ADVERTISEMENT

‘ದಾಖಲೆ’ ಸಂಕಷ್ಟ: ಸಿಗದ ಪರಿಹಾರ

ಮಾನವೀಯತೆಗಿಂತ ‘ಕಾಗದಪತ್ರ’ಗಳೇ ಮುಖ್ಯ! * ನೆರೆ ಸಂತ್ರಸ್ತರ ಗೋಳು

ಎಂ.ಮಹೇಶ
Published 21 ಫೆಬ್ರುವರಿ 2020, 21:43 IST
Last Updated 21 ಫೆಬ್ರುವರಿ 2020, 21:43 IST
ಕೃಷ್ಣಾ ನದಿ ಪ್ರವಾಹಕ್ಕೆ ತುತ್ತಾಗಿದ್ದ ಚಿಕ್ಕೋಡಿ ತಾಲ್ಲೂಕಿನ ಮಾಂಜರಿಯ ಪರಿಶಿಷ್ಟರ ಕಾಲೊನಿಯ ಕುಟುಂಬವೊಂದು ಇಟ್ಟಿಗೆಗಳನ್ನು ಜೋಡಿಸಿ ನಿರ್ಮಿಸಿದ ತಾತ್ಕಾಲಿಕ ಶೆಡ್‌ನಲ್ಲಿ ವಾಸಿಸುತ್ತಿದೆ – ಪ್ರಜಾವಾಣಿ ಚಿತ್ರ
ಕೃಷ್ಣಾ ನದಿ ಪ್ರವಾಹಕ್ಕೆ ತುತ್ತಾಗಿದ್ದ ಚಿಕ್ಕೋಡಿ ತಾಲ್ಲೂಕಿನ ಮಾಂಜರಿಯ ಪರಿಶಿಷ್ಟರ ಕಾಲೊನಿಯ ಕುಟುಂಬವೊಂದು ಇಟ್ಟಿಗೆಗಳನ್ನು ಜೋಡಿಸಿ ನಿರ್ಮಿಸಿದ ತಾತ್ಕಾಲಿಕ ಶೆಡ್‌ನಲ್ಲಿ ವಾಸಿಸುತ್ತಿದೆ – ಪ್ರಜಾವಾಣಿ ಚಿತ್ರ   

ಬೆಳಗಾವಿ: ಜಿಲ್ಲೆಯಲ್ಲಿ ನೆರೆ ಹಾಗೂ ಅತಿವೃಷ್ಟಿಯಿಂದ ಸಂತ್ರಸ್ತರಾದ ನೂರಾರು ಮಂದಿಗೆ, ದಾಖಲೆಗಳು ಇಲ್ಲ ಅಥವಾ ಸಮರ್ಪಕವಾಗಿಲ್ಲ ಎಂಬ ಕಾರಣಕ್ಕೆ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ.

ಕಳೆದ ವರ್ಷ ಆಗಸ್ಟ್‌, ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ನಲ್ಲಿ ಮೂರು ಬಾರಿ ಪ್ರವಾಹ ಉಂಟಾಗಿತ್ತು. ಸಾವಿರಾರು ಮಂದಿ ಮನೆ, ಬೆಳೆ ಕಳೆದುಕೊಂಡಿದ್ದರು. ನೆರೆ ಮತ್ತು ಅತಿವೃಷ್ಟಿಯಿಂದಾಗಿ, ಎಲ್ಲ ತಾಲ್ಲೂಕುಗಳೂ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದವು. ಇದಾಗಿ ಆರು ತಿಂಗಳುಗಳೇ ಕಳೆದಿದ್ದರೂ ಪರಿಹಾರ ವಿತರಣೆಯು ಸಮರ್ಪಕವಾಗಿ ನಡೆದಿಲ್ಲದಿರುವುದು ಸಂತ್ರಸ್ತರ ಅಸಮಾಧಾನಕ್ಕೆ ಕಾರಣವಾಗಿದೆ.

ಅಧಿಕಾರಿಗಳು, ಎಲ್ಲವನ್ನೂ ಕಳೆದುಕೊಂಡ ಸಂತ್ರಸ್ತರಿಂದ ದಾಖಲೆಗಳನ್ನು ಕೇಳುತ್ತಿದ್ದು, ಹಲವರಿಗೆ ಪರಿಹಾರ ಮರೀಚಿಕೆಯಾಗಿಯೇ ಉಳಿದಿದೆ. ಇದನ್ನು ಖಂಡಿಸಿ, ಅಲ್ಲಲ್ಲಿ ಪ್ರತಿಭಟನೆಗಳು ಕೂಡ ನಡೆಯುತ್ತಿವೆ. ಫಲಾನುಭವಿಗಳ ಪಟ್ಟಿ ಸಿದ್ಧಪಡಿಸುವಲ್ಲಿ ಅಧಿಕಾರಿ
ಗಳು ಅಕ್ರಮ ಎಸಗಿದ್ದಾರೆ, ಅರ್ಹರ ಬದಲಿಗೆ ಅನರ್ಹರನ್ನು ಪಟ್ಟಿಗೆ ಸೇರಿಸಿದ್ದಾರೆ ಎಂಬ ಆರೋಪಗಳು ಕೂಡ ಕೇಳಿಬರುತ್ತಿವೆ.

ADVERTISEMENT

44ಸಾವಿರ ಮನೆಗಳು: ನೆರೆ ಹಾಗೂ ಆತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ 44 ಸಾವಿರ ಮನೆಗಳು ಹಾನಿಯಾಗಿದ್ದವು. ಈ ಪೈಕಿ ನಿಯಮಾವಳಿ ಪ್ರಕಾರ 42 ಸಾವಿರ ‘ಅರ್ಹ’ ಫಲಾನುಭವಿಗಳು ಎಂದು ಜಿಲ್ಲಾಡಳಿತ ಗುರುತಿಸಿದೆ. ‘ಅವರಿಗೆ ₹ 311.57 ಕೋಟಿಯನ್ನು ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗಿದೆ’ ಎಂದು ಜಿಲ್ಲಾಡಳಿತ ತಿಳಿಸಿದೆ. ಉಳಿದವರು ಪರಿಹಾರಕ್ಕಾಗಿ ಚಾತಕ ‍‍ಪಕ್ಷಿಗಳಂತೆ ಕಾಯುತ್ತಿದ್ದಾರೆ.

‘ವಾರ್ಸಾ, ಪಡಿತರ ಚೀಟಿ, ಆಧಾರ್‌ ಕಾರ್ಡ್‌ ಮೊದಲಾದ ದಾಖಲೆ ಇಲ್ಲದ ಅಥವಾ ದಾಖಲೆಗಳು ತಾಳೆ ಹೊಂದಿಲ್ಲದ ಮೂರು ಸಾವಿರ ಮಂದಿಗೆ ಪರಿಹಾರ ಸಿಕ್ಕಿಲ್ಲದಿರುವುದು ನಿಜ. ಅವಿಭಕ್ತ ಕುಟುಂಬಗಳಲ್ಲಿ ಯಾರಿಗೆ ಪರಿಹಾರ ಕೊಡಬೇಕು ಎನ್ನುವ ಗೊಂದಲವೂ ಇದೆ; ಸಹೋದರರ ನಡುವೆ ವ್ಯಾಜ್ಯಗಳಿವೆ. ಕೆಲವರಿಂದ ತಕರಾರು ಅರ್ಜಿಗಳು ಕೂಡ ಸಲ್ಲಿಕೆಯಾಗಿವೆ. ಅಂಥವರಿಗೆ ಮನೆಗಳ ಮರು ನಿರ್ಮಾಣಕ್ಕೆ ಪರಿಹಾರ ಕೊಡಲಾಗಿಲ್ಲ. ದಾಖಲೆಗಳು ಇಲ್ಲದವರ ವಿಷಯದಲ್ಲಿ ಮುಂದೇನು ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ಸ್ಪಷ್ಟವಾಗಿ ತಿಳಿಸುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸರ್ಕಾರದ ನಿರ್ದೇಶನದಂತೆ ಕ್ರಮ ವಹಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸಂಪೂರ್ಣ ಬಿದ್ದಿರುವ ಮನೆಗಳನ್ನು ‘ಎ’ ವರ್ಗದಲ್ಲಿ ಸೇರಿಸಲಾಗಿದೆ. ಅವರಿಗೆ ಮೊದಲ ಹಂತದಲ್ಲಿ ₹ 1 ಲಕ್ಷ ಕೊಡಲಾಗಿದೆ. ಒಟ್ಟು
₹ 5 ಲಕ್ಷ ದೊರೆಯಲಿದೆ. ಭಾಗಶಃ ಹಾನಿಯಾಗಿರುವವರು ಮನೆ ದುರಸ್ತಿ ಮಾಡಿಕೊಂಡರೆ ₹ 3 ಲಕ್ಷವಷ್ಟೇ ಸಿಗಲಿದೆ’ ಎಂದು ಮಾಹಿತಿ ನೀಡಿದರು.

7ಸಾವಿರ ಮಂದಿಗಷ್ಟೇ ಪರಿಹಾರ
ಕೊಚ್ಚಿ ಹೋದ ಮನೆಗಳ ಮರುನಿರ್ಮಾಣಕ್ಕೆ ಹಂತ ಹಂತವಾಗಿ ಗರಿಷ್ಠ ₹ 5 ಲಕ್ಷ ಪರಿಹಾರ ನೀಡಲಾಗುವುದು ಎಂದು ಸರ್ಕಾರ ಘೋಷಿಸಿದೆ. ಮೊದಲ ಹಂತದಲ್ಲಿ ₹ 1 ಲಕ್ಷ ಕೊಡಲಾಗಿದೆ. ಹಲವು ಕಡೆಗಳಲ್ಲಿ ಮನೆಗಳ ಮರುನಿರ್ಮಾಣ ಕಾಮಗಾರಿ ನಡೆದಿದೆ. 2ನೇ ಹಂತದಲ್ಲಿನ ಪರಿಹಾರವನ್ನು 7ಸಾವಿರ ಮಂದಿಗಷ್ಟೇ ನೀಡಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.