ADVERTISEMENT

CT Ravi Arrest | ವಿಧಾನ ‍ಪರಿಷತ್ತಿನಲ್ಲಿ ನಡೆದಿದ್ದೇನು?

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2024, 15:41 IST
Last Updated 19 ಡಿಸೆಂಬರ್ 2024, 15:41 IST
<div class="paragraphs"><p>ವಿಧಾನ ‍ಪರಿಷತ್ತಿನಲ್ಲಿ ಬಿಜೆಪಿ ಸದಸ್ಯರ ಪ್ರತಿಭಟನೆ</p></div>

ವಿಧಾನ ‍ಪರಿಷತ್ತಿನಲ್ಲಿ ಬಿಜೆಪಿ ಸದಸ್ಯರ ಪ್ರತಿಭಟನೆ

   

– ಪ್ರಜಾವಾಣಿ ಚಿತ್ರ

ಬೆಳಗಾವಿ (ಸುವರ್ಣ ಸೌಧ): ಗುರುವಾರ ಪರಿಷತ್ತಿನ ಶೂನ್ಯವೇಳೆಯ ಬಳಿಕ, ‘ಅಂಬೇಡ್ಕರ್‌ ವಿರುದ್ಧ ಕೇಂದ್ರ ಸಚಿವ ಅಮಿತ್ ಶಾ ಅವಮಾನಕರ ಹೇಳಿಕೆ ನೀಡಿದ್ದಾರೆ’ ಎಂದು ದೂರಿದ ಕಾಂಗ್ರೆಸ್‌ನ ಎಲ್ಲ ಸದಸ್ಯರು ಅಂಬೇಡ್ಕರ್‌ ಭಾವಚಿತ್ರ ಹಿಡಿದು ಚರ್ಚೆಗೆ ಪಟ್ಟು ಹಿಡಿದರು. ಪ್ರತಿಯಾಗಿ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಿ.ಟಿ. ರವಿ ಸೇರಿದಂತೆ ಬಿಜೆಪಿ ಸದಸ್ಯರು ಕೂಡಾ ಅಂಬೇಡ್ಕರ್‌ ಭಾವಚಿತ್ರ ಹಿಡಿದುಕೊಂಡು ‘ಅಂಬೇಡ್ಕರ್‌ ಅವರನ್ನು ಸೋಲಿಸಿದ್ದು ಕಾಂಗ್ರೆಸ್‌’ ಎಂದು ಘೋಷಣೆ ಕೂಗಿದರು. ಸದನದಲ್ಲಿ ಕೋಲಾಹಲ ಉಂಟಾದಾಗ ಕಲಾಪವನ್ನು ಸಭಾಪತಿ ಬಸವರಾಜ ಹೊರಟ್ಟಿ ಮುಂದೂಡಿದರು.

ADVERTISEMENT

ಕಲಾಪ ಮುಂದೂಡಿದರೂ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರು ಸದನದ ಒಳಗೆ ಪರಸ್ಪರ ಆರೋಪ– ಪ್ರತ್ಯಾರೋಪ ಮುಂದುವರಿಸಿದರು.

ಈ ವೇಳೆ, ತಮ್ಮನ್ನು ಟೀಕೆ ಮಾಡಿದ್ದಾರೆ ಎಂದು ಸಿಟ್ಟಾದ ಸಿ.ಟಿ.ರವಿ, ಅವಾಚ್ಯ ಪದ ಬಳಸಿದರು ಎಂದು ಕಾಂಗ್ರೆಸ್ ಸದಸ್ಯರು ದೂರಿದರು.

‘ಮಾತಿನ ಚಕಮಕಿ ನಡೆಯವಾಗ ನನ್ನ ವಿರುದ್ಧ ರವಿ ಅಸಾಂವಿಧಾನಿಕ ಪದ ಬಳಸಿದ್ದಾರೆ’ ಎಂದು ಲಕ್ಷ್ಮೀ ಹೆಬ್ಬಾಳಕರ ಗಂಭೀರ ಆರೋಪ ಮಾಡಿದರು. ಅಲ್ಲದೆ, ಸದನದಿಂದ ಹೊರಗೆ ಹೋಗಿ ಸಭಾಪತಿಗೆ ದೂರು ನೀಡಿದರು. ಆ ಬೆನ್ನಲ್ಲೇ, ಸಿ.ಟಿ. ರವಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಸಭಾಪತಿಗೆ ಕಾಂಗ್ರೆಸ್ ಸದಸ್ಯರು ಮನವಿ ಮಾಡಿದರು. ಲಕ್ಷ್ಮೀ ಹೆಬ್ಬಾಳಕರ ಅವರು ದೂರು ಸ್ವೀಕರಿಸಿದ ಸಭಾಪತಿ, ಆಡಿಯೊ ವಿಡಿಯೊ ಪರಿಶೀಲನೆಗೆ ಸೂಚನೆ ನೀಡಿದರು. ಏತನ್ಮಧ್ಯೆ, ರವಿಯವರ ಮೇಲೆ ಹಲ್ಲೆಗೆ ಯತ್ನ ನಡೆಸಿದ್ದು, ಅವರಿಗೆ ರಕ್ಷಣೆ ಕೊಡಬೇಕು ಎಂದು ಬಿಜೆಪಿ ನಾಯಕರು ಸಭಾಪತಿಗೆ ಮನವಿ ಮಾಡಿದರು.

ಸಭಾಪತಿ ತಮ್ಮ ಕೊಠಡಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಎಚ್‌.ಕೆ. ಪಾಟೀಲ, ಪ್ರಿಯಾಂಕ್ ಖರ್ಗೆ, ಎನ್.ಎಸ್‌. ಬೋಜರಾಜು, ಲಕ್ಷ್ಮಿ ಹೆಬ್ಬಾಳಕರ ಜತೆ ಮಾತುಕತೆ ನಡೆಸಿದರು. ನಂತರ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ. ಸಿ.ಟಿ. ರವಿ ಮತ್ತು ಬಿಜೆಪಿ–ಜೆಡಿಎಸ್‌ ಸದಸ್ಯರ ನಡುವೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು.

ಬಳಿಕ ಕಲಾಪ ಆರಂಭವಾಯಿತು. ಅನಿರ್ದಿಷ್ಟ ಕಾಲ ಕಲಾಪವನ್ನು ಸಭಾಪತಿ ಮುಂದೂಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.