ADVERTISEMENT

ಬಿಬಿಎಂಪಿಯ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಶೇ 10ರಷ್ಟು ಹಾಸಿಗೆ ಮಾತ್ರವೇ ಖಾಲಿ

ನಗರದಲ್ಲಿನ ಕೋವಿಡ್‌–19 ಆರೈಕೆ ಕೇಂದ್ರಗಳಲ್ಲೂ ಕೊರತೆ ಎದುರಾಗುವ ಮುನ್ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 21:04 IST
Last Updated 19 ಏಪ್ರಿಲ್ 2021, 21:04 IST
   

ಬೆಂಗಳೂರು: ಕೋವಿಡ್‌ ಸೊಂಕಿತರ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ಸಮಸ್ಯೆ ಬೆನ್ನಲ್ಲೇ, ಬಿಬಿಎಂಪಿ ಆರಂಭಿಸಿರುವ ಕೋವಿಡ್‌ ಆರೈಕೆ ಕೇಂದ್ರಗಳಲ್ಲೂ ಹಾಸಿಗೆ ಕೊರತೆ ಎದುರಾಗುವ ಮುನ್ಸೂಚನೆ ಇದೆ. ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಸದ್ಯ ಶೇ 10ರಷ್ಟು ಹಾಸಿಗೆಗಳು ಮಾತ್ರ ಖಾಲಿ ಉಳಿದಿವೆ.

ಉಸಿರಾಟದ ತೊಂದರೆ ಇದ್ದವರನ್ನು ಹಾಗೂ ಆಮ್ಲಜನಕ ಪೂರೈಕೆಯ ಅವಶ್ಯಕತೆ ಇರುವವರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಲು ಹಾಗೂ ಇನ್ನುಳಿದ ಸೋಂಕಿತರನ್ನು ಕೋವಿಡ್‌ ಆರೈಕೆ ಕೇಂದ್ರಗಳಿಗೆ ದಾಖಲಿಸಲು ಸೋಮವಾರ ನಡೆದ ಸಚಿವರು, ಶಾಸಕರು ಹಾಗೂ ಸಂಸದರ ಸಭೆಯ ಬಳಿಕ ಸರ್ಕಾರ ತೀರ್ಮಾನಿಸಿದೆ. ಆದರೆ, ಈ ತೀರ್ಮಾನವನ್ನು ಜಾರಿಗೊಳಿಸಲು ಅವಶ್ಯವಿರುವಷ್ಟು ಪ್ರಮಾಣದ ಕೋವಿಡ್‌ ಆರೈಕೆ ಕೇಂದ್ರಗಳೂ ನಗರದಲ್ಲಿಲ್ಲ.

ಸದ್ಯಕ್ಕೆ ಹಜ್‌ಭವನ ಹಾಗೂ ಎಚ್‌ಎಎಲ್‌ನ ಸಭಾಂಗಣವನ್ನು ಕೋವಿಡ್‌ ಆರೈಕೆ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ. ಹಜ್‌ಭವನದಲ್ಲಿ 400 ಹಾಸಿಗೆಗಳು ಹಾಗೂ ಎಚ್‌ಎಎಲ್‌ ಸಭಾಂಗಣದಲ್ಲಿ 128 ಆಸ್ಪತ್ರೆಗಳ ಸೌಕರ್ಯ ಇದೆ. ಆದರೆ ಇಲ್ಲಿನ ಶೇ 90ರಷ್ಟು ಹಾಸಿಗೆಗಳು ಭರ್ತಿಯಾಗಿವೆ. ಕೇವಲ 54 ಹಾಸಿಗೆಗಳು ಮಾತ್ರ ಖಾಲಿ ಇವೆ.

ADVERTISEMENT

ಪ್ರತಿ ವಲಯದಲ್ಲೂ ಅಲ್ಲಲ್ಲಿ 50– 60 ಹಾಸಿಗೆ ಸಾಮರ್ಥ್ಯದ ಕೋವಿಡ್ ಆರೈಕೆ ಕೇಂದ್ರಗಳನ್ನು ಆರಂಭಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಅವರು ಆಯಾ ವಲಯ ಆಯುಕ್ತರಿಗೆ ಹಾಗೂ ಜಂಟಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಈ ಕಾರ್ಯವೂ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ.

ಪೂರ್ವವಲಯದ ಹೆಬ್ಬಾಳದಲ್ಲಿ ಪಶುವೈದ್ಯಕೀಯ ಕಾಲೇಜಿನ ಪ್ರಾಂಗಣದಲ್ಲಿ 50 ಹಾಸಿಗೆ ಸಾಮರ್ಥ್ಯದ ಕೋವಿಡ್‌ ಆರೈಕೆ ಕೇಂದ್ರ ಸಿದ್ಧವಾಗುತ್ತಿದೆ. ‘ಮಂಗಳವಾರ ಸಂಜೆ ವೇಳೆಗೆ ಇದು ಸಿದ್ಧವಾಗಲಿದೆ. ಬುಧವಾರದಿಂದಲೇ ಇಲ್ಲಿಗೆ ಸೋಂಕಿತರನ್ನು ದಾಖಲಿಸಿಕೊಳ್ಳಲಿದ್ದೇವೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಐಸಿಯು ಹಾಸಿಗೆಗಳು ಬಹುತೇಕ ಭರ್ತಿ

ನಗರದ ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕ (ಐಸಿಯು) ಹಾಗೂ ವೆಂಟಿಲೇಟರ್‌ ಸೌಕರ್ಯ ಇರುವ ಹಾಸಿಗೆಗಳೂ ಬಹುತೇಕ ಭರ್ತಿ ಆಗಿವೆ. ಸೋಮವಾರ ರಾತ್ರಿ 10.15ರವರೆಗಿನ ಮಾಹಿತಿ ಪ್ರಕಾರ ನಗರದ ವಿವಿಧ ಆಸ್ಪತ್ರೆಗಳ ಐಸಿಯುಗಳಲ್ಲಿ 33 ಹಾಸಿಗೆಗಳು ಮಾತ್ರ ಖಾಲಿ ಉಳಿದಿದ್ದವು. ಆಮ್ಲಜನಕ ಪೂರಣ ವ್ಯವಸ್ಥೆ ಇರುವ ಎಚ್‌ಡಿ ಘಟಕಗಳಲ್ಲಿ 253 ಹಾಸಿಗೆಗಳು ಖಾಲಿ ಇದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.