ಬೆಳಗಾವಿ: ವೇದಿಕೆಯಲ್ಲೇ ASP ನಾರಾಯಣ ಭರಮನಿಗೆ ಹೊಡೆಯಲು ಮುಂದಾದ CM ಸಿದ್ದರಾಮಯ್ಯ!
ಬೆಳಗಾವಿ: ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಷಣಕ್ಕೆ ಬಿಜೆಪಿಯ ಆರು ಕಾರ್ಯಕರ್ತೆಯರು ಅಡ್ಡಿಪಡಿಸಿದರು. ಕಪ್ಪು ಬಾವುಟ ಪ್ರದರ್ಶಿಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಸಮಾವೇಶದಲ್ಲಿ ಅವ್ಯವಸ್ಥೆ ಮತ್ತು ಗೊಂದಲ ಆಗಿರುವುದು ಕಂಡು ಸಿಟ್ಟಿಗೆದ್ದ ಸಿದ್ದರಾಮಯ್ಯ ಅವರು, ಭದ್ರತೆ ನಿಗಾ ವಹಿಸಿದ್ದ ಪೊಲೀಸರತ್ತ ಕೈ ಮಾಡಿದರು. ಧಾರವಾಡದ ಎಎಸ್ಪಿ ನಾರಾಯಣ ಭರಮನಿ ಅವರು ವೇದಿಕೆ ಏರಿ ಬರುತ್ತಿದ್ದಂತೆಯೇ, ಅವರ ಮೇಲೆ ಕೈ ಎತ್ತಲು ಸಿದ್ದರಾಮಯ್ಯ ಮುಂದಾದರು. ಭರಮನಿ ತಕ್ಷಣವೇ ಹಿಂದೆ ಸರಿದರು.
‘ಯಾರಯ್ಯ ಬೆಳಗಾವಿ ಎಸ್ಪಿ? ಏನು ನಡೆಯುತ್ತಿದೆ ಇಲ್ಲಿ? ಏನ್ ಮಾಡುತ್ತಿದ್ದೀರಿ ನೀವೆಲ್ಲ’ ಎಂದು ಸಿದ್ದರಾಮಯ್ಯ ರೇಗಿದರು. ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಯ್ಯದ್ ನಾಸಿರ್ ಹುಸೇನ್ ಹಾಗೂ ಸಚಿವ ಎಚ್.ಕೆ.ಪಾಟೀಲ ಅವರು ಸಮಾಧಾನಪಡಿಸಿದರು.
ಈ ಎಲ್ಲದರ ಮಧ್ಯೆ ವೇದಿಕೆಯತ್ತ ನುಗ್ಗಲು ಯತ್ನಿಸಿದ ಬಿಜೆಪಿ ಕಾರ್ಯಕರ್ತೆಯರನ್ನು ಪೊಲೀಸರು ಹೊರಕ್ಕೆ ಎಳೆದೊಯ್ದರು. ಹೊರಗೆ ನಿಂತಿದ್ದ ಕಾಂಗ್ರೆಸ್‌ನ ಕಾರ್ಯಕರ್ತರು ಪೊಲೀಸ್ ವಾಹನಕ್ಕೆ ಮುತ್ತಿಗೆ ಹಾಕಿದರು. ಇದರಿಂದ ಸ್ಥಳದಲ್ಲಿ ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಯಿತು. ಸಿದ್ದರಾಮಯ್ಯ ಅವರು ಕೆಲಹೊತ್ತು ಭಾಷಣ ನಿಲ್ಲಿಸಿದರು.
ಸಮಾವೇಶದ ಬಳಿಕ ಪೊಲೀಸ್ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ‘ನಮ್ಮ ಸಮಾವೇಶದಲ್ಲಿ ಬಿಜೆಪಿಯವರನ್ನು ಹೇಗೆ ಬಿಟ್ಟಿರಿ? ಇಷ್ಟು ಜನ ಪೊಲೀಸರು ಏನು ಮಾಡುತ್ತಿದ್ದೀರಿ? ಈ ಲೋಪಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಡಿಸಿಪಿ ರೋಹನ್ ಜಗದೀಶ ಅವರಿಗೆ ತಾಕೀತು ಮಾಡಿದರು.
ಬಿಜೆಪಿಯ ಪಾಕ್ ಪ್ರೇಮ: ಸುರ್ಜೆವಾಲಾ
‘ಬಿಜೆಪಿಯ ಪಾಕ್ ಪ್ರೇಮವನ್ನು ದೇಶದ ಜನ ನೆನಪಿಸಿಕೊಳ್ಳಬೇಕು. ಉಗ್ರರ ದಾಳಿಗೆ ಬಿಜೆಪಿ ಸರ್ಕಾರ ನಿರುತ್ತರವಾಗಿದೆ. ನಮ್ಮ ಸಮಾವೇಶದಲ್ಲಿ ಕೂಗಾಡಿ ಅವರ ವೈಫಲ್ಯ ಮರೆಮಾಚಲು ಸಾಧ್ಯವಿಲ್ಲ’ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದರು.
‘ಬಿಜೆಪಿಗೂ ಉಗ್ರರಿಗೂ ನಂಟಿದೆಯೇ? ಕೇಂದ್ರದಲ್ಲಿ ಬಿಜೆಪಿಯ ಸರ್ಕಾರ ಇದ್ದಾಗಲೇ ಏಕೆ ಉಗ್ರರ ದಾಳಿಗಳಾಗುತ್ತವೆ’ ಎಂಬ ಪ್ರಶ್ನೆ ಜನರಲ್ಲಿ ಮೂಡತೊಡಗಿದೆ. ಸಂಸತ್ತಿನ ಮೇಲಿನ ದಾಳಿ, ಪಟಾನ್‌ಕೋಟ್, ಉರಿ, ನಗರೋಟಾ, ಅಮರನಾಥ್ ಯಾತ್ರೆ, ಪುಲ್ವಾಮಾ ಘಟನೆಗಳು ಬಿಜೆಪಿ ಸರ್ಕಾರದ ಅವಧಿಯಲ್ಲೇ ನಡೆದಿವೆ. ಈಗ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಡೆದಿದ್ದು, ಕರ್ನಾಟಕದ ಪ್ರವಾಸಿಗರ ಹತ್ಯೆಯಾಗಿದೆ. ಬಿಜೆಪಿಯ ಪಾಕ್ ಪ್ರೇಮವನ್ನು ಜನ ಪ್ರಶ್ನೆ ಮಾಡುತ್ತಿದ್ದಾರೆ’ ಎಂದರು.
ಬಿಜೆಪಿ ಕಾರ್ಯಕರ್ತೆಯರಿಗೆ ಜಾಮೀನು
ಕಪ್ಪು ಬಟ್ಟೆ ಪ್ರದರ್ಶಿಸಿದ್ದು ಅಲ್ಲದೇ ಸಮಾವೇಶದ ವೇದಿಕೆಯತ್ತ ನುಗ್ಗಲು ಯತ್ನಿಸಿದ ಬಿಜೆಪಿಯ ಶಿಲ್ಪಾ ಎಂಬುವರು ಸೇರಿ ಆರು ಕಾರ್ಯಕರ್ತೆಯರ ವಿರುದ್ಧ ಬಿಎನ್‌ಎಸ್ 189(1)(C), ಬಿಎನ್ಎಸ್ 352 ಅಡಿ ಪ್ರಕರಣ ದಾಖಲಿಸಲಾಗಿದೆ.
ಶಿಲ್ಪಾ ಕೇಕ್ರೆ, ಪವಿತ್ರಾ ಹಿರೇಮಠ, ರೇಷ್ಮಾ ಬರಮೂಚೆ, ಮಂಜುಳಾ ಹಣ್ಣೀಕೇರಿ, ಅನ್ನಪೂರ್ಣಾ ಹವಳ ಮತ್ತು ಸುಮಿತ್ರಾ ಜಾಲಗಾರ್ ಆರೋಪಿಗಳು. ಕ್ಯಾಂಪ್ ಠಾಣೆ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಂತೆಯೇ ಬಿಜೆಪಿ ನಾಯಕರು ಜಾಮೀನು ಅರ್ಜಿ ಸಲ್ಲಿಸಿದರು. ಅವರಿಗೆ ಇಲ್ಲಿನ ಐದನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಸ್ಪರ್ಷಾ ಡಿಸೋಜಾ ಅವರು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದರು.
‘ದುಃಖಿಸುವ ಬದಲು ಪ್ರತಿಭಟನೆ ಸರಿಯೇ?’
‘ಭಯೋತ್ಪಾದಕರ ಕೃತ್ಯಕ್ಕೆ ದೇಶವೇ ದುಃಖದಲ್ಲಿದೆ. ಇಂಥ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರವೇ ಪ್ರತಿಭಟನೆಗೆ ಮುಂದಾಗಿದ್ದು ಸರಿಯೇ’ ಎಂದು ಶಾಸಕ ಅಭಯ ಪಾಟೀಲ ಪ್ರಶ್ನಿಸಿದರು.
‘ನಮ್ಮ ಕಾರ್ಯಕರ್ತೆಯರು ಘೋಷಣೆ ಕೂಗಿದ್ದಾರೆ. ಸಿ.ಎಂ.ಗೆ ಕಲ್ಲು ಎಸೆದಿಲ್ಲ. ಅವರನ್ನು ಎಳೆದಾಡಿ, ಬಂಧಿಸಿದ್ದಾರೆ. ಆದರೆ, ಸಿದ್ದರಾಮಯ್ಯ ಅವರೇ ಅಧಿಕಾರಿಯನ್ನು ಹೊಡೆಯಲು ಹೋಗಿದ್ದಾರಲ್ಲ; ಇವರ ಮೇಲೆ ಯಾವ ಪ್ರಕರಣ ದಾಖಲಿಸಬೇಕು? ಇದು ಹಿಟ್ಲರ್ ಸರ್ಕಾರ’ ಎಂದರು.
‘ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಸಿ.ಎಂ ವಿರುದ್ಧ ಘೋಷಣೆ ಕೂಗಿದ್ದಕ್ಕೆ ಬಂಧಿಸಿ, ಹಲ್ಲೆ ನಡೆಸಿದ್ದು ಸರಿಯಲ್ಲ’ ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಖಂಡಿಸಿದರು.
ಬಿಜೆಪಿಯವರ ಪ್ರವೃತ್ತಿ ಹೀಗೆ ಮುಂದುವರಿದರೆ ರಾಜ್ಯದಲ್ಲಿ ಅವರ ಒಂದು ಸಭೆಗೂ ಅವಕಾಶ ನೀಡಲ್ಲ. ಇದು ಕಾಂಗ್ರೆಸ್ ಪ್ರತಿಜ್ಞೆ. ಬಿಜೆಪಿ ನಾಯಕರೇ, ನಿಮ್ಮ ಕಾರ್ಯಕರ್ತರಿಗೆ ಬುದ್ದಿ ಹೇಳಿ. ಇದು ಎಚ್ಚರಿಕೆ.ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ
ಒಬ್ಬ ಮುಖ್ಯಮಂತ್ರಿ ಪೊಲೀಸ್ ಅಧಿಕಾರಿಯನ್ನು ಇಷ್ಟು ಕೀಳಾಗಿ ನಡೆಸಿಕೊಳ್ತಾರಾ? ಅಧಿಕಾರಿಗಳು ಸರ್ಕಾರದ ಕೈಬೊಂಬೆನಾ? ಸಿದ್ದರಾಮಯ್ಯರ ದುರಹಂಕಾರ ಅಂದ್ರೆ ಇದೇನೇ..ಆರ್.ಅಶೋಕ, ವಿರೋಧಪಕ್ಷದ ನಾಯಕ
ಒಬ್ಬ ದಕ್ಷ ಪೊಲೀಸ್ ಅಧಿಕಾರಿಯನ್ನು ವೇದಿಕೆ ಮೇಲೆ ಕರೆದು ಕಪಾಳಮೋಕ್ಷ ಮಾಡಲು ಮುಂದಾಗಿದ್ದು ಮುಖ್ಯಮಂತ್ರಿಗೆ ಶೋಭೆ ತರುವುದಿಲ್ಲ. ಸಿದ್ದರಾಮಯ್ಯ ಮನಸ್ಸು ವಿಚಲಿತವಾಗಿದೆ..ಜಗದೀಶ ಶೆಟ್ಟರ್, ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.