ಬೆಂಗಳೂರು: ‘ಬೆಳಗಾವಿಯಲ್ಲಿ ಮರಾಠಿ ಭಾಷಿಕರಿಂದ ನಡೆದ ಹಲ್ಲೆ ಕುರಿತಂತೆ ಮಹಾರಾಷ್ಟ್ರ ಸರ್ಕಾರದ ಜೊತೆ ಮಾತನಾಡಲು ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ’ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
ಮುಖ್ಯಮಂತ್ರಿಯನ್ನು ಮಂಗಳವಾರ ಭೇಟಿ ಮಾಡಿದ ರಾಮಲಿಂಗಾ ರೆಡ್ಡಿ, ಎಂಇಎಸ್ ಕಾರ್ಯಕರ್ತರು ಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ್ದರ ಕುರಿತು ಚರ್ಚೆ ನಡೆಸಿದರು.
ಬಳಿಕ ಮಾತನಾಡಿದ ರೆಡ್ಡಿ, ‘ಮಹಾರಾಷ್ಟ್ರಕ್ಕೆ ನಿತ್ಯ ಹೋಗುತ್ತಿದ್ದ ನಮ್ಮ 509 ಮತ್ತು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುತ್ತಿದ್ದ 130 ಬಸ್‌ಗಳ ಸಂಚಾರ ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ’ ಎಂದರು.
‘ನಮ್ಮ ರಾಜ್ಯದ ಬಸ್ಸೊಂದಕ್ಕೆ ಮಹಾರಾಷ್ಟ್ರದವರು ಕಪ್ಪು ಮಸಿ ಬಳಿದಿದ್ದಾರೆ. ಮಹಾರಾಷ್ಟ್ರ ಬಸ್‌ಗೆ ನಮ್ಮವರು ಯಾವುದೇ ಬಣ್ಣ ಬಳಿದಿಲ್ಲ. ಎಲ್ಲ ವಿಚಾರಗಳನ್ನು ಮುಖ್ಯಮಂತ್ರಿಯ ಗಮನಕ್ಕೆ ತಂದಿದ್ದೇನೆ. ಮಹಾರಾಷ್ಟ್ರದ ಪೊಲೀಸ್ ನಿರ್ದೇಶಕರ ಜೊತೆ ತಕ್ಷಣ ಮಾತನಾಡುವಂತೆ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್‌ಗೆ ಹಾಗೂ ಸರ್ಕಾರದ ಜೊತೆ ಮಾತನಾಡುವಂತೆ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸೂಚಿಸಿದರು’ ಎಂದರು.
‘ಮಹಾರಾಷ್ಟ್ರದವರಿಗೆ ಅನ್ಯಾಯ ಆಗಿದ್ದರೆ ಪ್ರತಿಭಟನೆ ಮಾಡಲಿ. ಅದನ್ನು ಬಿಟ್ಟು ಬಸ್ಗಳಿಗೆ ಹಾನಿ ಮಾಡುವುದು ಸರಿಯಲ್ಲ. ಮೊದಲಿನಂತೆ ಈಗ ಎಂಇಎಸ್ ಪ್ರಭಾವ ಇಲ್ಲ. ಹಿಂದೆ ಆ ಪಕ್ಷದಿಂದ ಶಾಸಕರು ಆಯ್ಕೆಯಾಗುತ್ತಿದ್ದರು. ಮಹಾನಗರ ಪಾಲಿಕೆಯಲ್ಲೂ ಅವರಿಗೆ ಹಿಡಿತ ಇಲ್ಲ. ಎಂಇಎಸ್ ಪುಂಡರ ಹಾವಳಿ ತಡೆಯುವಂತೆ ಗೃಹ ಸಚಿವರು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ’ ಎಂದೂ ಹೇಳಿದರು.
ಕನ್ನಡ ಮಾತನಾಡಿ ಎಂದವರ ಮೇಲೆ ಹಲ್ಲೆಯಾಗುತ್ತದೆ ಎಂಬುದು ಆಘಾತ ಮತ್ತು ಆತಂಕವನ್ನುಂಟು ಮಾಡಿದೆ. ಗಡಿ ಭಾಗದ ಕನ್ನಡಿಗರಿಗೆ ಸೂಕ್ತ ರಕ್ಷಣೆ ಒದಗಿಸಬೇಕು..–ಮಹೇಶ ಜೋಶಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ
ಬೆಳಗಾವಿಯ ಜನಪ್ರತಿನಿಧಿಗಳು ಮತಗಳ ಆಸೆಗೆ ಮರಾಠಿಗರ ಜತೆ ಒಳಒಪ್ಪಂದ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು.–ಟಿ.ಎ.ನಾರಾಯಣಗೌಡ, ಅಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ
ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿರುವ ಶಿವಸೇನಾವನ್ನು ಕೇಂದ್ರ ನಿಷೇಧಿಸಬೇಕು. ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮರಾಠಿಯಲ್ಲಿ ಮಾತನಾಡುವುದನ್ನು ಬಿಡಬೇಕು.–ಪ್ರವೀಣ ಶೆಟ್ಟಿ, ಅಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ
ಕನ್ನಡ, ಮರಾಠಿ ಭಾಷಾ ಬಾಂಧವ್ಯ ಹದಗೆಡಿಸುವ ಮಹಾರಾಷ್ಟ್ರದ ಸಂಘಟನೆಗಳಿಗೆ ರಾಜ್ಯದಲ್ಲಿ ಅವಕಾಶ ಕೊಡಬಾರದು.–ಬಸವ ಜಯಮೃತ್ಯುಂಜಯ ಸ್ವಾಮೀಜಿ, ಲಿಂಗಾಯತ ಪಂಚಮಸಾಲಿ ಪೀಠ
ಬೆಳಗಾವಿಯಲ್ಲಿ ಕೆಲ ರಾಜಕಾರಣಿಗಳು ಎಂಇಎಸ್ ಕುರಿತು ಮೃದು ಧೋರಣೆ ಹೊಂದಿದ್ದಾರೆ. ಎಂಇಎಸ್ ನಿಷೇಧಕ್ಕೆ ಸರ್ಕಾರ ಹಿಂಜರಿಯಬಾರದು.–ಬಸವರಾಜ ಹೊರಟ್ಟಿ, ವಿಧಾನ ಪರಿಷತ್ತಿನ ಸಭಾಪತಿ
‘ಪೋಕ್ಸೊ ಪ್ರಕರಣ ಹಿಂಪಡೆಯುತ್ತೇವೆ’
‘ಬಸ್ ನಿರ್ವಾಹಕನ ವಿರುದ್ಧ ದಾಖಲಿಸಿದ ಪೋಕ್ಸೊ ಪ್ರಕರಣ ಹಿಂಪಡೆಯುವುದಾಗಿ ಬಾಲಕಿ ಪಾಲಕರು ವಿಡಿಯೊ ಹೇಳಿಕೆ ನೀಡಿದ್ದಾರೆ. ಇದನ್ನು ಸಾಕ್ಷ್ಯವಾಗಿ ಬಳಸಿಕೊಳ್ಳಲಾಗುವುದು’ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದರು.
‘ಪಾಲಕರು ಸ್ವಪ್ರೇರಣೆಯಿಂದ ಪ್ರಕರಣ ಹಿಂಪಡೆಯಲು ಇಚ್ಛಿಸಿದ್ದಾರೆ. ಬಸ್‌ನಲ್ಲಿ ಕಂಡಕ್ಟರ್ ಮತ್ತು ತಮ್ಮ ಮಗಳ ನಡುವೆ ಜಗಳವಾಗಿದೆ. ಇದು ಕನ್ನಡ– ಮರಾಠಿಗರ ಜಗಳ ಅಲ್ಲ ಎಂಬ ಸಂದೇಶವನ್ನು ವಿಡಿಯೊದಲ್ಲಿ ತಿಳಿಸಿದ್ದಾರೆ’ ಎಂದರು.
‘ಪ್ರಕರಣದಲ್ಲಿ ಸರಿಯಾದ ಕ್ರಮವಹಿಸದ ಕಾರಣ ಮಾರಿಹಾಳ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ಅವರನ್ನು ವರ್ಗ ಮಾಡಲಾಗಿದೆ’ ಎಂದು ತಿಳಿಸಿದರು.
ಎಂಇಎಸ್, ಶಿವಸೇನಾ ವಿರುದ್ಧ ಕರವೇ ಆಕ್ರೋಶ
ಬೆಳಗಾವಿ: ಬಸ್ ನಿರ್ವಾಹಕನ ಮೇಲೆ ಹಲ್ಲೆ, ಪೋಕ್ಸೊ ಪ್ರಕರಣ ದಾಖಲಿಸಿದ್ದನ್ನು , ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎ.ನಾರಾಯಣಗೌಡ ಬಣ ಮತ್ತು ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು. ಮಹಾರಾಷ್ಟ್ರದ ವಿರುದ್ಧ ಧಿಕ್ಕಾರ ಕೂಗಿದರು.
ರಾಣಿ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ಸಣ್ಣ ಬಾಳೇಕುಂದ್ರಿಗೆ ಹೋಗಲು ಮುಂದಾದಾಗ, ಅವರನ್ನು ಪೊಲೀಸರು ವಶಕ್ಕೆ ಪಡೆದರು. ನಂತರ ಬಿಡುಗಡೆ ಮಾಡಿದರು.
ರಾಣಿ ಚನ್ನಮ್ಮ ವೃತ್ತ ವೃತ್ತದಲ್ಲಿ ಪ್ರತಿಭಟಿಸಿದ ನಾರಾಯಣಗೌಡ ಬಣದ ಕಾರ್ಯಕರ್ತರು, ಕನ್ನಡದ ಬಾವುಟಗಳನ್ನು ಬೀಸಿ ಜೈಕಾರ ಕೂಗಿದರು. ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ಮುಖಂಡರಾದ ಸುರೇಶ ಗವನ್ನ ವರ, ಪ್ರಮೋದ ಹೊಸಮನಿ, ರುದ್ರಗೌಡ ಪಾಟೀಲ ಇದ್ದರು.
4ನೇ ದಿನವು ಬಸ್ ಸ್ಥಗಿತ: ಕರ್ನಾಟಕ– ಮಹಾರಾಷ್ಟ್ರ ನಡುವಿನ ಬಸ್‌ಗಳ ಸಂಚಾರ 4ನೇ ದಿನವಾದ ಮಂಗಳವಾರವೂ ಸ್ಥಗಿತವಾಗಿತ್ತು. ಬಸ್‌ಗಳು ಆಯಾ ರಾಜ್ಯಗಳ ಗಡಿಗಳವರೆಗಷ್ಟೇ ಸಂಚರಿಸಿದವು.
ಮಹಾರಾಷ್ಟ್ರ ಬಸ್‌ಗೆ ಮಸಿ: ಕೂಡಲಸಂಗಮ (ಬಾಗಲಕೋಟೆ ಜಿಲ್ಲೆ): ಚಿತ್ರದುರ್ಗ-ಸೋಲಾಪುರ ಹೆದ್ದಾರಿ–50ರ ಕೂಡಲಸಂಗಮ ಕ್ರಾಸ್‌ನಲ್ಲಿ ಕರವೇ ಕಾರ್ಯಕರ್ತರು ಸೋಮವಾರ ರಾತ್ರಿ ಮಹಾರಾಷ್ಟ್ರ ಸಾರಿಗೆ ಬಸ್ ತಡೆದು, ಫಲಕದ ಮೇಲೆ ಕಪ್ಪು ಮಸಿ ಬಳಿದರು.
ಚಾಲಕ, ನಿರ್ವಾಹಕನಿಗೆ ಕನ್ನಡ ಶಾಲು ಹಾಕಿ, ಧ್ವಜ ನೀಡಿ ‘ಜೈ ಕರ್ನಾಟಕ, ಜೈ ಕನ್ನಡ’ ಎಂಬ ಘೋಷಣೆ ಹೇಳಿಸಿದರು. ಮರಾಠಿ ನಾಮಫಲಕಗಳಿಗೆ ಮಸಿ ಬಳಿದು ‘ಜೈ ಕರ್ನಾಟಕ, ಜೈ ಕನ್ನಡ’ ಎಂದು ಬರೆದು, ಕನ್ನಡ ಬಾವುಟ ಹಾರಿಸಿದರು. ನಂತರ ಬಸ್ ಬೆಂಗಳೂರಿಗೆ ತೆರಳಲು ಬಿಟ್ಟರು.
ಕರವೇ ಕೂಡಲಸಂಗಮ ಘಟಕದ ಅಧ್ಯಕ್ಷ ಸಂಜು ಗೌಡರ, ಪದಾಧಿಕಾರಿಗಳಾದ ಪ್ರವೀಣ ವಾಲಿಕಾರ, ಸೋಹಿಲ್ ಸುತ್ತಾರ, ಮಂಜು ವಡ್ಡರ, ಸಂಗಮೇಶ ಹೊತ್ತಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.