್ಲಿ ನಿತ್ಯ ಸರಾಸರಿ 100ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಇದೇ ಪ್ರಮಾಣದಲ್ಲಿ ಸೋಂಕು ಹೆಚ್ಚುತ್ತಾ ಸಾಗಿದರೆ ಈಗಾಗಲೇ ಕೋವಿಡ್‌–19 ಚಿಕಿತ್ಸೆಗೆ ಗುರುತಿಸಿರುವ ಆಸ್ಪತ್ರೆಗಳ ಎಲ್ಲ ಹಾಸಿಗೆಗಳೂ ಭರ್ತಿಯಾಗಲಿವೆ. ಕೋವಿಡ್‌ ರೋಗಗಳಿಗೆ ಮಾತ್ರ ಚಿಕಿತ್ಸೆ ನೀಡುತ್ತಿರುವ ವಿಕ್ಟೋರಿಯಾ ಆಸ್ಪತ್ರೆ (500 ಹಾಸಿಗೆ) ಹಾಗೂ ಬೌರಿಂಗ್‌ ಆಸ್ಪತ್ರೆಗಳಲ್ಲಿ (250 ಹಾಸಿಗೆ) ಹಾಸಿಗೆಗಳು ಖಾಲಿ ಇಲ್ಲ.

‘ಕಂಠೀರವ ಒಳಾಂಗಣ ಕ್ರೀಡಾಂಗಣ, ಹಜ್‌ ಭವನ ಮುಂತಾದ ಕಡೆ ಕೋವಿಡ್‌ ಆರೈಕೆ ಕೇಂದ್ರಗಳನ್ನು ಆರಂಭಿಸುವ ಸಿದ್ಧತೆ ನಡೆಯುತ್ತಿದೆ. ಆದರೆ, ಇಲ್ಲಿ ಶೌಚಾಲಯ, ಸ್ನಾನಗೃಹ ಮುಂತಾದ ಸೌಕರ್ಯಗಳನ್ನು ಪೂರ್ಣಪ್ರಮಾಣದಲ್ಲಿ ಕಲ್ಪಿಸುವುದಕ್ಕೆ ಸಮಯ ತಗಲುತ್ತದೆ. ಅಲ್ಲಿ ಹಾಸಿಗೆಗಳ ವ್ಯವಸ್ಥೆಯನ್ನೂ ಹೊಸತಾಗಿ ಮಾಡಬೇಕಾಗುತ್ತದೆ. ಅಗತ್ಯ ಮೂಲಸೌಕರ್ಯ ಇರುವ ಹೋಟೆಲ್‌ಗಳನ್ನು ಸದ್ಯಕ್ಕೆ ಆಸ್ಪತ್ರೆಯನ್ನಾಗಿ ಪರಿವರ್ತಿಸುವ ಬಗ್ಗೆ ಚರ್ಚೆ ನಡೆದಿದೆ’ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

‘ನಾವು ಈಗಾಗಲೇ ಸಾಂಸ್ಥಿಕ ಕ್ವಾರಂಟೈನ್‌ ಮಾಡಲು ಖಾಸಗಿ ಹೋಟೆಲ್‌ಗಳನ್ನು ಬಳಸಿಕೊಂಡಿದ್ದೇವೆ. ಸೋಂಕು ಲಕ್ಷಣ ಇಲ್ಲದ ರೋಗಿಗಳಿಗೆ ಹೆಚ್ಚಿನ ಆರೈಕೆ ಅಗತ್ಯ ಇರುವುದಿಲ್ಲ. ಅಂತಹವರ ಆರೈಕೆಗೆ ಹೋಟೆಲ್‌ಗಳನ್ನು ಬಳಸಿಕೊಳ್ಳುವ ಬಗ್ಗೆ ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಸಮಾಲೋಚನೆ ನಡೆಸಿದ್ದೇವೆ’ ಎಂದರು.

‘ಯಾವೆಲ್ಲ ಹೋಟೆಲ್‌ಗಳನ್ನು ಕೋವಿಡ್‌ 19 ರೋಗಿಗಳ ಆರೈಕೆಗೆ ಬಳಸಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಅಗತ್ಯ ಮೂಲಸೌಕರ್ಯ ಹೊಂದಿರುವ ಹೋಟೆಲ್‌ಗಳಿಗೆ ಸೋಂಕು ನಿವಾರಕ ಸಿಂಪಡಿಸಿ ಅವುಗಳನ್ನು ಬಳಸಿಕೊಳ್ಳುತ್ತೇವೆ’ ಎಂದರು.

ರ‍್ಯಾಂಡಮ್‌ ತಪಾಸಣೆ ಮತ್ತೆ ಆರಂಭ

ಕೊರೊನಾ ಸೋಂಕು ವ್ಯಾಪಕವಾಗಿ ಕಂಡುಬಂದ ಪ್ರದೇಶಗಳಲ್ಲಿ ಸೋಂಕಿತರ ಸಂಪರ್ಕ ಪತ್ತೆಯಾಗದವರ (ರ‍‍್ಯಾಂಡಮ್‌ ತಪಾಸಣೆ) ಗಂಟಲ ದ್ರವ ಪಡೆದು ಪರೀಕ್ಷೆಗೆ ಒಳಪಡಿಸುವುದನ್ನು ಬಿಬಿಎಂಪಿ ಇತ್ತೀಚೆಗೆ ಸ್ಥಗಿತಗೊಳಿಸಿತ್ತು. ನಗರದಲ್ಲಿ ಸೋಂಕು ಸಮುದಾಯಕ್ಕೆ ಹಬ್ಬಿರುವ ಲಕ್ಷಣಗಳು ಕಾಣಿಸಿರುವುದರಿಂದ ಪಾಲಿಕೆ ರ‍್ಯಾಂಡಮ್‌ ತಪಾಸಣೆಯನ್ನು ಮತ್ತೆ ಆರಂಭಿಸಿದೆ.

‘ಪೊಲೀಸ್‌ ಸಿಬ್ಬಂದಿ, ಬಿಎಂಟಿಸಿ ಸಿಬ್ಬಂದಿ, ಆಟೊರಿಕ್ಷಾ ಚಾಲಕರು, ಮಾಲ್‌ಗಳ ಕ್ಯಾಷ್‌ ಕೌಂಟರ್‌ನ ಸಿಬ್ಬಂದಿ,ಸ್ವಚ್ಛತಾ ಸಿಬ್ಬಂದಿ, ಬೀದಿಬದಿ ವ್ಯಾಪಾರಿಗಳನ್ನು ಮಂಗಳವಾರದಿಂದಲೇ ರ‍್ಯಾಂಡಮ್‌ ಪರೀಕ್ಷೆಗ ಒಳಪಡಿಸಲಿದ್ದೇವೆ. ಅದರಲ್ಲೂ 50 ವರ್ಷ ಮೇಲ್ಪಟ್ಟವರನ್ನು ಆದ್ಯತೆ ಮೇರೆಗೆ ತಪಾಸಣೆ ನಡೆಸಲಿದ್ದೇವೆ’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಬಿ.ಕೆ.ವಿಜಯೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.