ಹುಬ್ಬಳ್ಳಿ: ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಗುರುವಾರ ಮಳೆ ಬಿಡುವು ನೀಡಿತು. ಆದರೆ, ನದಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಗುರುವಾರ 43 ಸೇತುವೆಗಳು ಮುಳುಗಿವೆ. ಬಾಗಲಕೋಟೆ ಜಿಲ್ಲೆಯಲ್ಲಿ 12 ಸೇತುವೆಗಳು ಮುಳುಗಡೆಯಾಗಿವೆ.
ಘಟಪ್ರಭಾ ನದಿಯ 14, ದೂಧಗಂಗಾ ನದಿಯ 9, ಮಲಪ್ರಭಾ ಹಾಗೂ ಹಿರಣ್ಯಕೇಶಿ ನದಿಗಳ ತಲಾ 6, ಕೃಷ್ಣಾ ನದಿಯ 5, ಮಾರ್ಕಂಡೇಯ ನದಿಯ 2 ಮತ್ತು ವೇದಗಂಗಾ ನದಿಯ 1 ಸೇತುವೆ ಮುಳುಗಡೆ ಸ್ಥಿತಿಯಲ್ಲಿದೆ.
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ರಾಜಾಪುರ ಬ್ಯಾರೇಜ್‌ನಿಂದ 1.85 ಲಕ್ಷ ಕ್ಯೂಸೆಕ್ ನೀರು ಮತ್ತು ಸದಲಗಾ ಬಳಿ ದೂಧಗಂಗಾ ನದಿಯಿಂದ 40,832 ಕ್ಯೂಸೆಕ್ ನೀರು ಹರಿದು ಬರುತ್ತಿರುವ ಪರಿಣಾಮ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ–ಯಡೂರ ಸೇತುವೆ ಬಳಿ ಒಟ್ಟಾರೆ 2.26 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ದೂಧಗಂಗಾ ನದಿಯ ಯಕ್ಸಂಬಾ-ದಾನವಾಡ, ಸದಲಗಾ-ಬೋರಗಾಂವ ಸೇತುವೆ ಮುಳುಗಡೆಯಾದ ಕಾರಣ, ಕರ್ನಾಟಕ–ಮಹಾರಾಷ್ಟ್ರ ಮಧ್ಯೆ ಸಂಚಾರ ಕಡಿತಗೊಂಡಿದೆ. ಉಭಯ ರಾಜ್ಯಗಳಲ್ಲಿನ ಗ್ರಾಮಗಳಿಗೆ ತೆರಳಲು ಜನರು 25ರಿಂದ 30 ಕಿ.ಮೀ ಸುತ್ತು ಹಾಕಿಕೊಂಡು ಪ್ರಯಾಣಿಸಬೇಕಿದೆ.
ಘಟಪ್ರಭಾ ನದಿ ಉಕ್ಕಿ ಹರಿಯುತ್ತಿರುವ ಕಾರಣ, ಮೂಡಲಗಿ ತಾಲ್ಲೂಕಿನ ಮಸಗುಪ್ಪಿ ಸೇತುವೆ ಮುಳುಗಿದೆ. ಸುಣಧೋಳಿಯ ಜಡಿಸಿದ್ಧೇಶ್ವರ ಮಠದ ಆವರಣ, ಹುಣಶ್ಯಾಳ ಪಿ.ವೈ. ಗ್ರಾಮದ ಹನುಮಂತ ದೇವರ ದೇವಸ್ಥಾನ ಜಲಾವೃತಗೊಂಡಿವೆ.
ಘಟಪ್ರಭಾದಲ್ಲಿ ನೀರಿನ ಹರಿವು ಕಡಿಮೆಯಾಗಿದ್ದರೂ ಬಾಗಲಕೋಟೆ ಜಿಲ್ಲೆಯ ಮುಧೋಳದಿಂದ ಯಾದವಾಡ ಸಂಪರ್ಕಿಸುವುದು ಸೇರಿ 12 ಸೇತುವೆಗಳು ಮುಳುಗಡೆಯಾಗಿವೆ.
ಮುಧೋಳ ತಾಲ್ಲೂಕಿನ ನಂದಗಾಂವ, ಮಿರ್ಜಿಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಮುತ್ತೂರ, ತಮದಡ್ಡಿ, ಹಳಿಂಗಳಿ, ಶೂರ್ಪಾಲಿ ಗ್ರಾಮಸ್ಥರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.