ADVERTISEMENT

ಆರಗ, ಸೇಡಂ ಬದಲಿ ನಿವೇಶನ ವಾಪಸ್‌: ಸುಪ್ರೀಂ ಕೋರ್ಟ್‌ ಆದೇಶ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2022, 19:26 IST
Last Updated 11 ಅಕ್ಟೋಬರ್ 2022, 19:26 IST
ಸುಪ್ರೀಂ
ಸುಪ್ರೀಂ   

ನವದೆಹಲಿ:ಬೆಂಗಳೂರಿನಲ್ಲಿ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದ ಬಡಾವಣೆಯಲ್ಲಿ ರಾಜಕಾರಣಿಗಳಿಗೆ ಕಾನೂನುಬಾಹಿರವಾಗಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್‌, ಈ ಬದಲಿ ನಿವೇಶನಗಳನ್ನು ಕಾನೂನು ಪ್ರಕ್ರಿಯೆಗಳ ಅನುಸಾರವಾಪಸ್‌ ಪಡೆಯುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಮಂಗಳವಾರ ಆದೇಶ ನೀಡಿದೆ.

ನಿವೇಶನಗಳ ಮಂಜೂರಾತಿಯನ್ನಷ್ಟೇ ರದ್ದುಗೊಳಿಸುವುದು ಸಾಲದು ಎಂದಿರುವ ನ್ಯಾಯಾಲಯ, ನಿವೇಶನದ ಮಾಲೀಕರಿಂದ ಅವುಗಳನ್ನು ಮರಳಿ ಸ್ವಾಧೀನಕ್ಕೆ ಪಡೆಯಬೇಕು ಎಂದು ಪ್ರಾಧಿಕಾರಕ್ಕೆ ಸೂಚನೆ ನೀಡಿತು.

ನ್ಯಾಯಮೂರ್ತಿಗಳಾದ ಅಬ್ದುಲ್‌ ಎಸ್‌.ನಜೀರ್‌, ಸಂಜೀವ್‌ ಖನ್ನಾ ಅವರನ್ನು ಒಳಗೊಂಡ ನ್ಯಾಯಪೀಠ, ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಸಮಿತಿ ನೀಡಿರುವ ವರದಿಯನ್ನು ಪರಿಗಣಿಸಿತು. ಸುಪ್ರೀಂ ಕೋರ್ಟ್‌ 2021ರ ಅಕ್ಟೋಬರ್‌ನಲ್ಲಿ ನೀಡಿರುವ ಆದೇಶವನ್ನು ಉಲ್ಲಂಘಿಸಿ ಪ್ರಾಧಿಕಾರವು ಆರ್‌ಎಂವಿ ಎರಡನೇ ಹಂತದಲ್ಲಿ ರಾಜಕಾರಣಿಗಳಿಗೆಪರ್ಯಾಯ ನಿವೇಶನಗಳನ್ನು ಹಂಚಿಕೆ ಮಾಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಮರು ಸ್ವಾಧೀನ ಪಡೆದಿರುವ ಅಥವಾ ಪೂರ್ಣ ಅಭಿವೃದ್ಧಿ ಹೊಂದಿದ ಬಡಾವಣೆಗಳಲ್ಲಿ ಸಾರ್ವಜನಿಕ ಹರಾಜಿನ ಮೂಲಕ ಮಾತ್ರ ನಿವೇಶನಗಳನ್ನು ಹಂಚಿಕೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ 2021ರ ಅಕ್ಟೋಬರ್‌ 29ರಂದು ಆದೇಶಿಸಿತ್ತು. ಆದರೆ, ಪ್ರಾಧಿಕಾರವು ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲಂಘಿಸಿ ಅಭಿವೃದ್ಧಿ ಹೊಂದಿದ ಬಡಾವಣೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ, ಬಿಜೆಪಿ ಶಾಸಕರಾದ ವೀರಣ್ಣ ಸಿ.ಚರಂತಿಮಠ, ಅಭಯ ಪಾಟೀಲ, ನಗರಾಭಿವೃದ್ಧಿ ಇಲಾಖೆಯ ಉಪ ಕಾರ್ಯದರ್ಶಿ ಜಗದೀಶ ರೆಡ್ಡಿ ಸಂಬಂಧಿಕರು ಸೇರಿದಂತೆ ಏಳು ಮಂದಿಗೆ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿತ್ತು.

‘ಬದಲಿ ನಿವೇಶನದ ಮಂಜೂರಾತಿಯಲ್ಲಿ ಕೆಲವು ಉಲ್ಲಂಘನೆಗಳು ಆಗಿವೆ ಎಂದು ನೀವು ಈಗಾಗಲೇ ತಿಳಿಸಿದ್ದೀರಿ. ಸಮಿತಿಯು ಉಲ್ಲಂಘನೆಯ ವಿವರಗಳನ್ನು ನೀಡಿದೆ. ನೀವು ಇಲ್ಲಿಯವರೆಗೆ ಕ್ರಯಪತ್ರವನ್ನು ರದ್ದುಗೊಳಿಸಿಲ್ಲ. ಇದರಿಂದ ಕೆಲವು ಜನರು ಒಂದೇ ಬಾರಿಗೆ ನಾಲ್ಕರಿಂದ ಐದು ನಿವೇಶನಗಳನ್ನು ಪಡೆಯಲು ಸಾಧ್ಯವಾಗಿದೆ’ ಎಂದ ನ್ಯಾಯಮೂರ್ತಿ ಅಬ್ದುಲ್‌ ನಜೀರ್‌, ನಿವೇಶನಗಳನ್ನು ಹಿಂಪಡೆಯಲು ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬಿಡಿಎ ವಕೀಲರನ್ನು ಪ್ರಶ್ನಿಸಿದರು.

ಬಿಡಿಎ ಪರ ವಕೀಲ ಎಸ್.ಕೆ ಕುಲಕರ್ಣಿ ಪ್ರತಿಕ್ರಿಯೆ ನೀಡಲು ಕಾಲಾ ವಕಾಶ ಕೋರಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ‘ಕ್ರಯಪತ್ರ ವನ್ನು ಏಕಪಕ್ಷೀಯವಾಗಿ ರದ್ದುಗೊಳಿಸಲಾಗದು. ಇದಕ್ಕೆ ನಿವೇಶನ ಪಡೆದವರು ಸಹ ಒಪ್ಪಿಗೆ ನೀಡಬೇಕು. ಆಸ್ತಿಯನ್ನು ಮಾರಾಟ ಮಾಡುವುದು ಅಥವಾ ಏಕಪಕ್ಷೀಯವಾಗಿ ರದ್ದುಗೊಳಿಸುವುದು ಸರಿಯಲ್ಲ. ಹೀಗಾಗಿ, ಬಿಡಿಎ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿತು. ಕೇವಲ ಮಂಜೂರಾತಿಯನ್ನು ರದ್ದುಗೊಳಿಸುವು ದರಿಂದ ಯಾವುದೇ ಕಾನೂನಾತ್ಮಕ ಪರಿಹಾರ ದೊರಕುವುದಿಲ್ಲ ಎಂದೂ ಪೀಠ ಹೇಳಿತು.

ಶಿವರಾಮ ಕಾರಂತ ಬಡಾವಣೆಯಲ್ಲಿ ನಿರ್ಮಿಸಲಾಗಿರುವ ಕಟ್ಟಡಗಳ ನಿಯಮಗಳನ್ನು ಪರಿಶೀಲಿಸುತ್ತಿರುವ ನ್ಯಾಯಮೂರ್ತಿ ಚಂದ್ರಶೇಖರ್‌ ಸಮಿತಿಗೆ ಬಡಾವಣೆ ನಿರ್ಮಾಣದ ಮೇಲ್ವಿಚಾರಣೆ ವಹಿಸುವಂತೆ ನ್ಯಾಯಪೀಠ ಆದೇಶಿಸಿತು.

ಕಾರ್ಯದರ್ಶಿ, ಉಪ ಕಾರ್ಯದರ್ಶಿ ವರ್ಗ

ಆರ್‌ಎಂವಿ ಎರಡನೇ ಹಂತದಲ್ಲಿ ರಾಜಕಾರಣಿಗಳಿಗೆ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿದ ಕಾರಣಕ್ಕೆ ಬಿಡಿಎ ಕಾರ್ಯದರ್ಶಿ ಸಿ.ಎಲ್‌.ಆನಂದ್‌ ಹಾಗೂ ಉಪ ಕಾರ್ಯದರ್ಶಿ ಡಾ.ಎನ್‌.ಎನ್‌.ಮಧು ಅವರನ್ನು ವರ್ಗಾವಣೆ ಮಾಡುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

‘ಅಧಿಕಾರಿಗಳಿಬ್ಬರು ದೇಶದ ಕಾನೂನನ್ನು ಪಾಲನೆ ಮಾಡಿಲ್ಲ. ಹಂಚಿಕೆಯಾದ ನಿವೇಶನ ಸಾರ್ವಜನಿಕ ಆಸ್ತಿ. ಅದು ಆಯುಕ್ತರ ಆಸ್ತಿಯಲ್ಲ’ ಎಂದು ನ್ಯಾಯಪೀಠ ಮೌಖಿಕವಾಗಿ ಹೇಳಿತು.

ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿದ ಕಾರಣಕ್ಕೆ ಬಿಡಿಎ ಆಯುಕ್ತ ಎಂ.ಬಿ.ರಾಜೇಶ ಗೌಡ ಅವರನ್ನು ವರ್ಗಾವಣೆ ಮಾಡುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.