ADVERTISEMENT

ಬಿಸಿಲಿನ ಝಳ: ಬಿಯರ್‌ ಮಾರಾಟ ಹೆಚ್ಚಳ

ಪ್ರಜಾವಾಣಿ ವಿಶೇಷ
Published 18 ಏಪ್ರಿಲ್ 2023, 22:45 IST
Last Updated 18 ಏಪ್ರಿಲ್ 2023, 22:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪವನ್‌ಕುಮಾರ್ ಎಚ್‌.

ಹುಬ್ಬಳ್ಳಿ: ರಾಜ್ಯದಲ್ಲಿ ಬಿಯರ್ ಮಾರಾಟ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. 2021–22ನೇ ಸಾಲಿಗೆ ಹೋಲಿಸಿದರೆ, 2022–23ನೇ ಸಾಲಿನಲ್ಲಿ ಬಿಯರ್ ಮಾರಾಟದಲ್ಲಿ ಶೇ 45ರಷ್ಟು ಏರಿಕೆಯಾಗಿದೆ.

ಬಿಯರ್ ತಯಾರಿಕೆಯ ಬಹುರಾಷ್ಟ್ರೀಯ ಕಂಪನಿಗಳ ಪ್ರವೇಶದಿಂದ ರಾಜ್ಯದಲ್ಲಿ ಲಭ್ಯವಿರುವ ಬಿಯರ್‌ಗಳ ವೈವಿಧ್ಯ ಹೆಚ್ಚಿದೆ. ಇದೂ ಮತ್ತು ಹೆಚ್ಚುತ್ತಿರುವ ತಾಪಮಾನದಿಂದಾಗಿ ಬಿಯರ್ ಮಾರಾಟದಲ್ಲಿ ಹೆಚ್ಚಳವಾಗಿದೆ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

2022–23ರ ಹಣಕಾಸು ವರ್ಷದಲ್ಲಿ 390.66 ಲಕ್ಷ ಕರ್ಟನ್‌ ಬಾಕ್ಸ್‌ (ಎಲ್‌ಸಿಬಿ) ಬಿಯರ್‌ ಮಾರಾಟವಾಗಿವೆ. ಇದರ ಹಿಂದಿನ ವರ್ಷ 2021–22ರಲ್ಲಿ 268.83 ಎಲ್‌ಸಿಬಿಯಷ್ಟು ಬಿಯರ್‌ ಮಾರಾಟವಾಗಿದ್ದವು. ಈ ಬಾರಿ ಹೆಚ್ಚುವರಿಯಾಗಿ 121.83 ಎಲ್‌ಸಿಬಿಯಷ್ಟು ಬಿಯರ್‌ ಮಾರಾಟವಾಗಿದ್ದು, ಅಬಕಾರಿ ಇಲಾಖೆಗೆ ₹ 800 ಕೋಟಿ ಹೆಚ್ಚಿನ ಆದಾಯ ತಂದುಕೊಟ್ಟಿದೆ.

ADVERTISEMENT

2019–20 ಹಾಗೂ ಕೋವಿಡ್‌ ತೀವ್ರವಾಗಿದ್ದ 2020–21ರಲ್ಲಿ ಬಿಯರ್‌ ಮಾರಾಟ ಕುಸಿತ ಕಂಡಿತ್ತು. ಆ ಎರಡೂ ಆರ್ಥಿಕ ವರ್ಷಗಳಲ್ಲಿ ಕ್ರಮವಾಗಿ 289.60 ಎಲ್‌ಸಿಬಿ ಹಾಗೂ 237.83 ಎಲ್‌ಸಿಬಿಯಷ್ಟು ಬಿಯರ್‌ ಮಾರಾಟವಾಗಿತ್ತು. ಇದಕ್ಕೂ ಮುಂಚೆ 2018–19ರಲ್ಲಿ 300.85 ಎಲ್‌ಸಿಬಿಯಷ್ಟು ಬಿಯರ್‌ ಮಾರಾಟವಾಗಿತ್ತು. ಇದರ ಹಿಂದಿನ ವರ್ಷದಲ್ಲಿ 265.77 ಎಲ್‌ಸಿಬಿಯಷ್ಟು ಬಿಯರ್‌ ಅನ್ನು ಜನರು ಖರೀದಿಸಿದ್ದರು.

ಹಲವು ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಬಿಯರ್‌ ಉತ್ಪನ್ನಗಳನ್ನು ರಾಜ್ಯದ ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ಗ್ರಾಹಕರ ಎದುರು ಹಲವು ಆಯ್ಕೆಗಳಿದ್ದು, ಬಿಯರ್‌ ಜನಪ್ರಿಯತೆ ಹೆಚ್ಚಾಗಲು ಕಾರಣವಾಗಿದೆ ಎಂದು ಅಬಕಾರಿ ಇಲಾಖೆಯ ಜಂಟಿ ನಿರ್ದೇಶಕ (ಅಂಕಿ–ಅಂಶಗಳ ವಿಭಾಗ) ಕೆ.ಎಸ್‌. ಶಿವಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ದೇಶೀ ಮದ್ಯದ್ದೇ ಪ್ರಾಬಲ್ಯ

ಬಿಯರ್‌ ಮಾರಾಟ ಏರಿಕೆ ಕಾಣುತ್ತಿದ್ದರೂ ದೇಶೀಯ ತಯಾರಿಕಾ ಮದ್ಯ (ಐಎಂಎಲ್‌) ಈಗಲೂ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿದೆ. ಶೇ 85ರಷ್ಟು ಆದಾಯ ತಂದು ಕೊಡುತ್ತದೆ. ಬಿಯರ್‌ ಕೇವಲ ಶೇ 15ರಷ್ಟು ಆದಾಯ ನೀಡುತ್ತದೆ.

2022–23ರಲ್ಲಿ ದೇಶೀಯ ಮದ್ಯ (ಐಎಂಎಲ್‌) ಹಾಗೂ ಬಿಯರ್‌ ಮಾರಾಟದಿಂದ ಸರ್ಕಾರಕ್ಕೆ ₹ 29,790 ಕೋಟಿ ಆದಾಯ ಬಂದಿದೆ. 2021–22ರಲ್ಲಿ ₹ 26,377 ಕೋಟಿ ಆದಾಯ ಇತ್ತು. 2023–24ರ ಸಾಲಿನಲ್ಲಿ ₹35 ಸಾವಿರ ಕೋಟಿ ಆದಾಯದ ಗುರಿಯನ್ನು ಇಲಾಖೆ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.